
ಉತ್ತರ ಕನ್ನಡ: ಜನರಲ್ಲಿ ಮಾಸ್ಕ್ ಧರಿಸುವ ಬಗ್ಗೆ ಹಾಗೂ ಸ್ಯಾನಿಟೈಸರ್ ಬಳಸುವ ಬಗ್ಗೆ ಅರಿವು ಮೂಡಿಸಲು ಸ್ವತಃ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಇಂದು ಮಾಸ್ಕ್ ಡೇ ಆಚರಿದ್ದಾರೆ. ತಮ್ಮ ಸಚಿವ ಸಂಪುಟದ ಎಲ್ಲಾ ಸಹೋದ್ಯೋಗಿಗಳಿಗೂ ತಮ್ಮ ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಕಡ್ಡಾಯವಾಗಿ ಇದನ್ನು ಆಚರಿಸಬೇಕು ಎಂದೂ ತಾಕೀತು ಮಾಡಿದ್ದರು.
ಆದರೆ ವಿಪರ್ಯಾಸವೆಂದರೆ ಅವರ ಪಕ್ಷದವರೇ ಆದ ಸಂಸದ ಅನಂತಕುಮಾರ ಹೆಗಡೆ ಇಂದು ಮಾಸ್ಕ್ ಧರಿಸದೆ ಸರ್ಕಾರಿ ಸಭೆಯೊಂದರಲ್ಲಿ ಭಾಗಿಯಾಗಿದ್ದರು. ಕಾರವಾರದ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಜರುಗಿದ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡ ಸಂಸದ ಹೆಗಡೆ ಮಾಸ್ಕ್ ಧರಿಸದೆ ರಾಜ್ಯ ಸರ್ಕಾರದ ನಿರ್ದೇಶನವನ್ನ ಉಲ್ಲಂಘಿಸಿರುವುದು ಸಾಕಷ್ಟು ಚರ್ಚೆಗೂ ಗ್ರಾಸವಾಯ್ತು. ಇದರ ಜೊತೆ ಕೆಲವು ಅಧಿಕಾರಿಗಳು ಸಹ ಮಾಸ್ಕ್ ಧರಿಸಿರಲಿಲ್ಲ.