
ಬೆಂಗಳೂರು: ನಗರದ ರಾಜಕೀಯ ನಾಯಕರಿಗೆ ಸದ್ಯಕ್ಕೆ ಅತಿ ಹೆಚ್ಚು ಗೊಂದಲ ಉಂಟುಮಾಡಿರುವುದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿರುವ ವಾರ್ಡ್ ಸಂಖ್ಯೆ. ಇದೀಗ, BBMP ವಾಡ್೯ ಹೆಚ್ಚಳದ ಗೊಂದಲಕ್ಕೆ ಶಾಸಕ ರಘು ತೆರೆ ಎಳೆದಿದ್ದಾರೆ.
ಜೊತೆಗೆ, ಮೇಯರ್ ಅಧಿಕಾರ ಅವಧಿ ಕೂಡಾ ಹೆಚ್ಚಳವಾಗಲಿದ್ದು ಕೇವಲ ಒಂದು ವರ್ಷ ಇದ್ದ ಮೇಯರ್ ಅಧಿಕಾರ ಅವಧಿಯನ್ನು ಎರಡೂವರೆ ವರ್ಷಕ್ಕೆ ಏರಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇದಲ್ಲದೆ, 12 ಸ್ಥಾಯಿ ಸಮಿತಿಗಳಿಂದ 8 ಸ್ಥಾಯಿ ಸಮಿತಿಗಳಿಗೆ ಇಳಿಸಲು ನಿರ್ಧಾರ ಕೈಗೊಳ್ಳಲಿದೆ.
ಆದರೆ, ಮುಖ್ಯವಾದ ವಿಷಯವೆಂದರೆ, ಪಾಲಿಕೆಯ ವ್ಯಾಪ್ತಿಗೆ ಯಾವುದೇ ಹೊಸ ಪ್ರದೇಶಗಳ ಸೇರ್ಪಡೆ ಆಗುವುದಿಲ್ಲ. ಬಿಬಿಎಂಪಿ ವಿಸ್ತೀರ್ಣದಲ್ಲೇ ಇರುವ ವಾರ್ಡ್ಗಳ ಪುನರ್ವಿಂಗಡಣೆ ಮಾಡಲಾಗಿದೆ ಎಂದು ರಘು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಆಯುಕ್ತರಿಗಿರುವ ಅಧಿಕಾರವನ್ನ ಜಂಟಿ ಆಯುಕ್ತರಿಗೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.
ಸದ್ಯ ಈಗಿರುವ ಕೌನ್ಸಿಲ್ ಸಭಾಂಗಣದಲ್ಲೇ ಅಧಿವೇಶನ ಮುಂದುವರೆಸಲು ಚಿಂತನೆ ನಡೆಸಲಾಗಿದೆ. ಇದೀಗ, ಬಿಬಿಎಂಪಿ ಸ್ಥಳೀಯ ಸಂಸ್ಥೆಗಳ ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ಸ್ಥಳೀಯ ಸಂಸ್ಥೆ ಆಗಲಿದೆ ಎಂದು ವಿಧಾನಸೌಧದಲ್ಲಿ ಜಂಟಿ ಪರಿಶೀಲನಾ ಸಮಿತಿ ಅಧ್ಯಕ್ಷ ಎಸ್. ರಘು ಹೇಳಿಕೆ ನೀಡಿದ್ದಾರೆ.