ಸೆಲೆಬ್ರಿಟಿಗಳು ಏನಂತಾರೆ: ರೈತರ ಪ್ರತಿಭಟನೆ ಬಗ್ಗೆ ಬಾಲಿವುಡ್ ಅಂಗಳದಲ್ಲಿ ಬಿಸಿಬಿಸಿ ಚರ್ಚೆ

ರೈತರ ಪ್ರತಿಭಟನೆಯ ವಿಚಾರದಲ್ಲಿ ಬಾಲಿವುಡ್ ತಾರೆಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಸಂಚಲನ ಸೃಷ್ಟಿಸಿದ್ದಾರೆ. ಕೆಲವರು ರೈತರ ಪರ, ಕೆಲವರು ಸರ್ಕಾರದ ಪರ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಸೆಲೆಬ್ರಿಟಿಗಳು ಏನಂತಾರೆ: ರೈತರ ಪ್ರತಿಭಟನೆ ಬಗ್ಗೆ ಬಾಲಿವುಡ್ ಅಂಗಳದಲ್ಲಿ ಬಿಸಿಬಿಸಿ ಚರ್ಚೆ
ಬಾಲಿವುಡ್ ತಾರೆಯರಾದ ಪ್ರೀತಿ ಜಿಂಟಾ, ಕಂಗನಾ ರನೌತ್ ಮತ್ತು ಪ್ರಿಯಾಂಕ ಛೋಪ್ರಾ
Edited By:

Updated on: Apr 07, 2022 | 5:34 PM

ದೇಶದ ಆಗುಹೋಗುಗಳಿಗೆ ಪ್ರತಿಕ್ರಿಯೆ ನೀಡಿ ಸದ್ದು ಮಾಡುವ ಬಾಲಿವುಡ್ ತಾರೆಯರು ಈ ಬಾರಿಯೂ ಸುಮ್ಮನುಳಿದಿಲ್ಲ. ರೈತರ ಪ್ರತಿಭಟನೆಯ ವಿಚಾರದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಸಂಚಲನ ಸೃಷ್ಟಿಸಿದ್ದಾರೆ. ರೈತರ ಪರ ಮತ್ತು ವಿರೋಧದ ನಿಲುವನ್ನು ಹೇಳಿಕೊಂಡು ಸುದ್ದಿಯಾಗಿದ್ದಾರೆ.

ಒಂದೆಡೆ, ದಿಲ್​ಜಿತ್ ದೋಸಂಜ್, ಪ್ರಿಯಾಂಕಾ ಛೋಪ್ರಾ, ಸೋನಮ್ ಕಪೂರ್, ಪ್ರೀತಿ ಜಿಂಟಾ, ರಿತೇಶ್ ದೇಶ್​ಮುಖ್, ರಿಚಾ ಚಡ್ಡಾ, ಹನ್ಸಲ್ ಮೆಹ್ತಾ, ಅನುಭವ್ ಸಿನ್ಹಾ ಮುಂತಾದವರು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಮತ್ತೊಂದೆಡೆ, ಕಂಗನಾ ರನೌತ್ ಮತ್ತು ವಿವೇಕ್ ಅಗ್ನಿಹೋತ್ರಿ ಸರ್ಕಾರದ ಪರವಾಗಿ ಮಾತನಾಡಿದ್ದಾರೆ.

ರೈತರ ಸಮಸ್ಯೆಗಳ ವಿಚಾರವನ್ನು ಹಂಚಿಕೊಂಡಿರುವ ರಿಚಾ ಚಡ್ಡಾ, ವರ್ಷ ಒಂದಕ್ಕೆ 12 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂದರೆ, ದಿನಕ್ಕೆ 30 ಜನ ರೈತರು ಆತ್ಮಹತ್ಯೆ ಮಾಡಿಕೊಂಡಂತೆ ಎಂದಿದ್ದಾರೆ. ನಮ್ಮ ತಟ್ಟೆಗೆ ಅನ್ನ ನೀಡುವವರ ಪ್ರತಿಭಟನೆ ಇದು ಎಂದು ರೈತರ ಹೋರಾಟವನ್ನು ಬೆಂಬಲಿಸಿದ್ದಾರೆ.

ದೆಹಲಿ ಪ್ರತಿಭಟನೆಯಲ್ಲಿ ನಿರತರಾದವರೆಲ್ಲಾ ರೈತರಲ್ಲ ಎಂದು ವಿವರಿಸಿರುವ ವೀಡಿಯೋ ತುಣುಕನ್ನು ಈ ಹಿಂದೆ ವಿವೇಕ್ ಅಗ್ನಿಹೋತ್ರಿ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಹನ್ಸಲ್ ಮೆಹ್ತಾ, ಅವರ ಮಾತುಗಳನ್ನು ಆಲಿಸಬೇಡಿ ಎಂದು ಹೇಳಿದ್ದಾರೆ. ರಿಚಾ ಚಡ್ಡಾ ಕೂಡ ಈ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ್ದಾರೆ. ರೈತರ ಪ್ರತಿಭಟನೆ ವಿರೋಧಿಸಿ ವಿವೇಕ್ ಅಗ್ನಿಹೋತ್ರಿ ಸಾಲು ಸಾಲು ಟ್ವೀಟ್​ಗಳನ್ನು ಮಾಡಿದ್ದಾರೆ.

ಜೈ ಕಿಸಾನ್ ಎಂದ ದಿಲ್​ಜಿತ್ ದೋಸಂಜ್
ದಿಲ್​ಜಿತ್ ದೋಸಂಜ್ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ನಾವು ಇಂದು ಉಣ್ಣುವ ತುತ್ತಿಗಾಗಿ ರೈತರಿಗೆ ಧನ್ಯವಾದಗಳನ್ನು ತಿಳಿಸಬೇಕು ಎಂದಿರುವ ರಿತೇಶ್ ದೇಶ್​ಮುಖ್ ಜೈ ಕಿಸಾನ್ ಎಂದು ಟ್ವೀಟ್ ಮಾಡಿದ್ದಾರೆ.

ಪ್ರೀತಿ ಜಿಂಟಾ ಏನು ಹೇಳಿದ್ದಾರೆ
ರೈತರನ್ನು ಈ ಮಣ್ಣಿನ ಯೋಧರು ಎಂದು ಕರೆದಿರುವ ಪ್ರೀತಿ ಜಿಂಟಾ, ರೈತರ ಪರವಾಗಿ ಟ್ವೀಟ್ ಮಾಡಿದ್ದಾರೆ. ಕೊವಿಡ್ ಮತ್ತು ಚಳಿಯ ಸಮಯದಲ್ಲಿ ಹೋರಾಟ ಮಾಡುತ್ತಿರುವ ರೈತರಿಗಾಗಿ ಕಾಳಜಿ ತೋರಿದ್ದಾರೆ. ಸರ್ಕಾರ ಮತ್ತು ರೈತರ ನಡುವಿನ ಮಾತುಕತೆ ಶೀಘ್ರವೇ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.

ಕಂಗನಾ ರನೌತ್ ಟ್ವೀಟ್ ಡಿಲೀಟ್
ಕಂಗನಾ ರನೌತ್ ಕೂಡಾ ಶಾಹೀನ್ ಬಾಗ್ ದಾದಿ ಫೋಟೊ ಟ್ವೀಟ್ ಮಾಡಿ, ಭಾರತದ ಪ್ರಭಾವಿ ಮಹಿಳೆ ಎಂದು ಪರಿಗಣಿಸಲ್ಪಟ್ಟ ದಾದಿ ₹100 ಕೊಟ್ಟರೆ ಪ್ರತಿಭಟನೆಗೆ ಬರುತ್ತಾರೆ ಎಂದಿದ್ದರು. ಬಳಿಕ ಅವರು ಟ್ವೀಟ್ ಡಿಲೀಟ್ ಮಾಡಿದ್ದರು. ಆದರೆ ಅವರ ಟ್ವೀಟ್​ನ ಸ್ಕ್ರೀನ್​ಶಾಟ್ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.

ದಿಲ್​ಜಿತ್ ದೋಸಂಜ್ ಮಾಡಿದ್ದ ಟ್ವೀಟ್ ಅನ್ನು ಪ್ರಿಯಾಂಕಾ ಛೋಪ್ರಾ ಶೇರ್ ಮಾಡಿದ್ದಾರೆ.

ಅಲ್ಲಾ ತೇರೋ ನಾಮ್, ಈಶ್ವರ್ ತೇರೋ ನಾಮ್ ಎಂಬ ಹಿನ್ನೆಲೆ ಹಾಡಿರುವ ರೈತರ ಪ್ರತಿಭಟನೆಯ ವೀಡಿಯೋ ತುಣುಕನ್ನು ಮೊಹಮ್ಮದ್ ಜೀಶನ್ ಹಂಚಿಕೊಂಡಿದ್ದಾರೆ.

ನಾನು ದೆಹಲಿಗೂ ಹೋಗಬಲ್ಲೆ: ಕಂಗನಾ ಲೇವಡಿಗೆ 73ರ ಹರೆಯದ ಹೋರಾಟಗಾರ್ತಿಯ ತಿರುಗೇಟು

Published On - 5:51 pm, Mon, 7 December 20