‘ಬೆಂಕಿ ಬಿದ್ದಿದ್ದು ಅಂಗಡಿಗಲ್ಲ, ನನ್ನ ಬದುಕಿಗೆ: 20 ವರ್ಷದ ದುಡಿಮೆ.. ಒಂದೇ ರಾತ್ರಿಯಲ್ಲಿ ಸರ್ವನಾಶ’
ಚಿಕ್ಕಮಗಳೂರು: ಶಾರ್ಟ್ ಸರ್ಕ್ಯೂಟ್ನಿಂದ ಪುಸ್ತಕದ ಮಳಿಗೆಯೊಂದು ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ವಿನಾಯಕ ಬುಕ್ ಸ್ಟೋರ್ ಬೆಂಕಿಗೆ ಆಹುತಿಯಾಗಿದ್ದು, ಸುಮಾರು 25ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಕರುಣಾಕರ್ ಎಂಬುವವರಿಗೆ ಸೇರಿದ ಈ ಪುಸ್ತಕ ಮಳಿಗೆಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರೋದನ್ನ ರಾತ್ರಿ ಪಾಳಯದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ನೋಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕದಳದ ಸಿಬ್ಬಂದಿಗೆ ಬೆಂಕಿ ನಂದಿಸೋ ಕೆಲಸ ಮಾಡುವಷ್ಟರಲ್ಲಿ ಅಂಗಡಿ ಸಂಪೂರ್ಣವಾಗಿ ಸುಟ್ಟುಹೋಗಿ ಕ್ರೀಡಾ ಸಾಮಗ್ರಿ, ಪಠ್ಯ ಪುಸ್ತಕ ಸೇರಿದಂತೆ […]
ಚಿಕ್ಕಮಗಳೂರು: ಶಾರ್ಟ್ ಸರ್ಕ್ಯೂಟ್ನಿಂದ ಪುಸ್ತಕದ ಮಳಿಗೆಯೊಂದು ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ವಿನಾಯಕ ಬುಕ್ ಸ್ಟೋರ್ ಬೆಂಕಿಗೆ ಆಹುತಿಯಾಗಿದ್ದು, ಸುಮಾರು 25ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಕರುಣಾಕರ್ ಎಂಬುವವರಿಗೆ ಸೇರಿದ ಈ ಪುಸ್ತಕ ಮಳಿಗೆಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರೋದನ್ನ ರಾತ್ರಿ ಪಾಳಯದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ನೋಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕದಳದ ಸಿಬ್ಬಂದಿಗೆ ಬೆಂಕಿ ನಂದಿಸೋ ಕೆಲಸ ಮಾಡುವಷ್ಟರಲ್ಲಿ ಅಂಗಡಿ ಸಂಪೂರ್ಣವಾಗಿ ಸುಟ್ಟುಹೋಗಿ ಕ್ರೀಡಾ ಸಾಮಗ್ರಿ, ಪಠ್ಯ ಪುಸ್ತಕ ಸೇರಿದಂತೆ ಇತರೆ ಪುಸ್ತಕಗಳು ಬೆಂಕಿಗೆ ಆಹುತಿಯಾಗಿದ್ದವು. ‘20 ವರ್ಷದ ದುಡಿಮೆ, ಒಂದೇ ರಾತ್ರಿಯಲ್ಲಿ ಸರ್ವನಾಶ’ ಬೆಂಕಿಗೆ ಆಹುತಿಯಾದ ವಸ್ತುಗಳನ್ನ ಕಂಡು ಅಂಗಡಿ ಮಾಲೀಕ ಕರುಣಾಕರ್ ಕಣ್ಣೀರು ಸುರಿಸಿದ್ರು. ದುರಂತ ಅಂದ್ರೆ ಅವರು ಅಂಗಡಿಗೆ ಯಾವುದೇ ವಿಮೆ ಕೂಡ ಮಾಡಿಸಿಲ್ಲ. ಅಲ್ಲದೆ, ಸಾಲಸೋಲ ಮಾಡಿ ವ್ಯಾಪಾರದಲ್ಲಿ ಯಶಸ್ಸಿನತ್ತ ಕಾಲಿಡುತ್ತಿರುವಾಗಲೇ ಈ ಅವಘಡ ಸಂಭವಿಸಿರೋದು ಕರುಣಾಕರ್ ಬದುಕನ್ನ ಛಿದ್ರವಾಗಿಸಿದೆ. ಸುಮಾರು 20 ವರ್ಷ ದುಡಿಮೆ ಒಂದೇ ರಾತ್ರಿಯಲ್ಲಿ ಮಣ್ಣುಪಾಲಾಗಿದೆ. ಬೆಂಕಿ ಬಿದ್ದಿದ್ದು ನನ್ನ ಅಂಗಡಿಗಲ್ಲ, ನನ್ನ ಬದುಕಿಗೆ ಅಂತಾ ಅಂಗಡಿ ಮಾಲೀಕ ಕಣ್ಣೀರು ಹಾಕಿದ್ರು. ಇನ್ನು, ಪುಸ್ತಕ ಅಂಗಡಿ ಪಕ್ಕದ ಬೇಕರಿಗೂ ಬೆಂಕಿ ತಗುಲಿದ್ದು, ಕೂಡಲೇ ಅಗ್ನಿಶಾಮಕದಳ ಸಿಬ್ಬಂದಿ ಬೇಕರಿಗೆ ತಗುಲಿದ್ದ ಬೆಂಕಿಯನ್ನ ನಂದಿಸೋ ಕಾರ್ಯ ಮಾಡಿದ್ರು. ಬೇಕರಿಯಲ್ಲಿ ಮೂರು ಗ್ಯಾಸ್ ಸಿಲಿಂಡರ್ ಗಳಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತ ಸ್ವಲ್ಪದ್ದರಲ್ಲೇ ತಪ್ಪಿಹೋಗಿದೆ.
‘ಕಾಫಿನಾಡಿನಲ್ಲಿ ಮನೆಮಾತಾಗಿದ್ದ ಅಕ್ಷರ ಪ್ರೇಮಿಯ ಅಂಗಡಿ’ ಕಳೆದ 10 ವರ್ಷಗಳ ಹಿಂದೆ ಶುರುವಾದ ಪುಸ್ತಕ ಮಳಿಗೆಯಲ್ಲಿ ಇಲ್ಲದ ಪಠ್ಯಸಾಮಗ್ರಿಗಳೇ ಇರಲಿಲ್ಲ. ಎಲ್ ಕೆಜಿಯಿಂದ ಹಿಡಿದು ಮಾಸ್ಟರ್ ಡಿಗ್ರಿವರೆಗೂ ಎಲ್ಲಾ ರೀತಿಯ ಪುಸ್ತಕಗಳು ಸೇರಿದಂತೆ ಸಾಹಿತ್ಯ, ಕೃಷಿ, ಕಲೆ, ಉದ್ಯೋಗ ಮಾಹಿತಿ, ಕ್ರೀಡಾ ಪರಿಕರಗಳು ಕೂಡ ಒಂದೇ ಸೂರಿನಲ್ಲಿ ಸಿಗುತ್ತಿದ್ದ ಸ್ಥಳ ಇದಾಗಿತ್ತು. ಲಾಭದ ದೃಷ್ಟಿಗಿಂತ ಹೆಚ್ಚಾಗಿ ಸೇವೆಯ ದೃಷ್ಟಿಯಿಂದಲೇ ಅಕ್ಷರ ಮಳಿಗೆಯನ್ನ ಕರುಣಾಕರ್ ಪ್ರಾರಂಭ ಮಾಡಿದ್ರು. ಇಂದು ಸಾವಿರಾರು ಮಕ್ಕಳ ವಿದ್ಯಾರ್ಜನೆಗೆ ನೆರವಾದ ಪುಸ್ತಕ ಮಳಿಗೆಯ ಮಾಲೀಕ ಎಲ್ಲವನ್ನ ಕಳೆದುಕೊಂಡು ಬರಿಗೈ ಆಗಿದ್ದಾನೆ. ಕರುಣಾಕರ್ ದಂಪತಿಗೆ 5 ತಿಂಗಳ ಕಂದಮ್ಮ ಸೇರಿದಂತೆ 9 ವರ್ಷದ ಇಬ್ಬರು ಗಂಡುಮಕ್ಕಳಿದ್ದಾರೆ. ದೊಡ್ಡ ಮಗನಂತೂ, ಅಪ್ಪ ಏನಾಗಿದೆ? ಎಲ್ಲಾ ಪುಸ್ತಕಗಳೆಲ್ಲಾ ಸುಟ್ಟು ಹೋಗಿದೆಯಲ್ಲಾ? ಅಂತಾ ತನ್ನ ಮುಗ್ಧ ಧ್ವನಿಯಿಂದಲೇ ಸುಟ್ಟುಹೋದ ಪುಸ್ತಕಗಳನ್ನ ಹಿಡಿದು ಪ್ರಶ್ನಿಸುತ್ತಿದ್ದ ದೃಶ್ಯವಂತೂ ಮನಕಲುಕುವಂತಿತ್ತು. ಸದ್ಯ ತನ್ನ ಮುಂದಿನ ಭವಿಷ್ಯವನ್ನ ನೆನೆದು ಮಾತೇ ಹೊರಡದೆ ಮೌನವಾಗಿರೋ ಕರುಣಾಕರ್ಗೆ ವಿಮೆಯೂ ಇಲ್ಲವಾಗಿರೋದ್ರಿಂದ ಸಹೃದಯಿಗಳು ನೆರವಾಗಬೇಕಾಗಿದೆ. -ಪ್ರಶಾಂತ್