ಮಾರ್ಚ್ 11 ರಂದು ಶಾಲೆಗೆ ಹೋಗ್ತಿದ್ದ ಬಾಲಕಿಯೊಬ್ಬಳು, BBMP ಯ ಸಣ್ಣ ಎಡವಟ್ಟಿನಿಂದಾಗಿ 150 ದಿನದಿಂದ ಆಸ್ಪತ್ರೆಯಲ್ಲೇ ಇದ್ದಾಳೆ. 8 ವರ್ಷದ ಆ ಬಾಲಕಿ ಅಂದು ಶಾಲೆಗೆ ಹೋಗ್ತಿದ್ದಾಗ ಅವಳ ಮೇಲೆ ಮರದ ಒಣಗಿದ ಕೊಂಬೆಯೊಂದು ಬಿದ್ದಿತ್ತು. ರಾಮಮೂರ್ತಿನಗರ ಕೌದೇನಹಳ್ಳಿ ಬಳಿ ಆ ದುರ್ಘಟನೆ ನಡೆದಿತ್ತು.
ಕೊಂಬೆ ಒಣಗಿದ್ದು, ಬೀಳುವ ಸ್ಥಿತಿಯಲ್ಲಿದೆ. ಅದನ್ನು ಕಟ್ ಮಾಡುವಂತೆ ಸ್ಥಳೀಯರು ಅದಕ್ಕೂ ಮುಂಚೆ ಅನೇಕ ಬಾರಿ ಬಿಬಿಎಂಪಿಗೆ ಮನವಿ ಮಾಡಿದ್ದರು. ಆದರೆ ಬಿಬಿಎಂಪಿ ತೆರವು ಮಾಡದ ಕಾರಣ ಶಾಲೆಗೆ ಹೋಗ್ತಿದ್ದ ಬಾಲಕಿಯ ತಲೆ ಮೇಲೆ ಅದೇ ಕೊಂಬೆ ಬಿದ್ದುಬಿಟ್ಟಿತ್ತು.
ತಕ್ಷಣ ಮಣಿಪಾಲ್ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆಗೆ ಸೇರಿಸಲಾಯಿತು. ಇಂದಿಗೆ ಆ ಮಗು ಆಸ್ಪತ್ರೆಗೆ ದಾಖಲಾಗಿ 150 ನೇ ದಿನ. ಇಲ್ಲಿವರೆಗೂ ಗುಣಮುಖಗೊಳ್ಳದ ಮಗು, ತಂದೆ ತಾಯಿಯ ಜೊತೆ ಮಾತನಾಡದ ಸ್ಥಿತಿಗೆ ತಲುಪಿದ್ದಾಳೆ.
ಈ ಮಧ್ಯೆ, ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆ ಮನೆಗೆ ಕರೆದುಕೊಂಡು ಹೋಗುವಂತೆ ಆಸ್ಪತ್ರೆಯವರು ದುಂಬಾಲು ಬಿದ್ದಿದ್ದಾರೆ. ಕಳೆದ 150 ದಿನದಿಂದ ಆಸ್ಪತ್ರೆಯಲ್ಲೇ ದಿನ ಕಳೆಯುತ್ತಿರುವ ಬಾಲಕಿಯ ತಂದೆ ತಾಯಿ ದಿಕ್ಕು ತೋಚದೆ ದುಃಖದಲ್ಲಿದ್ದಾರೆ. ಮುಂದೇನೋ!?