ಈಶ್ವರಪ್ಪ ಜೊತೆ ಮುಖಾಮುಖಿ ಮಾತಾಡ್ತೀನಿ ಎಂದ ಸಿಎಂ, ಮುಖ್ಯಮಂತ್ರಿ ಕೇಳಿದರೆ ರಾಜೀನಾಮೆ ಕೊಡಬೇಕಾಗುತ್ತೆ ಎಂದ ಈಶ್ವರಪ್ಪ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 13, 2022 | 12:01 PM

ತನಿಖೆಯಲ್ಲಿ ಎಲ್ಲಿಯೂ ಸರ್ಕಾರ ಹಸ್ತಕ್ಷೇಪ ನಡೆಸುವುದಿಲ್ಲ. ನಾನು ಈಗಾಗಲೇ ಫೋನ್​ ಮೂಲಕ ಈಶ್ವರಪ್ಪ ಜೊತೆಗೆ ಮಾತನಾಡಿದ್ದೇನೆ. ಶೀಘ್ರ ಮುಖಾಮುಖಿ ಭೇಟಿಯಾಗಿ ಚರ್ಚಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಈಶ್ವರಪ್ಪ ಜೊತೆ ಮುಖಾಮುಖಿ ಮಾತಾಡ್ತೀನಿ ಎಂದ ಸಿಎಂ, ಮುಖ್ಯಮಂತ್ರಿ ಕೇಳಿದರೆ ರಾಜೀನಾಮೆ ಕೊಡಬೇಕಾಗುತ್ತೆ ಎಂದ ಈಶ್ವರಪ್ಪ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಕೆ.ಎಸ್.ಈಶ್ವರಪ್ಪ
Follow us on

ಬೆಂಗಳೂರು: ಸಚಿವ ಈಶ್ವರಪ್ಪ ವಿರುದ್ಧ ಕಮಿಷನ್ ಕೇಳುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಒತ್ತಾಯ ಹೆಚ್ಚಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಸಚಿವ ಈಶ್ವರಪ್ಪ ಜೊತೆ ನಾನು ಈಗಾಗಲೇ ಚರ್ಚೆ ನಡೆಸಿದ್ದೇನೆ’ ಎಂದರು.

‘ಸಚಿವ ಈಶ್ವರಪ್ಪ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಇಂದು ಬೆಂಗಳೂರಿಗೆ ತೆರಳಿದ ನಂತರ ಈಶ್ವರಪ್ಪ ಜತೆ ಚರ್ಚೆ ನಡೆಸುತ್ತೇನೆ. ತನಿಖೆ ನಂತರ ಸತ್ಯಾಸತ್ಯತೆ ಬಯಲಾಗಲಿದೆ. ತನಿಖೆಯಲ್ಲಿ ಎಲ್ಲಿಯೂ ಸರ್ಕಾರ ಹಸ್ತಕ್ಷೇಪ ನಡೆಸುವುದಿಲ್ಲ. ನಾನು ಈಗಾಗಲೇ ಫೋನ್​ ಮೂಲಕ ಈಶ್ವರಪ್ಪ ಜೊತೆಗೆ ಮಾತನಾಡಿದ್ದೇನೆ. ಶೀಘ್ರ ಮುಖಾಮುಖಿ ಭೇಟಿಯಾಗಿ ಚರ್ಚಿಸುತ್ತೇನೆ’ ಎಂದರು. ರಾಜೀನಾಮೆ ಬಗ್ಗೆ ಈಶ್ವರಪ್ಪ ಏನು ಹೇಳಿದ್ದಾರೆ ಎನ್ನುವುದು ಗೊತ್ತಿಲ್ಲ. ಮುಖಾಮುಖಿ ಮಾತನಾಡಿದರೆ ಹಲವು ವಿಷಯಗಳು ಸ್ಪಷ್ಟವಾಗುತ್ತವೆ. ವಿರೋಧ ಪಕ್ಷದವರು ಎಲ್ಲದರಲ್ಲಿಯೂ ತಪ್ಪು ಹುಡುಕಲು ಪ್ರಯತ್ನಿಸುತ್ತಿದ್ದಾರೆ. ತನಿಖೆ ನಂತರ ಸತ್ಯಾಂಶ ಏನು ಎನ್ನುವುದು ಬಹಿರಂಗವಾಗುತ್ತದೆ. ಈ ಪ್ರಕರಣದಲ್ಲಿ ಯಾರ ಪಾತ್ರವಿದೆ ಮತ್ತು ಹಿನ್ನೆಲೆ ಏನು ಎನ್ನುವುದು ತನಿಖೆಯ ನಂತರ ಸ್ಪಷ್ಟವಾಗುತ್ತದೆ. ವರಿಷ್ಠರಿಗೆ ಎಲ್ಲ ವಿಚಾರ ಗೊತ್ತಿದೆ. ನಾನೂ ಎಲ್ಲವನ್ನೂ ವಿವರಿಸಿದ್ದೇನೆ ಎಂದರು.

ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ, ಮಂಗಳೂರಿನ ಬಂಟ್ವಾಳದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಎಸ್​ಡಿಪಿಐ ಕಾರ್ಯಕರ್ತರು ಪ್ರತಿಭಟಿಸಿದರು. ಈ ಸಂದರ್ಭ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಮುಖ್ಯಮಂತ್ರಿ ಭದ್ರತಾ ಸಿಬ್ಬಂದಿ ಪ್ರತಿಭಟನಾಕಾರರನ್ನು ಚೆದುರಿಸಿದರು.

ಸಂತೋಷ್ ಸಾವಿನಲ್ಲಿ ಸಂಚಿನ ಅನುಮಾನವಿದೆ: ಈಶ್ವರಪ್ಪ

ಮೈಸೂರು: ನಗರದಿಂದ ಹೊರಡುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ನಾನು ಬಿಜೆಪಿ ಕಾರ್ಯಕರ್ತ. ಮುಖ್ಯಮಂತ್ರಿ ರಾಜೀನಾಮೆ ಕೇಳಿದರೆ ಕೊಡುತ್ತೇನೆ. ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿನ ವಾಟ್ಸ್ಯಾಪ್ ಮೆಸೇಜ್​ ಅನ್ನು ಡೆತ್​ನೋಟ್ ಎನ್ನಲು ಆಗುವುದಿಲ್ಲ. ಡಿವೈಎಸ್​ಪಿ ಗಣಪತಿ ಪ್ರಕರಣದಲ್ಲಿ ಡೆತ್​ನೋಟ್ ಕೈಬರಹದಲ್ಲಿತ್ತು, ಮೇಲಾಗಿ ಅವರು ಅಂದಿನ ಗೃಹ ಸಚಿವ ಜಾರ್ಜ್ ಹೆಸರು ಹೇಳಿ ಸಹಿ ಮಾಡಿದ್ದರು. ಆದರೆ ಇಲ್ಲಿ ಸಹಿ ಇಲ್ಲ. ಇಂಥ ಪತ್ರವನ್ನು ಯಾರು ಬೇಕಾದರೂ ಟೈಪ್ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.

ನನ್ನನ್ನು ಭೇಟಿ ಮಾಡಿದ್ದೀನಿ ಎಂದು ಹೇಳಲು ಹೇಳಿಕೊಟ್ಟವರು ಮತ್ತು ಕೇಂದ್ರ ನಾಯಕರನ್ನು ಭೇಟಿ ಮಾಡಿಸಿದ್ದು ಯಾರು ಎಂಬುದು ಗೊತ್ತಾಗಬೇಕಿದೆ. ಸಂತೋಷ್ ಸಾವಿನ ಹಿಂದೆ ಯಾರೋ ಇದ್ದಾರೆ. ಈವರೆಗೆ ಮುಖ್ಯಮಂತ್ರಿಯಾಗಲಿ, ಗೃಹ ಸಚಿವರಾಗಲಿ ನನ್ನ ರಾಜೀನಾಮೆಯನ್ನು ಇದುವರೆಗೂ ಕೇಳಿಲ್ಲ ಎಂದರು.

ಇದನ್ನೂ ಓದಿ: ಗುತ್ತಿಗೆದಾರರನ್ನು ಈಶ್ವರಪ್ಪ ಗೆಟ್‌ಔಟ್ ಎಂದು ಗದರುತಿದ್ದರು, ಮರ್ಯಾದೆ ಕೊಡುತ್ತಿರಲಿಲ್ಲ -ಕಾರ್ಯದರ್ಶಿ ಜಗನ್ನಾಥ ಶೇಗಜಿ ಆರೋಪ

ಇದನ್ನೂ ಓದಿ: ಸಚಿವ ಈಶ್ವರಪ್ಪ ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ ಕಾಂಗ್ರೆಸ್ ನಿಯೋಗ

Published On - 12:00 pm, Wed, 13 April 22