Dharwad: ಮಾನವ ಜಾತಿ ತಾನೊಂದೆ ವಲಂ; ‘ನಮ್ಮೆಲ್ಲರ ಗುಪ್ತ ಒಪ್ಪಿಗೆಯಿಲ್ಲದೇ ಯಾರೂ ಅಪರಾಧ ಮಾಡುವುದು ಸಾಧ್ಯವಿಲ್ಲ’

Chidambara Narendra : ನೀವು ಒಂದೇ ಕೋಮಿನ ಹಿಂಸೆಯನ್ನ ವಿರೋಧಿಸುತ್ತೀರಿ, ಇನ್ನೊಂದು ಕೋಮು ಹಿಂಸೆ ಮಾಡಿದಾಗ ಬಾಯಿ ಮುಚ್ಚಿಕೊಂಡಿರುತ್ತಿರಿ ಎಂದು ನ್ಯಾಯ ಮಾತಾಡಿ ನಮ್ಮ ಬಾಯಿ ಮುಚ್ಚಿಸಲು ಬರುವ ಜನರ ಹಿಂದಿನ ಹುನ್ನಾರಗಳನ್ನ ಗಮನಿಸಿ.

Dharwad: ಮಾನವ ಜಾತಿ ತಾನೊಂದೆ ವಲಂ; ‘ನಮ್ಮೆಲ್ಲರ ಗುಪ್ತ ಒಪ್ಪಿಗೆಯಿಲ್ಲದೇ ಯಾರೂ ಅಪರಾಧ ಮಾಡುವುದು ಸಾಧ್ಯವಿಲ್ಲ’
ಚಿದಂಬರ ನರೇಂದ್ರ
Follow us
ಶ್ರೀದೇವಿ ಕಳಸದ
|

Updated on: Apr 13, 2022 | 1:30 PM

Vandalising Stalls in Dharwad : ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗಿಕೆರಿ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ಶನಿವಾರ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್​ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುವಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ.

ಧಾರವಾಡದ ಕವಿ, ಅನುವಾದಕ ಚಿದಂಬರ ನರೇಂದ್ರ ಸದ್ಯ ವಾಸವಾಗಿರುವುದು ಬೆಂಗಳೂರಿನಲ್ಲಿ. ಅವರ ಈ ಬರಹ ನಿಮ್ಮ ಓದಿಗೆ. 

ನಮ್ಮ ಧಾರವಾಡ ಕೆರೆಗಳ ಊರು, ಹಾಲಗೇರಿ, ಎಮ್ಮಿಕೆರಿ, ಕೆಲಗೆರಿ ಹೀಗೆ ಹತ್ತು ಹಲವು ಕೆರೆಗಳು ಊರ ತುಂಬ. ಈಗ ಬಹುತೇಕ ಮಂದಿಯ ಬದುಕು ಕೆರೆಗಳ ಮೇಲೆಯೇ ಸಾಗಿದೆಯಾದರೂ ಒಂದು ಕಾಲದಲ್ಲಿ ಎಲ್ಲ ಕೆರೆಗಳೂ ತುಂಬಿ ತುಳುಕುತ್ತಿದ್ದವು.

ನನಗೆ ನೆನಪು ಇರೋ ಹಾಗೆ ಆಗ ದತ್ತಾತ್ರೇಯ ಗುಡಿಯೊಳಗೆ ನಿಂತು ನೋಡಿದರೆ ಹಾಲಗೆರಿಯಲ್ಲಿ ಸ್ವಲ್ಪ ನೀರು ಕಾಣಿಸುತ್ತಿತ್ತು, ಈಗ ಅಲ್ಲಿ ಭರ್ತಿ ಮಾರುಕಟ್ಟೆ. ಕೆರೆಗಳಂತೆಯೇ ಧಾರವಾಡ ತುಂಬಿ ತುಳುಕುತ್ತಿರುವುದು ಹಣಮಪ್ಪನ ಗುಡಿಗಳಿಂದ ಕೂಡ. ಹಾಲಗೇರಿ ಹಣಮಂತ, ರಾಯರ ಹಣಮಂತ, ನುಗ್ಗಿಕೆರಿಯ ಹಣಮಪ್ಪ ಹೀಗೆ ಹಲವಾರು ಹಣಮಪ್ಪಂದಿರು ಊರ ತುಂಬ. ಅದೇನೋ ನಮ್ಮ ಜನಕ್ಕೆ ರಾಮನಿಗಿಂತ ಹಣಮಪ್ಪನೇ ಹೆಚ್ಚು ಹತ್ತಿರ. ಪ್ರತೀ ಎರಡು ಗಲ್ಲಿಗೊಂದು, ಅಲ್ಲಲ್ಲಿ ಗಿಡಮರಗಳ ಕೆಳಗಿನ ಚಿಕ್ಕಚಿಕ್ಕ ಗೂಡು ಗುಡಿಗಳಲ್ಲಿ ಹನುಮಂತ ವಿರಾಜಮಾನ. ಹಸುಗೂಸುಗಳ ಕೆಮ್ಮು ಜ್ವರಗಳಿಂದ ಹಿಡಿದು, ಸ್ಕೂಲು ಹುಡುಗರನ್ನ ಪಾಸು ಮಾಡಿಸುವ, ಹರೆಯದವರಿಗೆ ಮದುವೆ ಮಾಡಿಸುವ, ದಂಪತಿಗಳಿಗೆ ಮಕ್ಕಳನ್ನು ಹರಸುವ, ಮಳೆಬೆಳೆ ಆಗುವಂತೆ ನೋಡಿಕೊಳ್ಳುವ, ದಾಯಾದಿ ಜಗಳಗಳನ್ನ ಬಗೆಹರಿಸುವ, ಕೊನೆಗೆ ಇಲೆಕ್ಷನ್ ರಾಜಕಾರಣದಲ್ಲಿ ಕೂಡ ಹಣಮಪ್ಪನದೇ ಮಧ್ಯಸ್ಥಿಕೆ. ಈ ಹಣಮಪ್ಪನ ಜೊತೆ ನಮ್ಮ ಜನರದು ಏಕವಚನದ ಗೆಳೆತನ. ರಾಮಾಂಜನೇಯ ಯುದ್ಧದಲ್ಲಿ ರಾಮನ ನೀರಿಳಿಸಿದ ಭಕ್ತಾಗ್ರೇಸರ ನಮ್ಮ ಕೆಲಸ ಮಾಡಿಕೊಡದಿರಲಾರನೇ ಎನ್ನುವುದು ಜನರ ಪ್ರೀತಿಯ ನಂಬಿಕೆ ಮತ್ತು ಜನರ ನಂಬಿಕೆಗಳಿಗೆ ಹಣಮಪ್ಪನೂ ಯಾವತ್ತೂ ಚ್ಯುತಿ ಬರುವಂತೆ ನಡೆದುಕೊಂಡದ್ದಿಲ್ಲ. ಸಂಕಟ ಬಂದಾಗಲೆಲ್ಲ ಎಲ್ಲ ಧರ್ಮ ಜಾತಿಯ ಜನರೂ ಹಣಮಪ್ಪನಿಗೆ ಶರಣಾದವರೇ. ಗರ್ಭಗುಡಿಯಲ್ಲಿನ ಮಡಿ ಮೈಲಿಗೆಯ ನಡುವೆ ಉಸಿರು ಬಿಗಿಹಿಡಿದವನಂತೆ ಕಾಣುವ ಹಣಮಪ್ಪ ಭಕ್ತರ ಜೊತೆಗಿನ ವ್ಯವಹಾರದಲ್ಲಿ ಮಾತ್ರ ಭಾರೀ ಡೆಮಾಕ್ರಟಿಕ್.

ರಾಜೀವ ತಾರಾನಾಥ ಅವರ ಈ ಬರಹವನ್ನೂ ಓದಿ : Dharwad: ಮಾನವ ಜಾತಿ ತಾನೊಂದೇ ವಲಂ; ‘ಸಾಕ ನಿಲ್ಲಸ್ರೀ ಆರ್ತನಾದ, ಬುದ್ಧಿವಂತಿಕೆಯಿಂದ ಬಲಿಷ್ಠ ‘ನಾದ’ ಹೊಮ್ಮಿಸ್ರೀ’

ಇಂಥ ಜಾಗ್ರತ ಹಣಮಪ್ಪನ ಒಂದು ವಾಸಸ್ಥಾನವೇ ಧಾರವಾಡದಿಂದ ಏಳೆಂಟು ಮೈಲಿ ದೂರದಲ್ಲಿರುವ ನುಗ್ಗಿಕೆರಿ ಹಣಮಪ್ಪನ ಗುಡಿ. ವಿಜಯನಗರದ ಅರಸರ ಕಾಲದಲ್ಲಿ ವ್ಯಾಸತೀರ್ಥರಿಂದ ಸ್ಥಾಪಿಸಲ್ಪಟ್ಟಿತು ಎನ್ನುವ ಐತಿಹ್ಯವಿರುವ ಈ ಗುಡಿ, ಪ್ರಕೃತಿಯ ನಡುವೆ ಇನ್ನೂ ಜನಜಂಗುಳಿಯಿಂದ ದೂರವಾಗಿ, ಭಕ್ತರನ್ನೂ, ಟೂರಿಸ್ಟ್ ಗಳನ್ನೂ, ವಾಕಿಂಗ್ ಪ್ರಿಯರನ್ನೂ, ಕಾಲೇಜು ಹುಡುಗ ಹುಡುಗಿಯರನ್ನೂ ಏಕಪ್ರಕಾರವಾಗಿ ಆಕರ್ಷಿಸುತ್ತ ಧಾರವಾಡಿಗರು ಸ್ವಲ್ಪಹೊತ್ತಾದರೂ ನಿರಾಳವಾಗಿ ಕಾಲಕಳೆಯುವಂತೆ ಮಾಡಿರುವ ಜಾಗ.

ಜನ ಹಬ್ಬಗಳನ್ನು ಉತ್ಸವದಂತೆ, ತಮ್ಮ ಹರ್ಷೋಲ್ಲಾಸಗಳ ಅಭಿವ್ಯಕ್ತಿಯೆಂಬಂತೆ, ಸುತ್ತ ಸಮುದಾಯದ ಜೊತೆ ಸೇರಿಕೊಂಡು ಆಚರಿಸುತ್ತಿದ್ದ ನೆನಪು ಬಹಳ ಹಿಂದಿನದೇನಲ್ಲ. ಈಗ ಹಬ್ಬಗಳೆಂದರೆ ನಾನಾ ನಿಷೇಧಾಜ್ಞೆಗಳು, ಮಂದಿರ, ಮಸೀದಿ, ಚರ್ಚುಗಳ ಸುತ್ತ ಪೊಲೀಸರ ಕಾವಲು. ಕೋಮುಸಂಘಟನೆಗಳ ಬೆದರಿಕೆಗಳು, ಮೀಡಿಯಾಗಳ ಕಿರುಚಾಟಗಳು. ಯಾವ ಕ್ಷಣದಲ್ಲಿ ಏನಾಗುತ್ತದೋ ಎಂದು ಭಾವುಕರು ಉಸಿರು ಬಿಗಿಹಿಡಿದು, ಹಬ್ಬ ಮುಗಿದುಹೋದರೆ ಸಾಕು ಎನ್ನುವ ಸ್ಥಿತಿಯಲ್ಲಿ ಈಗ ನಾವು. ಬದಲಾದ ರಾಜಕೀಯ ಸ್ಥಿತ್ಯಂತರದ ಕಾರಣವಾಗಿ ಬದಲಾಗುತ್ತಿರುವ ಜನರ ಮಾನಸಿಕತೆ ಮತ್ತು ಕುಸಿದು ಬೀಳುತ್ತಿರುವ ಅವರ ಬದುಕಿನ ಭರವಸೆಗಳು ಜನರನ್ನು ನೂಕುತ್ತಿವೆ ಹಿಂಸೆ ಮತ್ತು ದ್ವೇಷದ ರಾಜಕಾರಣದಲ್ಲಿ.

ಒಬ್ಬ ನಬೀಸಾಬರು ಹಣಮಪ್ಪನ ಗುಡಿಯಂಗಳದಲ್ಲಿ ಕಲ್ಲಂಗಡಿ ವ್ಯಾಪಾರ ಮಾಡುತ್ತಿದ್ದರೆ ಯಾರಿಗೆ ಯಾಕೆ ಅಸಮಾಧಾನ ಆಗಬೇಕು? ರಫಿಯನ್ನ, ಬಿಸ್ಮಿಲ್ಲಾಖಾನರನ್ನ ಕೇಳುವ ನಾವು, ಗಾಲೀಬ್, ಸಾಹೀರ್ ರನ್ನ ಆರಾಧಿಸುವ ನಾವು, ಬಗೆಬಗೆಯ ಮುಘಲಾಯಿ ಆಹಾರಗಳನ್ನ ಚಪ್ಪರಿಸಿ ತಿನ್ನುವ ನಾವು, ತೊಂದರೆಯಾದಾಗ ದರ್ಗಾಗಳಲ್ಲಿ ಚಾದರ ಹೊದಿಸುತ್ತಿದ್ದ ನಾವು ಏಕಾಏಕಿ ಒಂದು ಸಮುದಾಯದ ವಿರುದ್ಧ ಹಲ್ಲು ಮಸೆಯುತ್ತಿರುವುದಕ್ಕೆ ಏನು ಕಾರಣ? ಇದನ್ನ ಪ್ರತ್ಯಕ್ಷವಾಗಿ ಮಾಡುತ್ತಿರುವ ಬಡಹುಡುಗರ ಹಿಂದೆ ಇರುವ ಶಕ್ತಿಗಳ ಬಗ್ಗೆ ನಮಗೆ ಸ್ಪಷ್ಟವಾಗಿ ಗೊತ್ತಿರುವಾಗಲೂ ನಾವು ಇಂಥದಕ್ಕೆಲ್ಲ ಮೌನವಾಗಿರುವುದು ಹಾಗು ಇಂಡಿಫರೆಂಟ್ ಆಗಿರೋದಕ್ಕೆ ಯಾವ ಬಲವಾದ ಕಾರಣಗಳಿವೆ?

ವಿಕ್ರಮ ವಿಸಾಜಿ ಅನುವಾದಿಸಿದ ಕವನ : Dharwad: ಮಾನವ ಜಾತಿ ತಾನೊಂದೆ ವಲಂ; ಕರುಣೆಯನ್ನು ನಾಶಗೊಳಿಸುವುದು, ಶೃಂಗಾರವನ್ನು ಇಲ್ಲವಾಗಿಸುವುದು

“ನಮ್ಮೆಲ್ಲರ ಗುಪ್ತ ಒಪ್ಪಿಗೆಯಿಲ್ಲದೇ ಯಾರೂ ಅಪರಾಧ ಮಾಡುವುದು ಸಾಧ್ಯವಿಲ್ಲ’’ ಅಂತಾನೆ ಜಿಬ್ರಾನ್. ನಾವು ನಮ್ಮನ್ನ ಮತ್ತೆ ಪ್ರಶ್ನಿಸಿಕೊಳ್ಳುವುದು ಈಗ ಎಲ್ಲಕ್ಕಿಂತ ಮುಖ್ಯ. ಯಾವ ಕಾರಣಕ್ಕೂ ರಾಜಕೀಯಕ್ಕೆ ಸಂಬಂಧಿಸದ ಮನೆಯ ಹೆಣ್ಣುಮಕ್ಕಳು, ಭೋಳೆ ಗಂಡಸರಪ, ವೃದ್ಧರು, ಹರೆಯದ ಹುಡುಗರೂ ಕೂಡ ತಮಗೇ ಅರಿವಿಲ್ಲದಂತೆ ಸುಳ್ಳುಸುದ್ದಿಗಳನ್ನ ನಂಬುತ್ತ, ಹರಡುತ್ತ ಒಂದು ವಿಶಾಲ ದ್ವೇಷದ ಯೋಜನೆಯ ಭಾಗವಾಗುತ್ತಿರುವುದನ್ನು ನೋಡುತ್ತ ಸುಮ್ಮನಿರುವುದು ಬೇಗೆ ಸಾಧ್ಯ? ಇಂಥ ಅನಾಹುತಗಳಾದಾಗ ಒಂದಿಷ್ಟು ಮಾತನಾಡಿ ಮತ್ತೆ ನಮ್ಮ ಬದುಕಿನ ಜಂಜಾಜಟದಲ್ಲಿ ಮುಳುಗಿಹೋಗುವ ನಾವು ಇಂಥ ಕರಾಳ ಯೋಜನೆಯ ದೀರ್ಘಗಾಮಿ ಪರಿಣಾಮಗಳನ್ನ ಯಾಕೆ ಮುಂದಾಲೋಚಿಸುತ್ತಿಲ್ಲ?

ನೀವು ಒಂದೇ ಕೋಮಿನ ಹಿಂಸೆಯನ್ನ ವಿರೋಧಿಸುತ್ತೀರಿ, ಇನ್ನೊಂದು ಕೋಮು ಹಿಂಸೆ ಮಾಡಿದಾಗ ಬಾಯಿ ಮುಚ್ಚಿಕೊಂಡಿರುತ್ತಿರಿ ಎಂದು ನ್ಯಾಯ ಮಾತಾಡಿ ನಮ್ಮ ಬಾಯಿ ಮುಚ್ಚಿಸಲು ಬರುವ ಜನರ ಹಿಂದಿನ ಹುನ್ನಾರಗಳನ್ನ ಗಮನಿಸಿ, ಕೆಲವು ವೈಯಕ್ತಿಕ ಕಾರಣದ ಹಿಂಸೆಗಳಿಗೆ ರಾಜಕೀಯ ರೂಪ ಕೊಡುವ ಮೂಲಕ, ತಮಗೆ ದೊರೆತಿರುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು, ಇವರ ಕೋಮು ಪ್ರೊಪಗಾಂಡಾ ವಿರೋಧಿಸಿದ ಹೋರಾಟಗಾರರನ್ನ ವರ್ಷಗಟ್ಟಲೇ ಜೈಲಿನಲ್ಲಿ ಕೊಳೆಯುವಂತೆ ಮಾಡುವ ಮೂಲಕ, ವಿವಿಧ ಕಾನೂನುಗಳಡಿ ಅಲ್ಪಸಂಖ್ಯಾತರ ಹಕ್ಕುಗಳನ್ನ, ಸ್ವಾತಂತ್ರ್ಯವನ್ನ, ಆಶೋತ್ತರಗಳನ್ನ ನಿರ್ಬಂಧಿಸುವ ಮೂಲಕ, ಕೆಲವು ಉಗ್ರವಾದದ ಕೃತ್ಯಗಳನ್ನ ಇಡೀ ಸಮುದಾಯದ ಮೇಲೆ ಆರೋಪಿಸುವ ಮೂಲಕ, ತಮ್ಮ ರಾಜಕೀಯ ಮತ್ತು ಕೋಮು ಅಜೆಂಡಾನ ವ್ಯವಸ್ಥಿತ ರೀತಿಯಲ್ಲಿ, ಮತ್ತು ಈ ರೀತಿಯ ವ್ಯವಹಾರ ಬಹಳ ಸಹಜವೇನೋ ಎನ್ನುವ ರೀತಿಯಲ್ಲಿ ಬಿತ್ತುವ ಪ್ರಯತ್ನಗಳನ್ನ ಬಹಳ ಎಚ್ಚರಿಕೆಯಿಂದ ಮತ್ತು ಕಠಿಣವಾಗಿ ವಿರೋಧಿಸಬೇಕಿದೆ.

ಧಾರವಾಡದ ಕುರಿತಾದ ಒಂದು ಪ್ರಸಿದ್ಧ ಮಾತಿದೆ, ಊರಲ್ಲಿ ನೀವು ಎಲ್ಲೇ ನಿಂತು ಕಲ್ಲು ಬೀಸಿದರೂ ಅದು ಒಬ್ಬ ಕವಿಯ ತಲೆಯ ಮೇಲಂತೂ ಖಂಡಿತವಾಗಿ ಬೀಳುತ್ತದೆ. ಹೀಗೆ ವರಕವಿಗಳಿಂದ ಹಿಡಿದು ಮರಿಕವಿಗಳತನಕ ತುಂಬಿ ತುಳುಕುತ್ತಿರುವ ಸಭ್ಯ ಊರು ಕೆಲವಾರು ವರ್ಷಗಳಿಂದ ಜನ ವಿರೋಧಿಗಳ ಪಾಲಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಯಾವ ಆಧಾರದ ಮೇಲೆ ಇಲ್ಲಿ ಶಾಂತಿ ಸುವ್ಯವಸ್ಥೆಯ ಕನಸು ಕಾಣೋದು? ಧಾರವಾಡದ ಕೆರೆಗಳೆಲ್ಲ ಬತ್ತಿ ಹೋಗುತ್ತಿರುವಾಗ, ಧಾರವಾಡಿಗರ ಅಂತಃಕರಣ ಮತ್ತೆ ಇಲ್ಲಿನ ಜನರಲ್ಲಿ, ಸಮಾಜದಲ್ಲಿ ಸಮಾಧಾನ ನೆಲೆ ಮಾಡಲಿ.

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನು ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ಅಪ್ಪ, ಹರಿದ ಅಂಗಿಯ ತಾ ತೊಟ್ಟು ಬಣ್ಣಬಣ್ಣದ ಬಟ್ಟೆಯ ನನಗಿಟ್ಟ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ