
ಬೆಳಗಾವಿ: ಅದು ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಿ, ನಾಡದ್ರೋಹಿಗಳಿಗೆ ತಕ್ಕ ಉತ್ತರ ನೀಡುವಂತಹ ಸೌಧವಾಗಬೇಕಿತ್ತು. ಆದ್ರೆ ಸರ್ಕಾರದ ಬೇಜವಾಬ್ದಾರಿಗೆ ಆ ಬಂಗಲೆ ಇದೀಗ ಭೂತದ ಬಂಗಲೆಯಾಗಿ ಮಾರ್ಪಡುತ್ತಿದೆ. ರಾಜ್ಯ ಸರ್ಕಾರ ಮರಾಠಾ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಬೆನ್ನಲ್ಲೇ, ಸರ್ಕಾರದ ಆ ಒಂದು ನಿರ್ಧಾರ ಇದೀಗ ಮತ್ತೆ ಉತ್ತರ ಕರ್ನಾಟಕ ಜನ ಹಾಗೂ ಕನ್ನಡಪರ ಸಂಘಟನೆಗಳನ್ನ ಕೆರಳಿಸುವಂತೆ ಮಾಡಿದೆ.
ಉತ್ತರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿ ಸುವರ್ಣ ವಿಧಾನಸೌಧ ಕಟ್ಟಲಾಯ್ತು. ಅಷ್ಟೇ ಅಲ್ಲ ಪ್ರತಿ ವರ್ಷ ಅಧಿವೇಶನ ನಡೆಸಲು ತೀರ್ಮಾನಿಸಲಾಯ್ತು. ಅದರಂತೆ ಉತ್ತರ ಕರ್ನಾಟಕದ ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ಚಳಿಗಾಲ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುತ್ತಿತ್ತು.
ಆದರೆ ಕಳೆದ ಎರಡು ವರ್ಷಗಳಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಿಲ್ಲ. ಕಳೆದ ಬಾರಿ ಉಂಟಾದ ಭೀಕರ ಪ್ರವಾಹದ ನೆಪ ಹೇಳಿ ಅಧಿವೇಶನ ಮಾಡಲಿಲ್ಲ. ಈ ಬಾರಿ ಕೋವಿಡ್ ನೆಪ ಹೇಳಿ ಚಳಿಗಾಲದ ಅಧಿವೇಶನ ಬೆಂಗಳೂರಲ್ಲೇ ನಡೆಸಲು ತೀರ್ಮಾನಿಸಿರುವುದು ಈ ಭಾಗದ ಜನರ ಆಕ್ರೋಶ ಕಾರಣವಾಗಿದೆ.
ಭೂತ ಬಂಗಲೆಯಂತಾದ ಸುವರ್ಣಸೌಧ..
ಕಳೆದ ಎರಡು ವರ್ಷದಿಂದ ಸುವರ್ಣಸೌಧದ ನಿರ್ವಹಣೆ ಆಗಿಲ್ಲ. ಸ್ಪಟಿಕದಂತಿದ್ದ ಕಟ್ಟಡ ಇದೀಗ ಪಾಚಿ ಕಟ್ಟಿ ಕಂದು ಬಣ್ಣಕ್ಕೆ ತಿರುಗಿದೆ. ನಿರ್ವಹಣೆ ಮಾಡಲು ಹಣ ಕೂಡ ಸರ್ಕಾರ ನೀಡುತ್ತಿಲ್ಲ. ಇತ್ತ ಅಧಿವೇಶನವನ್ನು ಸಹ ಮಾಡುತ್ತಿಲ್ಲ. ಹೀಗಾಗಿ ಸುವರ್ಣಸೌಧವನ್ನ ಉಗ್ರಾಣ ಮಾಡಿಬಿಡಿ ಅಂತಾ ಕನ್ನಡಪರ ಸಂಘಟನೆ ಕಾರ್ಯಕರ್ತರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯ ಸರ್ಕಾರ ಪದೇಪದೇ ಉತ್ತರ ಕರ್ನಾಟಕ ಹಾಗೂ ಗಡಿ ಜಿಲ್ಲೆಗಳನ್ನ ನಿರ್ಲಕ್ಷಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇದರ ಮಧ್ಯೆ ಸುವರ್ಣಸೌಧದಲ್ಲಿ ನಡೆಸುತ್ತಿದ್ದ ಚಳಿಗಾಲದ ಅಧಿವೇಶನಕ್ಕೂ ಬ್ರೇಕ್ ಹಾಕಿದೆ. ಇನ್ನಾದ್ರೂ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುವರ್ಣಸೌಧ ಸದ್ಬಳಕೆಯಾಗಲಿ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡ್ತಿರುವ ಮಹಾರಾಷ್ಟ್ರ ನಾಯಕರ ಬಾಯಿ ಮುಚ್ಚಿಸುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಲಿ ಎಂಬುದು ಗಡಿಭಾಗದ ಕನ್ನಡಿಗರ ಒತ್ತಾಯ.
Published On - 8:33 am, Fri, 20 November 20