ಮುಂಬೈ: ಭೀಮ್ ಆ್ಯಪ್ ಬಳಸಿಕೊಂಡು ಬಳಕೆದಾರರು ಈಗ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಪ್ಲಾಟ್‌ಫಾರ್ಮ್ ವಹಿವಾಟಿನ ಬಗ್ಗೆ ವ್ಯಾಜ್ಯಗಳನ್ನು ಸಲ್ಲಿಸಬಹುದು ಎಂದು ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಹೇಳಿದೆ. ಮೊದಲಿಗೆ, ಎಸ್‌ಬಿಐ, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಎನ್‌ಪಿಸಿಐ ಭೀಮ್ ಅಪ್ಲಿಕೇಶನ್‌ನ ಈ ಸೌಲಭ್ಯ ದೊರೆಯಲಿದೆ. ಪೇಟಿಎಂ ಪಾವತಿ ಬ್ಯಾಂಕ್ ಹಾಗೂ ಟಿಜೆಎಸ್ಬಿ ಸಹಕಾರಿ ಬ್ಯಾಂಕ್ಗಳು ಸಹ ಶೀಘ್ರದಲ್ಲೇ ಯುಪಿಐ- ಹೆಲ್ಪ್ನ ಸಹಾಯವನ್ನು ಶೀಘ್ರದಲ್ಲೇ ಪಡೆಯಲಿವೆ.
ಮುಂಬರುವ ತಿಂಗಳುಗಳಲ್ಲಿ ಇತರ ಬ್ಯಾಂಕ್ಗಳಿಗೆ ಈ ಸೇವೆ ದೊರೆಯಲಿದೆ. ಅಲ್ಲದೆ, ಬ್ಯಾಂಕ್ಗಳು ಮತ್ತು ಫಿನ್‌ಟೆಕ್‌ಗಳು ತಮ್ಮ ಒಡೆತನದ ಅಪ್ಲಿಕೇಶನ್‌ಗಳಲ್ಲಿ ಹೆಲ್ಪ್ ವೈಶಿಷ್ಟ್ಯವನ್ನು ಒದಗಿಸುತ್ತವೆ. ಡಿಜಿಟಲ್ ಪಾವತಿಯಲ್ಲಿ ವಿಶ್ವಾಸ ಹೆಚ್ಚಾಗಬೇಕು ಎಂಬ ಕಾರಣಕ್ಕೆ ಕುಂದು-ಕೊರತೆ ನಿವಾರಣೆಗೆ ಇನ್-ಆಪ್ ವ್ಯವಸ್ಥೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಕಡ್ಡಾಯ ಮಾಡಲಾಗಿದೆ. ಡಿಜಿ- ಸಹಾಯ ಅಭಿಯಾನದ ಭಾಗವಾಗಿ ಎನ್ಪಿಸಿಐನಿಂದ ಯುಪಿಐ- ಹೆಲ್ಪ್ ಆರಂಭಿಸಲಾಗಿದೆ.
ಈ ಹೊಸ ಫೀಚರ್ನಿಂದಾಗಿ ಬಳಕೆದಾರರು ತಮ್ಮ ಬಾಕಿ ಇರುವ ವಹಿವಾಟಿನ ಸ್ಥಿತಿಗತಿಯನ್ನು ಪರೀಕ್ಷಿಸಬಹುದು. ಪ್ರಕ್ರಿಯೆ ಪೂರ್ಣಗೊಳ್ಳದ ವಹಿವಾಟಿನ ಬಗ್ಗೆ ಅಥವಾ ಯಾರ ಖಾತೆಗೆ ಹಣ ಕಳುಹಿಸಲಾಗಿದೆಯೋ ಅವರಿಗೆ ಹಣ ತಲುಪದಿದ್ದಲ್ಲಿ ದೂರು ಸಲ್ಲಿಸಬಹುದು. ವರ್ತಕರ ಜತೆಗಿನ ವಹಿವಾಟುಗಳಿಗೆ ಸಂಬಂಧಿಸಿದಂತೆಯೂ ದೂರು ನೀಡಬಹುದು. ಒಂದು ವೇಳೆ ಬಾಕಿ ಇರುವ ವಹಿವಾಟುಗಳ ಬಗ್ಗೆ ಬಳಕೆದಾರ ಯಾವುದೇ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಯುಪಿಐ- ಹೆಲ್ಪ್ ತಾನಾಗಿಯೇ ಅಪ್ಡೇಟ್ ನೀಡುತ್ತದೆ ಹಾಗೂ ಅಂತಿಮವಾಗಿ ಆ ವಹಿವಾಟಿನ ಅಂತಿಮ ಸ್ಥಿತಿಯನ್ನು ತಿಳಿಸುತ್ತದೆ.
ಇದನ್ನೂ ಓದಿ: ಭಾರತದ ಯುಪಿಐ ವ್ಯವಸ್ಥೆಯನ್ನು ಹಾಡಿ ಹೊಗಳಿದ ಬಿಲ್ ಗೇಟ್ಸ್
Published On - 7:34 pm, Tue, 16 March 21