Network ಸುಳಿವೇ ಇಲ್ಲ! ಸಮಸ್ಯೆಯೇ ಎಲ್ಲ.. ಹಳ್ಳಿಗಳ ತೊರೆಯುತ್ತಿದ್ದಾರೆ ಮಲೆನಾಡಿಗರು

|

Updated on: Sep 01, 2020 | 9:41 AM

ಚಿಕ್ಕಮಗಳೂರು: ಕೊರೊನಾ ಕಾಲದ ಆನ್‍ಲೈನ್ ಶಿಕ್ಷಣಕ್ಕಾಗಿ ಮಲೆನಾಡಿಗರು ಅಜ್ಜ-ಮುತ್ತಜ್ಜನ ಕಾಲದಿಂದ ಬದುಕಿ-ಬಾಳಿದ ಮನೆ-ಮಠ ಬಿಟ್ಟು ಮಕ್ಕಳ ಭವಿಷ್ಯಕ್ಕಾಗಿ ನಗರ ಪ್ರದೇಶಗಳತ್ತ ಮುಖ ಮಾಡುತ್ತಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ವಲಯದ ಅಸುಪಾಸಿನಲ್ಲಿ ಹತ್ತಾರು ಗ್ರಾಮಗಳಿವೆ. ಅವರೆಲ್ಲಾ ಬಿ.ಎಸ್.ಎನ್.ಎಲ್. ನೆಟ್ವರ್ಕ್ ಅವಲಂಬಿಸಿದ್ದರು. ಆದರೆ, ಈಗ ಬಿ.ಎಸ್.ಎನ್.ಎಲ್. ನೆಟ್ವರ್ಕ್ ಹೆಸರಿಗಷ್ಟೆ. ಇತ್ತೀಚಿನ ದಿನಗಳಲ್ಲಿ ನೆಟ್ವರ್ಕ್ ಇರಲ್ಲ. ಬೇಸಿಕ್ ಮೊಬೈಲ್‍ಗೂ ನೆಟ್ವರ್ಕ್ ಸಿಗುತ್ತಿಲ್ಲ. ಇದ್ದರೂ ಫ್ರಿಕ್ವೆನ್ಸಿ ಇರಲ್ಲ. ಮಳೆ-ಗಾಳಿ ಬಂದರೆ ಇರೋ ನೆಟ್ವರ್ಕ್ ಕೂಡ ಹೋಗುತ್ತೆ. ಪುನಃ ಬಂದರೆ ಬಂತು. ಇಲ್ಲವಾದ್ರೆ […]

Network ಸುಳಿವೇ ಇಲ್ಲ! ಸಮಸ್ಯೆಯೇ ಎಲ್ಲ.. ಹಳ್ಳಿಗಳ ತೊರೆಯುತ್ತಿದ್ದಾರೆ ಮಲೆನಾಡಿಗರು
Follow us on

ಚಿಕ್ಕಮಗಳೂರು: ಕೊರೊನಾ ಕಾಲದ ಆನ್‍ಲೈನ್ ಶಿಕ್ಷಣಕ್ಕಾಗಿ ಮಲೆನಾಡಿಗರು ಅಜ್ಜ-ಮುತ್ತಜ್ಜನ ಕಾಲದಿಂದ ಬದುಕಿ-ಬಾಳಿದ ಮನೆ-ಮಠ ಬಿಟ್ಟು ಮಕ್ಕಳ ಭವಿಷ್ಯಕ್ಕಾಗಿ ನಗರ ಪ್ರದೇಶಗಳತ್ತ ಮುಖ ಮಾಡುತ್ತಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ವಲಯದ ಅಸುಪಾಸಿನಲ್ಲಿ ಹತ್ತಾರು ಗ್ರಾಮಗಳಿವೆ. ಅವರೆಲ್ಲಾ ಬಿ.ಎಸ್.ಎನ್.ಎಲ್. ನೆಟ್ವರ್ಕ್ ಅವಲಂಬಿಸಿದ್ದರು.

ಆದರೆ, ಈಗ ಬಿ.ಎಸ್.ಎನ್.ಎಲ್. ನೆಟ್ವರ್ಕ್ ಹೆಸರಿಗಷ್ಟೆ. ಇತ್ತೀಚಿನ ದಿನಗಳಲ್ಲಿ ನೆಟ್ವರ್ಕ್ ಇರಲ್ಲ. ಬೇಸಿಕ್ ಮೊಬೈಲ್‍ಗೂ ನೆಟ್ವರ್ಕ್ ಸಿಗುತ್ತಿಲ್ಲ. ಇದ್ದರೂ ಫ್ರಿಕ್ವೆನ್ಸಿ ಇರಲ್ಲ. ಮಳೆ-ಗಾಳಿ ಬಂದರೆ ಇರೋ ನೆಟ್ವರ್ಕ್ ಕೂಡ ಹೋಗುತ್ತೆ. ಪುನಃ ಬಂದರೆ ಬಂತು. ಇಲ್ಲವಾದ್ರೆ ಇಲ್ಲ.

ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಮಲೆನಾಡಿಗರು ಹಳ್ಳಿ ಬಿಟ್ಟು ನಗರ ಪ್ರದೇಶಗಳತ್ತ ಮುಖ ಮಾಡುತ್ತಿದ್ದಾರೆ. ಮುತ್ತೋಡಿ ಅರಣ್ಯ ಸಮೀಪದ ಗಾಳಿಗುಡ್ಡೆ ಎಂಬ ಗ್ರಾಮದ ಕಲ್ಲೇಶ್ ಎಂಬುವರ ಕುಟುಂಬ ಇದೀಗ ಚಿಕ್ಕಮಗಳೂರಿನ ಮಾರ್ಕೆಟ್ ರಸ್ತೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದಾರೆ.

ಕಲ್ಲೇಶ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬರು ಖಾಸಗಿ ಕಂಪೆನಿಯಲ್ಲಿ ಉದ್ಯೋಗಿ. ಮತ್ತೊಬ್ಬರು ಮೈಸೂರಿನಲ್ಲಿ ಫೈನಲ್ ಇಯರ್ ಬಿಎಸ್ಸಿ ಓದುತ್ತಿದ್ದಾರೆ. ಕೊರೊನಾದಿಂದಾಗಿ ಇಬ್ಬರೂ ಮನೆ ಸೇರಿಕೊಂಡಿದ್ದರು. ಆದ್ರೆ ಮನೆಯಲ್ಲಿ ನೆಟ್ವರ್ಕ್ ಸುಳಿವೇ ಇಲ್ಲ, ಗುಡ್ಡ ಏರಿದ್ರೂ ಇಲ್ಲ, ಮರ ಹತ್ತಿದ್ರೂ ಇಲ್ಲ.

ಕೊನೆಗೆ ಈ ಸರ್ಕಸ್ ಎಲ್ಲಾ ಮಾಡೋಕಾಗಲ್ಲ ಎಂದು ಹಳ್ಳಿ ಬಿಟ್ಟು ಇಡೀ ಕುಟುಂಬ ಪುನಃ ಪಟ್ಟಣ ಸೇರುವಂತಾಗಿದೆ. ಮಗಳಿಗೆ ಆನ್‍ಲೈನ್ ಕ್ಲಾಸ್ ಗೆ‌ ತೊಂದರೆಯಾಗಬಾರದು ಎಂದು ವಿದ್ಯಾರ್ಥಿನಿ ಸಿರಿ ತಂದೆ ಕಲ್ಲೇಶ್, ಚಿಕ್ಕಮಗಳೂರು ನಗರದಲ್ಲಿ ಮನೆ ಮಾಡಿದ್ದಾರೆ. ಅಜ್ಜ-ಮುತ್ತಜ್ಜನ ಕಾಲದಿಂದಲೂ ಬದುಕಿ-ಬಾಳಿದ ಮನೆ-ತೋಟ, ಹುಟ್ಟಿ ಬೆಳೆದ ಊರು ಎಲ್ಲವನ್ನೂ ಬಿಟ್ಟು ನೆಟ್ವರ್ಕ್‍ಗಾಗಿ ನಗರ ಪ್ರದೇಶದತ್ತ ಮುಖ ಮಾಡಿದ್ದಾರೆ.

ಇದು ಕೇವಲ ಕಲ್ಲೇಶ್ ಕುಟುಂಬದ ಸಮಸ್ಯೆ ಮಾತ್ರವಲ್ಲ, ಸಾವಿರಾರು ಕುಟುಂಬದ ನೈಜ ಪರಿಸ್ಥಿತಿ. ನೆಟ್ವರ್ಕ್‍ಗಾಗಿ ಊರನ್ನ ಬಿಟ್ಟು ಬಂದಿರೋ ಕುಟುಂಬ ನಗರ ಪ್ರದೇಶದಿಂದಲೇ ಹಳ್ಳಿಗಳಿಗೆ ಓಡಾಡ್ತಿದ್ದಾರೆ. ಹಳ್ಳಿಗೆ ಹೋಗಿ ಸಂಜೆವರೆಗೂ ಹೊಲಗದ್ದೆ-ತೋಟಗಳಲ್ಲಿ ಕೆಲಸ ಮಾಡಿಸಿ ಸಂಜೆ ವೇಳೆಗೆ ಮತ್ತೆ ಸಿಟಿಯತ್ತ ಮುಖ ಮಾಡ್ತಿದ್ದಾರೆ. ಕೆಲವರು ಮಕ್ಕಳನ್ನ ನಗರದಲ್ಲಿ ಬಿಟ್ಟು ಆಗಾಗ್ಗೆ ಬಂದು ಹೋಗ್ತಿದ್ದಾರೆ.

ಆರ್ಥಿಕವಾಗಿ ಅನುಕೂಲಸ್ಥರು ಹೀಗೆ ನಗರ ಪ್ರದೇಶಗಳಿಗೆ ಬಂದು ಮನೆ ಮಾಡಿಕೊಂಡು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಆದ್ರೆ, ಕೆಲ ಕುಟುಂಬಗಳಿಗೆ ಮಕ್ಕಳಿಗೆ ಮೊಬೈಲ್ ಕೊಡ್ಸೋದಕ್ಕೂ ಸಾಧ್ಯವಾಗದ ಪರಿಸ್ಥಿತಿ ಇದೆ. ಅಂತದ್ರಲ್ಲಿ ಅವ್ರು ಮಕ್ಕಳ ಭವಿಷ್ಯಕ್ಕೆ ಏನು ಮಾಡುತ್ತಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.

ಹೇಗೋ ಸಾಲ-ಸೋಲ ಮಾಡಿ ಮೊಬೈಲ್ ಕೊಡಿಸಬಹುದು. ಆದ್ರೆ, ನೆಟ್ವರ್ಕ್‍ಗಾಗಿ ಹಳ್ಳಿ ಬಿಟ್ಟು ಬಂದು ನಗರ ಪ್ರದೇಶದಲ್ಲಿ ಮನೆ ಮಾಡಿಕೊಂಡು ಮಕ್ಕಳಿಗೆ ಓದಿಸೋದು ಕಷ್ಟಸಾಧ್ಯ. ಹೀಗಿರುವಾಗ ಬಡಕುಟುಂಬ ಮಕ್ಕಳ ಭವಿಷ್ಯದ ಬಗ್ಗೆ ಏನು ಮಾಡ್ತಾರೆ ಅನ್ನೋದು ಯಕ್ಷಪ್ರಶ್ನೆಯಾಗಿದೆ.

ಆನ್​ಲೈನ್ ಶಿಕ್ಷಣ ನಿಲ್ಲಿಸಿ -ಶಾಸಕ ಕುಮಾರಸ್ವಾಮಿ
ಈ ಮಧ್ಯೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವಾರು ಗ್ರಾಮಗಳಿವೆ. ಆನ್​ಲೈನ್ ಶಿಕ್ಷಣದಿಂದ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ಎಲ್ಲೂ ಕೂಡ ನೆಟ್ವರ್ಕ್ ಸರಿಯಾಗಿ ಸಿಗುತ್ತಿಲ್ಲ, ಮೊಬೈಲ್ ಇಟ್ಕೊಂಡು ನೆಟ್ವರ್ಕ್ ಸಲುವಾಗಿ ಗುಡ್ಡ, ಮರ ಏರುವ ದುಃಸ್ಥಿತಿ.

ದಯವಿಟ್ಟು ಆನ್​ಲೈನ್ ಶಿಕ್ಷಣ ನಿಲ್ಲಿಸಿ ಎಂದು ಸ್ವತಃ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಈ ಕುರಿತು ಫೇಸ್​ಬುಕ್ ಪೋಸ್ಟ್ ಮಾಡಿರುವ ಶಾಸಕ ಎಂ ಪಿ ಕುಮಾರಸ್ವಾಮಿ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಲ್ಲಿ ಆನ್​ಲೈನ್ ಶಿಕ್ಷಣ ನಿಲ್ಲಿಸುವಂತೆ ವಿನಂತಿಸಿಕೊಂಡಿದ್ದಾರೆ.

ಎಲ್ಲಿ ಡಿಜಿಟಲ್ ಇಂಡಿಯಾ..? ವಿದ್ಯಾರ್ಥಿಗಳಿಂದ ಬೇಸರದ ಪ್ರಶ್ನೆ
ಚಿಕ್ಕಮಗಳೂರು ಜಿಲ್ಲೆ ಮುಗಿಲೆತ್ತರದ ಬೆಟ್ಟಗುಡ್ಡಗಳ ಮಧ್ಯೆ ಇರುವ ಊರು. ಜಿಲ್ಲೆಯಲ್ಲಿ ಇಂತಹಾ ನೂರಾರು ಕುಗ್ರಾಮಗಳಿವೆ. ನೀರು, ಕರೆಂಟ್, ರೋಡ್ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದ ಗ್ರಾಮಗಳು ಮಲೆನಾಡಲ್ಲಿ ಇಂದಿಗೂ ಜೀವಂತ.

ಇಲ್ಲಿನ ಮಕ್ಕಳು ಹೇಗೆ ಆನ್‍ಲೈನ್ ಕ್ಲಾಸ್‍ಗೆ ಮುಂದಾಗುತ್ತಾರೋ ದೇವರೇ ಬಲ್ಲ. ನಮ್ಮದು ಡಿಜಿಟಲ್ ಭಾರತ ಅನ್ನೋ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ವಿದ್ಯಾರ್ಥಿಗಳು ಸೇರಿದಂತೆ ಹಳ್ಳಿಗರು ಇದೇನಾ ಡಿಜಿಟಲ್ ಭಾರತ? ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಆನ್‍ಲೈನ್ ಕ್ಲಾಸ್ ಜಾರಿಗೆ ತರೋ ಮುನ್ನ ಮಕ್ಕಳಿಗೆ ಬೇಕಾದ ಸೂಕ್ತ ಸೌಲಭ್ಯವನ್ನ ಕಲ್ಪಿಸಲಿ ಅನ್ನೋದು ಮಲೆನಾಡಿಗರ ಆಗ್ರಹ.
-ಪ್ರಶಾಂತ್ ಮೂಡ್ಗೆರೆ