ಬೆಂಗಳೂರು: ನಗರದಲ್ಲಿನ ಭಾರೀ ಪ್ರಮಾಣದ ವಾಹನ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಮತ್ತು ನಗರದ ಸೌಂದರ್ಯ ವೃದ್ಧಿಸುವ ದೃಷ್ಟಿಯಿಂದ ಸುಮಾರು 12 ಪ್ರಮುಖ ವೃತ್ತಗಳನ್ನು ಅಭಿವೃದ್ಧಿಪಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಧರಿಸಿದೆ. ಬೆಂಗಳೂರಿನ ವಾಯುಮಾಲಿನ್ಯ ಪ್ರಮಾಣವನ್ನು ತಗ್ಗಿಸಲು 42 ಕಾರಂಜಿಗಳನ್ನು ನಿರ್ಮಿಸಲು ನಿರ್ಣಯ ಕೈಗೊಂಡ ಬೆನ್ನಲ್ಲೇ ವೃತ್ತಗಳನ್ನು ಅಂದಗಾಣಿಸಲು ಬಿಬಿಎಂಪಿ ತೀರ್ಮಾನಿಸಿರುವುದು ಅಭಿವೃದ್ಧಿ ಚಟುವಟಿಕೆಗಳಿಗೆ ಚುರುಕು ನೀಡಿದೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡುವುದರೊಂದಿಗೆ ಪ್ರಯಾಣಿಕರಿಗೆ ರಸ್ತೆಯ ಸುತ್ತಮುತ್ತಲು ನಗರದ ಗತ ವೈಭವ, ಐತಿಹಾಸಿಕ ಘಟನೆಗಳನ್ನು ಪರಿಚಯಿಸುವ ದೃಶ್ಯಗಳನ್ನು ಮರು ಸೃಷ್ಟಿಸಬೇಕು ಎಂಬ ನಿಟ್ಟಿನಲ್ಲಿ ಬಿಬಿಎಂಪಿ ಆಲೋಚಿಸುತ್ತಿದೆ. ಇತ್ತೀಚೆಗಷ್ಟೇ ಐಟಿಸಿ ವಿಂಡ್ಸರ್ ವೃತ್ತವನ್ನು ಸುಮಾರು ₹1 ಕೋಟ ವೆಚ್ಚದಲ್ಲಿ ಬಿಬಿಎಂಪಿ ಮೇಲ್ದರ್ಜೆಗೆ ಏರಿಸಿದ್ದು, ಅದೇ ಮಾದರಿಯಲ್ಲಿ ಉಳಿದ 12 ಪ್ರಮುಖ ವೃತ್ತಗಳ ಅಭಿವೃದ್ಧಿಯೂ ಆಗಲಿದೆ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಹೇಳಿದ್ದಾರೆ.
ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಲು ಸೋಮವಾರ ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಸಭೆ ನಡೆಸಲಾಗಿದ್ದು, ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ, ಬಿಬಿಎಂಪಿ ಕಮಿಷನರ್ ಎನ್. ಮಂಜುನಾಥ್ ಪ್ರಸಾದ್, ಬಿಬಿಎಂಪಿ ಮುಖ್ಯ ಇಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಸೇರಿದಂತೆ ಕೆಲ ಕಲಾವಿದರು ಸಹ ಸಭೆಯಲ್ಲಿ ಪಾಲ್ಗೊಂಡು ಯೋಜನೆಯ ಬಗ್ಗೆ ಚರ್ಚಿಸಿದ್ದಾರೆ.
ಅಭಿವೃದ್ಧಿಪಡಿಸಲು ಬಿಬಿಎಂಪಿ ಗುರುತಿಸಿರುವ ವೃತ್ತಗಳ ಪಟ್ಟಿ ಹೀಗಿದೆ: ಚಾಲುಕ್ಯ ವೃತ್ತ, ಮೈಸೂರು ಬ್ಯಾಂಕ್ ವೃತ್ತ, ಲಾಲ್ಬಾಗ್ ಪಶ್ಚಿಮ ದ್ವಾರ, ಕ್ವೀನ್ಸ್ ಸ್ಟ್ಯಾಚ್ಯೂ ವೃತ್ತ (ಕಬ್ಬನ್ ಪಾರ್ಕ್), ಅನಿಲ್ ಕುಂಬ್ಳೆ ವೃತ್ತ, ಟ್ರಿನಿಟಿ ವೃತ್ತ, ಕಮ್ಮನಹಳ್ಳಿ ವೃತ್ತ, ಬಾಣಸವಾಡಿ ಮುಖ್ಯ ರಸ್ತೆ ಜಂಕ್ಷನ್ (100 ಅಡಿ ರಸ್ತೆ), ಕೋಲ್ಸ್ ರಸ್ತೆ, ಮಸೀದಿ ರಸ್ತೆ ಜಂಕ್ಷನ್, ನವರಂಗ್ ಜಂಕ್ಷನ್, ಕೃಪಾನಿಧಿ ಕಾಲೇಜ್ ಜಂಕ್ಷನ್, ಮಾಗಡಿ ರಸ್ತೆ ಜಂಕ್ಷನ್, ಅರಮನೆ ರಸ್ತೆ, ಎಂವಿ ಜಯರಾಮ್ ರಸ್ತೆ ಜಂಕ್ಷನ್ಗಳನ್ನು ಮೇಲ್ದರ್ಜೆಗೆ ಏರಿಸಲು ಗುರುತು ಮಾಡಲಾಗಿದೆ.
ಚಾಲುಕ್ಯ ಸರ್ಕಲ್ನಲ್ಲಿ ಚಾಲುಕ್ಯ ಪ್ರತಿಮೆ, ಅನಿಲ್ ಕುಂಬ್ಳೆ ವೃತ್ತದಲ್ಲಿ ಕ್ರೀಡೆಗೆ ಸಂಬಂಧಿಸಿದ ಆಶಯ ವ್ಯಕ್ತಪಡಿಸುವ ಪ್ರತಿಮೆ, ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರಗ ಉತ್ಸವವನ್ನು ಪ್ರತಿನಿಧಿಸುವ ಪ್ರತಿಮೆ ಹೀಗೆ ಎಲ್ಲವೂ ವಿಶಿಷ್ಟತೆಗಳಿಂದ ಕೂಡಿರಲಿದೆ. ಜೊತೆಗೆ ಎಲ್ಲಾ ಕಡೆಗಳಲ್ಲಿ ಪಾದಚಾರಿ ಮಾರ್ಗ ಮತ್ತು ಬೀದಿ ದೀಪ ಅಳವಡಿಕೆಗೂ ಒತ್ತು ನೀಡಲಾಗುತ್ತಿದ್ದು ಇದು ನಗರದ ಒಟ್ಟಾರೆ ಅಂದವನ್ನು ಹೆಚ್ಚಿಸಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:
ಬೆಂಗಳೂರಿನ ಪ್ರಮುಖ ಕೆರೆಗಳ ಒತ್ತುವರಿ ತೆರವುಗೊಳಿಸಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ