ಗುತ್ತಿಗೆದಾರರನ್ನು ಈಶ್ವರಪ್ಪ ಗೆಟ್‌ಔಟ್ ಎಂದು ಗದರುತಿದ್ದರು, ಮರ್ಯಾದೆ ಕೊಡುತ್ತಿರಲಿಲ್ಲ -ಕಾರ್ಯದರ್ಶಿ ಜಗನ್ನಾಥ ಶೇಗಜಿ ಆರೋಪ
ಗುತ್ತಿಗೆದಾರರು ಈಶ್ವರಪ್ಪ ಮನೆಗೆ ಹೋದರೆ ಗೆಟ್‌ಔಟ್ ಎಂದು ಹೇಳುತ್ತಿದ್ದರು. ಗುತ್ತಿಗೆದಾರರಿಗೆ ಕೆ.ಎಸ್.ಈಶ್ವರಪ್ಪ ಮರ್ಯಾದೆ ಕೊಡುತ್ತಿರಲಿಲ್ಲ ಎಂದು ಕಲಬುರಗಿಯಲ್ಲಿ ಗುತ್ತಿಗೆದಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗನ್ನಾಥ ಶೇಗಜಿ ಆರೋಪಿಸಿದ್ದಾರೆ.
ಬೆಂಗಳೂರು: ಗುತ್ತಿಗೆದಾರ ಸಂತೋಷ್ ಆತ್ಮಹತ್ಯಗೆ ಸಂಬಂಧಪಟ್ಟಂತೆ ವಿಪಕ್ಷ ನಾಯಕರು ಕೆಎಸ್ ಈಶ್ವರಪ್ಪನವರ(KS Eshwarappa) ವಿರುದ್ಧ ದೂರು ದಾಖಲಿಸಿ ಜೈಲಿಗಟ್ಟುವಂತೆ ಪ್ರತಿಭಟಿಸುತ್ತಿವೆ. ಅಲ್ಲದೆ ಈಶ್ವರಪ್ಪನವರನ್ನು ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ. ಇನ್ನು ಸಿಎಂ ಬೊಮ್ಮಾಯಿಗೆ(CM Basavaraj Bommai) ಮಾನ ಮರ್ಯಾದೆ ಇದ್ದರೆ ಸಚಿವ ಕೆ.ಎಸ್.ಈಶ್ವರಪ್ಪರನ್ನು ಮೊದಲು ಬಂಧಿಸಬೇಕು. ನಾವು ಜನತಾ ನ್ಯಾಯಾಲಯದ ಮುಂದೆ ಹೋಗುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಸಚಿವ ಈಶ್ವರಪ್ಪ ಕಾಮಗಾರಿ ನಡೆಸಲು ಸೂಚಿಸಿದ್ದಾರೆ. ಸಚಿವರು ಸೂಚಿಸದಂತೆ ಸಂತೋಷ್ ಕಾಮಗಾರಿ ಮಾಡಿದ್ದಾರೆ. ಪತ್ನಿ ಒಡವೆ ಅಡವಿಟ್ಟ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಗುಣಮಟ್ಟದ ಕೆಲಸ ಮಾಡಿ ಹಣ ರಿಲೀಸ್‌ಗೆ ಮನವಿ ಮಾಡಿದ್ದಾರೆ. ಆದ್ರೆ ಹಣ ನೀಡಲು 40 ಪರ್ಸೆಂಟ್ ಕಮಿಷನ್‌ಗೆ ಪಟ್ಟು ಹಿಡಿದಿದ್ದಾರೆ. ಸಾಲ ಮಾಡಿ ಕಾಮಗಾರಿ ಮಾಡಿದವರು ಕಮಿಷನ್ ಎಲ್ಲಿ ಕೊಡ್ತಾರೆ. ಇದರಿಂದ ಮನನೊಂದು ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಸಚಿವ ಈಶ್ವರಪ್ಪ, ಸಂತೋಷ್ ಯಾರೆಂದು ಗೊತ್ತಿಲ್ಲ ಎಂದು ಹೇಳುತ್ತಾರೆ. ಸಂತೋಷ್ ಬೆಳಗಾವಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತ. ರಾಜ್ಯ ಸರ್ಕಾರ 40 ಪರ್ಸೆಂಟ್ ಸರ್ಕಾರವೆಂದು ಆರೋಪಿಸಿದ್ದರು. ಕೆಂಪಣ್ಣ ಪ್ರಧಾನಿಗೂ ಪತ್ರ ಬರೆದಿದ್ದರು ಎಂದು ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು 40 ಪರ್ಸೆಂಟ್ ಸರ್ಕಾರ. ಕಮಿಷನ್ ಕೊಡದಿದ್ದರೆ ಯಾವುದೇ ಕೆಲಸಗಳು ಆಗುವುದಿಲ್ಲ. ಈ 40 ಪರ್ಸೆಂಟ್ ಕಮಿಷನ್ ಬಗ್ಗೆ ಚರ್ಚೆಗೆ ಕೇಳಿದ್ದೆವು. ವಿಧಾನಸಭೆಯಲ್ಲಿ ನಮಗೆ ಚರ್ಚೆಗೆ ಅವಕಾಶವನ್ನು ನೀಡಲಿಲ್ಲ. 40 ಪರ್ಸೆಂಟ್ ಕಮಿಷನ್ ಬಗ್ಗೆ ಎಲ್ಲಾ ಕಡೆ ವರದಿ ಬಂತು. ವರದಿಗಳು ಬಂದರೂ ಪ್ರಧಾನಿ ಯಾವುದೇ ತನಿಖೆ ಮಾಡಿಸಲಿಲ್ಲ. ಇಂತಹ ಭ್ರಷ್ಟ ಸರ್ಕಾರವನ್ನು ನಾನು ಎಂದೂ ನೋಡಿರಲಿಲ್ಲ. ಸಂತೋಷ್ ಪಾಟೀಲ್ ಸಿಎಂ ಭೇಟಿಗೆ ಉಡುಪಿಗೆ ಹೋಗಿದ್ದರು. ಸಿಎಂ ಭೇಟಿಗೆ ಅವಕಾಶ ಸಿಗದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ವಾಟ್ಸಾಪ್ ಸಂದೇಶವನ್ನು ಕಳಿಸಿದ್ದಾರೆ. ಈಶ್ವರಪ್ಪನವರೇ ತನ್ನ ಸಾವಿಗೆ ಕಾರಣವೆಂದು ಬರೆದಿದ್ದಾರೆ. ಇದನ್ನು ಡೆತ್‌ನೋಟ್ ಎಂದು ಪರಿಗಣಿಸಬೇಕು. ಸಚಿವ ಈಶ್ವರಪ್ಪ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಸಂತೋಷ್ ಸಾವಿಗೆ ಸಚಿವ ಕೆ.ಎಸ್.ಈಶ್ವರಪ್ಪ ಹೊಣೆಗಾರರು. ಇದೊಂದು ನಾನ್ ಬೇಲಬಲ್ ಅಫೆನ್ಸ್. ಸಚಿವ ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರದ ಪ್ರಕರಣ ದಾಖಲಿಸಬೇಕು. ಗಂಭೀರ ಪ್ರಕರಣವಾದ ಹಿನ್ನೆಲೆ ಈಶ್ವರಪ್ಪರನ್ನು ಬಂಧಿಸಬೇಕು. ಸಚಿವ K.S.ಈಶ್ವರಪ್ಪರನ್ನು ಸಂಪುಟದಿಂದ ವಜಾ ಮಾಡಬೇಕು. ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕ್ರಮಕೈಗೊಳ್ಳುವ ವಿಶ್ವಾಸವಿದೆ. ಕಾನೂನು ಮುಂದೆ ಈ ಈಶ್ವರಪ್ಪ ಯಾರು? ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.
ಗುತ್ತಿಗೆದಾರರಿಗೆ ಕೆ.ಎಸ್.ಈಶ್ವರಪ್ಪ ಮರ್ಯಾದೆ ಕೊಡುತ್ತಿರಲಿಲ್ಲ ಗುತ್ತಿಗೆದಾರರು ಈಶ್ವರಪ್ಪ ಮನೆಗೆ ಹೋದರೆ ಗೆಟ್‌ಔಟ್ ಎಂದು ಹೇಳುತ್ತಿದ್ದರು. ಗುತ್ತಿಗೆದಾರರಿಗೆ ಕೆ.ಎಸ್.ಈಶ್ವರಪ್ಪ ಮರ್ಯಾದೆ ಕೊಡುತ್ತಿರಲಿಲ್ಲ ಎಂದು ಕಲಬುರಗಿಯಲ್ಲಿ ಗುತ್ತಿಗೆದಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗನ್ನಾಥ ಶೇಗಜಿ ಆರೋಪಿಸಿದ್ದಾರೆ. ಕಾಮಗಾರಿ ಬಿಲ್‌ಗಾಗಿ ಈಶ್ವರಪ್ಪ ಮನೆಗೆ ಹೋದ್ರೆ ಗದರುತ್ತಿದ್ದರು. ಹಲವು ಇಲಾಖೆಗಳಲ್ಲಿ ಕಾಮಗಾರಿ ಬಿಲ್‌ಗಳು ಆಗಿಲ್ಲ. ಹಲವು ಕಾಮಗಾರಿಗಳ ಆರಂಭಕ್ಕೂ ಮುನ್ನವೇ ಪರ್ಸೆಂಟೇಜ್ ನೀಡದಿದ್ದಕ್ಕೆ ಕಾಮಗಾರಿಗಳಿಗೆ ಪೂಜೆಯೇ ಆಗಿಲ್ಲ. ಬಿಲ್ ಪಾಸ್ ಮಾಡಿಸಿಕೊಳ್ಳಲು ಎಲ್ಲರಿಗೂ ಲಂಚ ನೀಡಬೇಕು. ಅಧಿಕಾರಿಗಳಿಂದ ಜನಪ್ರತಿನಿಧಿಗಳವರೆಗೆ ಪರ್ಸೆಂಟೇಜ್ ನೀಡಬೇಕು ಎಂದು ಕಲಬುರಗಿಯಲ್ಲಿ ಕಾರ್ಯದರ್ಶಿ ಜಗನ್ನಾಥ ಶೇಗಜಿ ಆರೋಪಿಸಿದ್ದಾರೆ.
ನ್ಯಾಯಾಲಯ, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಇನ್ನು ಮೃತ ಸಂತೋಷ್ ಪಾಟೀಲ್ ನಿವಾಸಕ್ಕೆ ಸಚಿವ ಮುರುಗೇಶ್ ನಿರಾಣಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಮಾತನಾಡಿದ ಅವರು, ಈಶ್ವರಪ್ಪ ಮೇಲೆ ಕಾಂಗ್ರೆಸ್ ಆರೋಪ ಸತ್ಯಕ್ಕೆ ದೂರವಾದದ್ದು. ಟೆಂಡರ್‌ಗೆ ಅದರದೇ ಆದ ಪ್ರಕ್ರಿಯೆ, ನಿಯಮ ಇರುತ್ತದೆ. ಜಾಹೀರಾತು ನೀಡುವುದು, ಸರ್ಕಾರ ಆರ್ಡರ್ ಮಾಡುವುದು. ಈ ಪ್ರಕರಣದಲ್ಲಿ ಇದ್ಯಾವುದೂ ನಡೆದೇ ಇಲ್ಲ. ಯಾವುದೇ ಕಾರಣಕ್ಕೂ ಈಶ್ವರಪ್ಪ ರಾಜೀನಾಮೆ ಕೊಡಬಾರದು. ಏನೂ ಪ್ರೂಫ್ ಇರದೇ ಆಪಾದನೆ ಮಾಡೋದು ಸರಿಯಲ್ಲ. ಯಾರೋ ಮಾಡಿದ ಆಪಾದನೆಗೆ ಲಿಂಕ್ ಮಾಡೋದು ಸರಿಯಲ್ಲ. ಪೊಲೀಸರು ತನಿಖೆ ಮಾಡಿ ರಿಪೋರ್ಟ್ ಸಲ್ಲಿಸುತ್ತಾರೆ. ತನಿಖೆ ವೇಳೆ ಎಲ್ಲಾ ಸತ್ಯಾಸತ್ಯತೆ ಗೊತ್ತಾಗುತ್ತೆ. ನ್ಯಾಯಾಲಯ, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಎಂದರು.
ಮುಸ್ಲಿಂರ ವಿರುದ್ಧ ಆರೋಪಿಸುವ ಸಂಘಟನೆಗಳು ಈಗ ಎಲ್ಲಿವೆ ಗುತ್ತಿಗೆದಾರ ಸಂತೋಷ್ ಸಾವಿಗೆ K.S.ಈಶ್ವರಪ್ಪ ನೇರ ಕಾರಣ. ಮುಸ್ಲಿಂರ ವಿರುದ್ಧ ಆರೋಪಿಸುವ ಸಂಘಟನೆಗಳು ಈಗ ಎಲ್ಲಿವೆ? ಮುಂಚೂಣಿ ಕಾರ್ಯಕರ್ತನ ಸಾವಿಗೆ ಹೇಗೆ ನ್ಯಾಯ ಒದಗಿಸ್ತೀರಿ ಎಂದು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರಶ್ನಿಸಿದ್ದಾರೆ. ಕ್ಷುಲ್ಲಕ ವಿಚಾರಗಳಿಗೆಲ್ಲಾ ಬಿಜೆಪಿ, RSS, ಬಜರಂಗದಳ ಮುಸ್ಲಿಂರ ವಿರುದ್ಧ ಆರೋಪಿಸ್ತಿದ್ರು. ಪ್ರತಿಭಟನೆ ಮಾಡುತ್ತಿದ್ದರು, ಈಗ ಹೇಗೆ ನ್ಯಾಯ ಕೇಳುತ್ತೀರಿ. ಕೆ.ಎಸ್.ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬೆಂಗಳೂರಿನಲ್ಲಿ ಅಬ್ದುಲ್ ಮಜೀದ್ ಮೈಸೂರು ಒತ್ತಾಯಿಸಿದ್ರು.
ರಾಜೀನಾಮೆ ಪಡೆಯದಿದ್ದರೆ ಸಾಕ್ಷ್ಯ ನಾಶ ಸಾಧ್ಯತೆ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ FIR ದಾಖಲಾಗಿದೆ. ಕೂಡಲೇ ಸರ್ಕಾರ ಈಶ್ವರಪ್ಪ ರಾಜೀನಾಮೆ ಪಡೀಬೇಕು ಎಂದು ಮೈಸೂರು ನಗರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಒತ್ತಾಯಿಸಿದ್ದಾರೆ. ರಾಜೀನಾಮೆ ಪಡೆಯದಿದ್ದರೆ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ. ಸರ್ಕಾರದ ವಿರುದ್ಧ 40% ಕಮಿಷನ್ ಆರೋಪವಿತ್ತು. ಪ್ರಧಾನಿ ನರೇಂದ್ರ ಮೋದಿಗೆ ಕೆಂಪಣ್ಣ ಪತ್ರ ಬರೆದಿದ್ದರು. ಈಗ ಸಂತೋಷ್ ಆತ್ಮಹತ್ಯೆ ಇದಕ್ಕೊಂದು ಉದಾಹರಣೆ. ಇದೊಂದು ಭ್ರಷ್ಟ ಸರ್ಕಾರ ಅನ್ನೋದು ಸಾಬೀತಾಗಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಪ್ರಧಾನಿ ಮೋದಿ ಮೌನವಾಗಿದ್ದಾರೆ. ಪ್ರಧಾನಿ ಮೌನವಾಗಿದ್ದಾರೆಂದರೆ ಏನು ಅರ್ಥ. ನೈತಿಕ ಹೊಣೆ ಹೊತ್ತು ಈಶ್ವರಪ್ಪ ರಾಜೀನಾಮೆ ನೀಡಲಿ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ ಎಂದು ಆರ್.ಧ್ರುವನಾರಾಯಣ ಒತ್ತಾಯಿಸಿದ್ದಾರೆ.
ನೈತಿಕತೆ ಇದ್ರೆ ತಕ್ಷಣ ಸಚಿವ ಈಶ್ವರಪ್ಪ ರಾಜೀನಾಮೆ ನೀಡಬೇಕು ನೈತಿಕತೆ ಇದ್ರೆ ತಕ್ಷಣ ಸಚಿವ ಈಶ್ವರಪ್ಪ ರಾಜೀನಾಮೆ ನೀಡಬೇಕು ಎಂದು ಗದಗದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ. ನೈತಿಕತೆ ಹೊಣೆಹೊತ್ತು ಮೊದಲು ರಾಜೀನಾಮೆ ನೀಡಿ ಹೊರ ಬನ್ನಿ. ಮೊದಲು ತನಿಖೆಯಾಗಲಿ ನೀವು ತಪ್ಪಿತಸ್ಥ ಅಲ್ಲ ಅಂತಾದ್ರೆ ಮತ್ತೆ ಜೊಯಿನ್ ಆಗಿ. ಈ ಹಿಂದೆ ಎಲ್ ಕೆ ಅಡ್ವಾನಿಯವರು ಈ ರೀತಿ ಸಾಕಷ್ಟು ಬಾರಿ ಆದರ್ಶ ಪಾಲಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನವರಿಗೆ ಆಹಾರ ಒದಗಿಸುವುದು ಸರಿಯಲ್ಲ. ಬಿಜೆಪಿ ಭ್ರಷ್ಟಾಚಾರ ಮಿತಿಮೀರಿದೆ, 40%ಅನ್ನೋದು ಓಪನ್ ಆಗಿಯೇ ಚರ್ಚೆಯಾಗ್ತಿದೆ. ಈ ಹಿಂದೆಯೂ ಸಂತೋಷ್ ಪಾಟೀಲ್ ರಾಜ್ಯಪಾಲರಿಗೆ, ಮುಖ್ಯಮಂತ್ರಿಗೆ ಪ್ರಧಾನಿಗೂ ಸಹ ಪತ್ರ ಬರೆದಿದ್ದರು. ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಬೆಲೆ ಇಲ್ಲ, ಕಾಂಗ್ರೆಸ್ ಜೆಡಿಎಸ್ ರೀತಿಯಲ್ಲಿ ನೀವು ಧೂಳಿಪಟವಾಗ್ತಿರಿ ಎಚ್ಚರ ಇರಲಿ. ಬಿಜೆಪಿ ಅವ್ರು ಸಾಕಷ್ಟು ಜನ ಕಾರ್ಯಕರ್ತರನ್ನ ಬಲಿ ತೆಗೆದುಕೊಳ್ತಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಸಚಿವ ಈಶ್ವರಪ್ಪ ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ ಕಾಂಗ್ರೆಸ್ ನಿಯೋಗ
Published On - 11:47 am, Wed, 13 April 22