ಕಾಫಿನಾಡಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರ: ನಾಮಪತ್ರ ಸಲ್ಲಿಸಲು ಗ್ರಾ. ಪಂ. ಕಡೆ ಸುಳಿಯದ ಅಭ್ಯರ್ಥಿಗಳು..ಏಕೆ?
ಚಿಕ್ಕಮಗಳೂರು: ಬದುಕಿಗಾಗಿ ಸರ್ಕಾರದ ವಿರುದ್ಧ ಸಮರ ಸಾರಿರೋ ಜಿಲ್ಲೆಯ ಮಲೆನಾಡು ಭಾಗದ ಜನರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಆದರೆ, ಕಸ್ತೂರಿ ರಂಗನ್ ವರದಿ, ಭದ್ರಾ ಹುಲಿ ಯೋಜನೆಯ ಬಫರ್ ಜ್ಹೋನ್ ಹಾಗೂ ಪರಿಸರ ಸೂಕ್ಷ್ಮ ವಲಯದ ಯೋಜನೆ ವಿರೋಧಿಸಿರೋ ಮಲೆನಾಡಿಗರು ಯೋಜನೆ ವ್ಯಾಪ್ತಿಯ ಬಹುತೇಕ ಹಳ್ಳಿಗಳಲ್ಲಿ ಯಾರು ನಾಮಪತ್ರ ಸಲ್ಲಿಸಿಲ್ಲ. ಈಗಾಗಲೇ ಜಿಲ್ಲೆಯ ಈ ಯೋಜನೆಯ ವ್ಯಾಪ್ತಿಗೆ ಬರುವ ಸುಮಾರು 145 ಹಳ್ಳಿಗಳಷ್ಟು ಜನ […]

ಚಿಕ್ಕಮಗಳೂರು: ಬದುಕಿಗಾಗಿ ಸರ್ಕಾರದ ವಿರುದ್ಧ ಸಮರ ಸಾರಿರೋ ಜಿಲ್ಲೆಯ ಮಲೆನಾಡು ಭಾಗದ ಜನರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಆದರೆ, ಕಸ್ತೂರಿ ರಂಗನ್ ವರದಿ, ಭದ್ರಾ ಹುಲಿ ಯೋಜನೆಯ ಬಫರ್ ಜ್ಹೋನ್ ಹಾಗೂ ಪರಿಸರ ಸೂಕ್ಷ್ಮ ವಲಯದ ಯೋಜನೆ ವಿರೋಧಿಸಿರೋ ಮಲೆನಾಡಿಗರು ಯೋಜನೆ ವ್ಯಾಪ್ತಿಯ ಬಹುತೇಕ ಹಳ್ಳಿಗಳಲ್ಲಿ ಯಾರು ನಾಮಪತ್ರ ಸಲ್ಲಿಸಿಲ್ಲ.
ಈಗಾಗಲೇ ಜಿಲ್ಲೆಯ ಈ ಯೋಜನೆಯ ವ್ಯಾಪ್ತಿಗೆ ಬರುವ ಸುಮಾರು 145 ಹಳ್ಳಿಗಳಷ್ಟು ಜನ ಚುನಾವಣೆಯನ್ನ ಬಹಿಷ್ಕಾರ ಮಾಡಿದ್ದಾರೆ. ಹಳ್ಳಿ ಗಲ್ಲಿಗಲ್ಲಿಗಳಲ್ಲೂ ಬ್ಯಾನರ್ ಹಾಕಿ ಯೋಜನೆ ಹಾಗೂ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಇಡೀ ಮಲೆನಾಡಿಗರು ಒಮ್ಮತದ ನಿರ್ಧಾರಕ್ಕೆ ತಗೆದುಕೊಂಡಿದ್ದು ಚುನಾವಣೆಯನ್ನ ತಿರಸ್ಕರಿಸಿದ್ದಾರೆ. ಬ್ಯಾನರ್ ತೆಗೆಯಲು ಬಂದ ಅಧಿಕಾರಿಗಳಿಗೆ ರಸ್ತೆ ಮಧ್ಯೆಯೇ ತರಾಟೆಗೆ ತೆಗೆದುಕೊಂಡಿದ್ದಾರೆ.
ನಾಮಪತ್ರ ಸಲ್ಲಿಸಿದ್ರೆ ಧರಣಿ ಮಾಡ್ತೀವಿ: ಅಷ್ಟೇ ಅಲ್ಲದೇ ಕೆಲ ಗ್ರಾಮ ಪಂಚಾಯ್ತಿಗಳಲ್ಲಿ ಜನ ಕಾವಲಿಗೆ ಕೂತಿದ್ದಾರೆ. ಯಾರೂ ನಾಮಪತ್ರ ಸಲ್ಲಿಸುವಂತಿಲ್ಲ ಎಂದು ಷರಾ ಬರೆದಿದ್ದಾರೆ. ಒಂದು ವೇಳೆ, ಯಾರಾದರೂ ನಾಮಪತ್ರ ಸಲ್ಲಿಸಿದರೆ ಅವರ ಮನೆ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ಬ್ಯಾನರ್ ಹಾಕಿರುವುದರಿಂದ ಯಾರೂ ನಾಮಪತ್ರ ಸಲ್ಲಿಸಲು ಮುಂದೆ ಬಂದಿಲ್ಲ.
ಶತಮಾನಗಳ ಬದುಕೇ ಬೀದಿಗೆ ಬೀಳುವಾಗ ಗ್ರಾಮ ಪಂಚಾಯಿತಿ ಸದಸ್ಯನೆಂಬ ಹಣೆಪಟ್ಟಿ ಹೊತ್ತುಕೊಂಡು ಮಾಡೋದೇನಿದೆ ಎಂದು ರಾಜಕೀಯ ದ್ವೇಷ, ವೈಮನಸ್ಸನ್ನ ಮರೆತು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷದ ಕಾರ್ಯಕರ್ತರು, ಮುಖಂಡರು ಕೂಡ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕ್ತಿದ್ದಾರೆ. ಅಧಿಕಾರಿಗಳ ರಾಜಿ ಸಂಧಾನ ಕೂಡ ಯಾವುದೇ ಫಲ ನೀಡಿಲ್ಲ. ಚುನಾವಣೆಗಿಂತ ಬದುಕೇ ದೊಡ್ಡದು ಎಂದು ಬದುಕನ್ನ ಉಳಿಸಿಕೊಳ್ಳಲು ಮಲೆನಾಡಿನ ಬಹುತೇಕ ಭಾಗ ರಾಜಕೀಯ ಮರೆತು ಒಂದಾಗಿದ್ದಾರೆ.
ಸರ್ಕಾರದ ಈ ಯೋಜನೆಗಳಿಂದ ಖಾಂಡ್ಯ ಹೋಬಳಿ ಕಣ್ಮರೆ: ಕಸ್ತೂರಿ ರಂಗನ್ ವರದಿ, ಭದ್ರಾ ಹುಲಿ ಯೋಜನೆಯ ಬಫರ್ ಜ್ಹೋನ್ ಹಾಗೂ ಪರಿಸರ ಸೂಕ್ಷ್ಮ ವಲಯದ ಯೋಜನೆಯಿಂದ ಬಹುತೇಕ ಖಾಂಡ್ಯ ಹೋಬಳಿಯೇ ಕಣ್ಮರೆಯಾಗೋ ಆತಂಕದಿಂದ ಈ ಭಾಗದ ಜನ ಚುನಾವಣೆಯನ್ನ ತೀವ್ರ ಕಠೋರವಾಗಿ ವಿರೋಧಿಸಿದ್ದಾರೆ.
ಖಾಂಡ್ಯ ಹೋಬಳಿ ಚಿಕ್ಕಮಗಳೂರು ಹಾಗೂ ಎನ್.ಆರ್.ಪುರ ತಾಲೂಕಿನ ಗಡಿ ಭಾಗವಾಗಿದ್ದು ಯೋಜನೆಯಿಂದ ಇಡೀ ಹೋಬಳಿಯೇ ಅಪಾಯದ ಅಂಚಿನಲ್ಲಿದೆ. ಹಾಗಾಗಿ, ಸೋಮವಾರ ಎನ್.ಆರ್.ಪುರ ತಾಲೂಕಿನಲ್ಲಿ ಓರ್ವ ಅಭ್ಯರ್ಥಿ ಕೂಡ ನಾಮಪತ್ರ ಸಲ್ಲಿಸಿಲ್ಲ.
ಖಾಂಡ್ಯ ಹೋಬಳಿಯ 4 ಗ್ರಾಮ ಪಂಚಾಯಿತಿಗಳಾದ ಹುಯಿಗೆರೆ, ದೇವದಾನ, ಕಡವಂತಿ, ಬಿದರೆ ಗ್ರಾಮ ಪಂಚಾಯಿತಿಗಳಲ್ಲಿ ಕೂಡ ಯಾರೂ ನಾಮಪತ್ರ ಸಲ್ಲಿಸಿಲ್ಲ. ಈಗಾಗಲೇ ಎಲ್ಲರೂ ನಿರ್ಧಾರ ಮಾಡಿರುವುದರಿಂದ ಯಾರು ಕೂಡ ನಾಮಪತ್ರ ಸಲ್ಲಿಸುವ ಗೋಜಿಗೆ ಹೋಗಿಲ್ಲ. ಒಂದು ವೇಳೆ ಅಪ್ಪಿತಪ್ಪಿ ಯಾರಾದ್ರೂ ನಾಮಪತ್ರ ಸಲ್ಲಿಸಬಹುದು ಅನ್ನೋ ಗುಮಾನಿಯಿಂದ ಸ್ಥಳೀಯರೇ ಗ್ರಾಮ ಪಂಚಾಯಿತಿ ಮುಂದೆ ಕಾವಲಿಗೆ ನಿಂತಿದ್ದಾರೆ.
ಸೋಮವಾರ ನಾಮಪತ್ರ ಸಲ್ಲಿಕೆಗೆ ಮೊದಲ ದಿನವಾಗಿತ್ತು. ಇನ್ನೂ ಮೂರು ದಿನ ಬಾಕಿ ಇದೆ. ದಿನದಿಂದ ದಿನಕ್ಕೆ ಹಳ್ಳಿಗರ ಹೋರಾಟದ ಹಾದಿ ತೀವ್ರಗೊಳ್ಳುತ್ತಿದೆ. ಅಧಿಕಾರಿಗಳು ಹಳ್ಳಿಗರ ಮನಪರಿವರ್ತಿಸಿ ಚುನಾವಣೆ ನಡೆಸಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಬದುಕಿನ ಮುಂದೆ ಯಾವುದೂ ದೊಡ್ಡದ್ದಲ್ಲ ಎಂದು ಹಳ್ಳಿಗರ ಒಮ್ಮತದ ನಿರ್ಧಾರ ಮಾಡಿದ್ದಾರೆ. ಆದರೆ ಚುನಾವಣೆ ಬಹಿಷ್ಕಾರ ಅಷ್ಟು ಸುಲಭದ ಮಾತಲ್ಲ.
ಈ ಮಧ್ಯೆಯೂ ಕಾಫಿನಾಡಿನಲ್ಲಿ ನಾಮಪತ್ರ ಸಲ್ಲಿಕೆ ಮಾಡದಷ್ಟು ಜನರು ವ್ಯವಸ್ಥೆ ವಿರುದ್ಧ ತಿರುಗಿಬಿದ್ದಿದ್ದಾರೆ ಅಂದರೆ ಯೋಜನೆಯಿಂದ ಜನರಿಗೆ ಆಗುವ ಗಂಭೀರತೆಯನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕಿದೆ. ಒಟ್ಟಿನಲ್ಲಿ ಚುನಾವಣೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಸರ್ಕಾರ ಏನು ಮಾಡುತ್ತೋ, ಅಧಿಕಾರಿಗಳು ಜನರನ್ನು ಹೇಗೆ ಮನಪರಿವರ್ತಿಸುತ್ತಾರೋ? ಕಾಫಿ ನಾಡಿನ ಜನ ಯಾವ ತೀರ್ಮಾನ ಮಾಡುತ್ತಾರೋ ಅನ್ನೋದು ನಿಜಕ್ಕೂ ಕುತೂಹಲ. -ಪ್ರಶಾಂತ್ ಮೂಡಿಗೆರೆ
ಚಿಕ್ಕಮಗಳೂರು: ಚುನಾವಣೆಗೆ ಬಹಿಷ್ಕಾರ ಹಾಕಿದ ನಾಲ್ಕು ಗ್ರಾಮ ಪಂಚಾಯಿತಿಗಳು



Published On - 10:11 am, Tue, 8 December 20




