Dharwad: ಮಾನವ ಜಾತಿ ತಾನೊಂದೇ ವಲಂ; ‘ಸಾಕ ನಿಲ್ಲಸ್ರೀ ಆರ್ತನಾದ, ಬುದ್ಧಿವಂತಿಕೆಯಿಂದ ಬಲಿಷ್ಠ ‘ನಾದ’ ಹೊಮ್ಮಿಸ್ರೀ’

Pt. Rajiv Taranath : ‘ನಡೂರಾತ್ರಿ ಯಾರೋ ನನ್ನ ತಲೀ ಎತ್ಲಿಕ್ಹತ್ತಂಗಾತು. ನನ್ನ ತಲೀ ಕೆಳಗ ಮೆತ್ತನ್ನ ದಿಂಬ ಇಟ್ಟು ತಲಿ ಸರಿ ಮಾಡಿದ್ಹಂಗನೂ ಆತು. ಕಣ್​ಬಿಟ್ಟ ನೋಡಿದೆ. ಯಾವ ತಾಯಿ ಕಪಾಳ ಕೆಂಪ ಮಾಡಿದ್ದಳೋ ಅಕಿನ ದಿಂಬು ಕೊಟ್ಟಿದ್ದಳು. ಇದು ತಾಯ್ತನ ಅಂದ್ರ.’

Dharwad: ಮಾನವ ಜಾತಿ ತಾನೊಂದೇ ವಲಂ; ‘ಸಾಕ ನಿಲ್ಲಸ್ರೀ ಆರ್ತನಾದ, ಬುದ್ಧಿವಂತಿಕೆಯಿಂದ ಬಲಿಷ್ಠ ‘ನಾದ’ ಹೊಮ್ಮಿಸ್ರೀ’
ಪಂ. ರಾಜೀವ ತಾರಾನಾಥ
Follow us
ಶ್ರೀದೇವಿ ಕಳಸದ
|

Updated on: Apr 11, 2022 | 5:00 PM

Vandalising Stalls in Dharwad : ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗಿಕೆರಿ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ಶನಿವಾರ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್​ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುವಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ.

ಮೈಸೂರಿನಲ್ಲಿ ವಾಸಿಸುತ್ತಿರುವ ಹಿರಿಯ ಸರೋದ್​ ವಾದಕ ಪಂ. ತಾಜೀವ ತಾರಾನಾಥ ಅವರನ್ನು ಮಾತನಾಡಿಸಿದಾಗ… 

ಏನ್ ಮಾತಾಡೂದ್ರಿ? ನಮ್ಮ ಕಣ್ಣೊಳಗನ ನಾವು ನಾಚಿಗ್ಗೇಡಿಯಾಗೇವಿ. ನಾಚಿಕಿ ಅನ್ನೂದನ್ನ ಬಿಟ್ಟು ಬ್ಹಾಳ ಹೀನ ಕೆಲಸಗಳನ್ನ ಮಾಡ್ಲಿಕ್ಕೆ ಶುರು ಮಾಡೇವಿ. ನಮ್ಮ ಜನನಾಯಕರು ಹಿಂಗ ಮಾತಾಡಿದ್ರ ನಮ್ಮ ಮಂದಿ ಎಲ್ಲಿ ಹೋಗಬೇಕು?

ಅಲ್ರೀ ಇದು ಗಾಂಧೀ ದೇಶ. ನಮ್ಮ ಉತ್ತರ ದಕ್ಷಿಣ ಎರಡೂ ಕಡೆ ಸಂಗೀತಗಳೂ ಸೇರಿದಂಥಾ ನೆಲಾ ನಮ್ಮದು. ಕೊಲ್ತೇವಿ, ಅತ್ಯಾಚಾರ ಮಾಡ್ತೇವಿ ಅಂತ ಘಂಟಾಘೋಷವಾಗಿ ಹೇಳ್ತಾರಲ್ರೀ ಇವ್ರು? ಇಂಥದನ್ನೆಲ್ಲಾ ಅವರಿಗಿಂಥ ನೂರಪಟ್ಟು  ಜೋರಾಗಿನ ಖಂಡಿಸ್ತೇನಿ. ಹಿಂಗ ಮಾಡೀದ್ರ ದೇಶ ಉಳಿಯೂದಿಲ್ಲ. ನಮಗ ನಮ್ಮ ಆದ ಸಂಸ್ಕೃತಿ ಅದ. ಇತಿಹಾಸ ಅದ. ತೊಂಬತ್ತು ವರ್ಷದ ನಾನು ಕಣ್ಣಾರೆ ಕಂಡೀನಿ, ಅನುಭವಿಸೀನಿ. ಆದ್ರ ಈಗ ಮಾನಿಲ್ಲ ಮರ್ಯಾದಿಲ್ಲ, ಒಟ್​ ನಾಚಿಗ್ಗೇಡು ನಡೀತಿರೂದನ್ನೆಲ್ಲಾ ನೋಡೀದ್ರ.

ಇಲ್ಲಾ ಇದರಿಂದ ಹೊರ ಬರಲಿಕ್ಕೇ ಬೇಕು. ನಾನೊಬ್ಬ ಸಂಗೀತಗಾರ. ಈ ದೇಶದೊಳಗಿರೋ ನಮ್ಮ ಸಂಗೀತದೊಳಗಿನಿಂದನ ದೊಡ್ಡ ಪಾಠ ನಮಗದ. ಎಲ್ಯದೀರಿ ಜಾತಿ ಧರ್ಮಾ ಇಲ್ಲಿ? ನಮ್ಮ ಗುರುಗಳು ಅಲಿ ಅಕ್ಬರ್ ಖಾನರ ಮೊದಲನೇ ಹೆಂಡತಿ ಜುಬೇದಾ. ಎರಡನೇ ಹೆಂಡತಿ ರಾಜದುಲ್ಹಾರಿ ಅಥವಾ ರೇಖಾ.

ಒಮ್ಮೆ ಏನಾತು… ಕಲಕತ್ತಾದಾಗ ಗುರು ಖಾನ್ ಸಾಹೇಬರ ಕಡೆ ಶಿಷ್ಯವೃತ್ತಿ ಮಾಡಬೇಕಾದ್ರ, ‘ನೋಡು ನಾ ಊರಿಗೆ ಹೊಂಟೇನಿ. ನೀ ರಾತ್ರಿ ನಮ್ಮನಿಯೊಳಗ ಬಂದ ಇದ್ದಬಿಡು. ಹೆಂಡತಿ ಮಕ್ಕಳು ಅಷ್ಟ ಇರ್ತಾವು’ ಅಂದ್ರು. ಆ ಪ್ರಕಾರ ರಾತ್ರಿ ಅವರ ಮನೀಗೆ ಹೋಗಿ ಬಾಗಲಾ ಬಡದೆ. ಅವರ ಹೆಂಡತಿ ಬಾಗಲಾ ತಗದ್ರು. ನನ್ ಬಾಯಿಂದ ಬಿಯರ್ ವಾಸನಿ ಬಂದಿದ್ದ ತಡಾ, ಕಪಾಳಕ್ಕ ಒಂದ ಬಿಗದು, ನಡೀ ಮಲ್ಕೋ ನಡೀ ಅಂತ ಒಳಗ ಹೋದರು.  ನಾನು ಅಲ್ಲೇ ಒಂದ್ಕಡೆ ಕೆಂಪ ಸಿಮೆಂಟಿನ ನೆಲದ ಮ್ಯಾಲೆ ಮಲ್ಕೊಂಡೆ. ನಡೂರಾತ್ರಿ ಯಾರೋ ನನ್ನ ತಲೀ ಎತ್ಲಿಕ್ಹತ್ತಂಗಾತು. ನನ್ನ ತಲೀ ಕೆಳಗ ಮೆತ್ತನ್ನ ದಿಂಬ ಇಟ್ಟು ತಲಿ ಸರಿ ಮಾಡಿದ್ಹಂಗನೂ ಆತು. ಕಣ್​ಬಿಟ್ಟ ನೋಡಿದೆ. ಯಾವ ತಾಯಿ ಕಪಾಳ ಕೆಂಪ ಮಾಡಿದ್ದಳೋ ಅಕಿನ ದಿಂಬು ಕೊಟ್ಟಿದ್ದಳು. ನನಗೇನು ಮಾಡಬೇಕೋ ಗೊತ್ತಾಗಲಿಲ್ಲ.ಈಗನೂ ಕಪಾಳ ಮುಟ್ಕೊಂಡ್ರ ಇದೆಲ್ಲಾ ನೆನಪಾಗ್ತದ. ಇದಕ್ಕ ಅಂತಾರ್ರೀ ತಾಯಿತನ ಅಂತ. ತಾಯಿ ಇದ್ದಾಕಿ ಹೊಡೀತಾಳ ಬಡೀತಾಳ ಮತ್ತ ಪ್ರೀತಿ ತೋರಸ್ತಾಳ. ಆ ಕಾಲನ ಬ್ಯಾರೇ.

ಅವರೆಲ್ಲಾ ಮುಸಲ್ಮಾನರು. ಖರೇ ಯುಗಪುರುಷರು ಅವರೆಲ್ಲಾ. ನಮ್ಮಲ್ಲಿ ಹಿಂದೂಸ್ತಾನಿ ಒಳಗ ಭೀಮಸೇನ ಜೋಶಿ, ಬಸವರಾಜ ರಾಜಗುರು, ವೆಂಕಟೇಶ ಕುಮಾರ, ನಾವೆಲ್ಲಾ ಒಂದರೀ. ಆ ನಮೂನಿ ಸಂಗೀತದ ಛಾಯೆಯಲ್ಲಿ ಎಂದೋ ಒಂದಾಗಿಬಿಟ್ಟೇವಿ. ಈಗನೂ ಹಿಂಗ ಇರಲಿಕ್ಕೆ ಬಯಸ್ತೇವಿ. ಹೆಚ್ಚು ಆಸ್ಥೆ, ಪ್ರೀತಿಯಿಂದ ಬೆಳೆದ ಮನುಷ್ಯ ಯಾವಾಗಲೂ ದೇಶವನ್ನ ಮುಂದಕ್ಕ ಒಯ್ತಾನು. ಆದ್ರ ಅದನ್ನ ಬಿಟ್ಟು ಇವರನ್ನ ಕಡೀ ಇವರನ್ನ ಬಡೀ, ಇವರು ಇಲ್ಲಿರಬಾರದು ಅವರು ಅಲ್ಲಿರಬಾರದು, ನಾನ್ಸೆನ್ಸ್​ ಇದೆಲ್ಲಾ!

ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ‘ಕ್ಷಮೆ ಇರಲಿ, ನಾನು ಹೋರಾಟಗಾರನಲ್ಲ’

ರಷ್ಯಾ ಉಕ್ರೇನ್ ಮುಳುಗಿ ಹೋಗಲಿಕ್ಹತ್ತದ್ರೀ. ಇಲ್ಲಿ? ನೆನಪಿಟ್ಕೋಳ್ರಿ ಈಗಿನ ಈ ದೇಶದ ಬಹುಸಂಖ್ಯಾತ ಮಂದಿ ನಾವೆಲ್ಲರೂ ಕ್ಷುದ್ರ ಜೀವಿ ಆಗೇವಿ. ಮನಿ ಸುಡೂದು, ಖೂನಿ ಮಾಡೋದು, ಅಂಗಡಿ ನಾಶ ಮಾಡೂದು ಏನ್ರಿ ಇದೆಲ್ಲ? ಈವತ್ತ ನಾಚಿಕೆಯನ್ನ ಉಗ್ರರೂಪದಲ್ಲಿ ಪಡಬೇಕು ನಾವು. ರಾಮ ಮರ್ಯಾದಾಪುರುಷ ಅವ. ಭವಭೂತಿಯ ಉತ್ತರರಾಮಚರಿತ ಓದೀರಿ? ಮೊದಲ ಓದ್ರಿ. ರಾಮನಂಥಾ ದೊಡ್ಡ ಮನಷ್ಯಾಗ ನಮ್ಮಂಥಾ ನೀಚ ಮನಷ್ಯಾರ ಬಾಯಿಂದ ಜೈ ಶ್ರೀರಾಮ ಅನ್ನೂದು ಬರಬಾರದು! ನಮಗ ಯಾವ ಹಕ್ಕದ ದೊಡ್ಡದೊಡ್ಡವರ ಹೆಸರು ತಗೊಳ್ಳಲಿಕ್ಕೆ?

ಬುದ್ದಿಜೀವಿಗಳು ಮತ್ತು ಸಮಾಜ ಪ್ರಜ್ಞೆ ಇರುವವರು ಸ್ವಲ್ಪ ಯೋಚಿಸ್ರಿ. ಎಚ್ಚರಾಗ್ರಿ. ಬಲಪ್ರಯೋಗ ಮಾಡುವವರಿಗೆ ನಾಚಿಕಿ ಬರೂಹಂಗ ತಯಾರಾಗ್ರಿ. ಸ್ವಲ್ಪ ಘಟ್ಟಿಸಿ ಮಾತಾಡ್ಲಿಕ್ಕೆ ಕಲೀರಿ. ಇಲ್ಲಾ ಈ ದೇಶ ಒಡದ ಹೋಗ್ತದ. ನಮಗ ದೇಹಬಲ ಇಲ್ಲ. ಹಂಗಂತ ನಮ್ಮದು ಬರೇ ಆರ್ತನಾದ ಆಗಬಾರದು. ನಮ್ಮ ನಾದ ಬಲಿಷ್ಠವಾಗಬೇಕು ಬುದ್ಧಿವಂತಿಕೆಯಿಂದ ಕೂಡಿದ ನಾದವಾಗಬೇಕು. ಹಿಂಗ ನಮ್ಮೊಳಗ ಮಾರ್ಪಾಡು ಮಾಡ್ಕೊಂಡ್ರಷ್ಟ ಏನರ ಸುಧಾರಣಿ ಆಗಬಹುದು.

ಇಡೀ ಜಗತ್ತು ಸುತ್ತಿದೆ. ನಮ್ಮ ದೇಶದೊಳಗ ಕರ್ನಾಟಕದ ಮಂದಿ ಯಾವಾಗಲೂ ಅಗದೀ ಶಾಂತಮಂದಿ. ಈ ಶಾಂತಿಗೆ ತಮಿಳಿನೊಳಗ ಒಟ್ರುಮೆ ಅಂತಾರ, ಅಂದ್ರ ಒಟ್ಟಾಗಿ ಇರೂದು, ಇದ ಐಕ್ಯತಾ. ಒಟ್ಟಾಗಿದ್ರಲ್ಲ ಶಾಂತಿ ಇರೂದು? ಅದನ್ನ ನಾವು ಕಳಕೊಂಡೀವಿ ಈವತ್ತ. ಹೆಂಗಂದ್ರ ಮಾತು ಆಡೋದು ಕೂಡ ಹೀನ ಅನ್ನಸ್ಲಿಕ್ಕೆ ಶುರು ಆಗೇದ. ಮೊನ್ನೆ ನಮ್ಮ ದೇವನೂರು ಮಹದೇವ ಕೆಲ ಒಳ್ಳೇ ನಿಲುವುಗಳನ್ನ ವ್ಯಕ್ತಪಡಿಸಿದ್ರು. ಸದ್ಯ ಎಲ್ಲಾನೂ ಕೆಟ್ಟಿಲ್ಲ ಇನ್ನೂ. ಅಂಥವರನ್ನು ಕಾಪಾಡಬೇಕು ನಾವು. ಚೆರಿಶ್ ಮಾಡಬೇಕು. ಅವರ ಮಾತುಗಳನ್ನ ಅರ್ಥ ಮಾಡ್ಕೊಂಡು ಬೆಲೆ ಕೊಡಬೇಕು.

ಎಷ್ಟೋ ನಮ್ಮನಿಮ್ಮಂಥ ಮಧ್ಯಮ ವರ್ಗದ ಮಂದಿ ದಿನಾ ಬೆಳಗಾದರ ಬರೀ ಕೋಮುಗಲಭೆ ಬಗ್ಗೇನ ಮಾತಾಡ್ತಾ ಕೂತಿರ್ತೇವಲ್ಲ? ಇದು ವಿಷಾ. ಈ ವಿಷಾ ಹೋಗಬೇಕು. ಸೇಡು ಅನ್ನೋದು ನಮ್ಮನ್ನ ತಿಂತದ. ಅವ ನನ್ನ ಕಿವಿ ಹಿಂಡಿದ್ನಾ? ನಾ ಅವನಿಗೆ ಒದಿಬೇಕು. ಅವ ನನಗ ಹಂಗಂದನಾ ನಾ ಅವನಿಗೆ ಹಿಂಗಂದ ತೀರಸ್ಕೋಬೇಕು. ಈ ಪ್ರತೀಕಾರ ನಮ್ಮನ್ನ ನಾಶ ಮಾಡ್ತದ.

Grow up man, Grow up! ಬುದ್ದಿ ಬೆಳೀಲಿಲ್ಲಾ? ಇರಲಿ, ಏನಡ್ಡೀಯಿಲ್ಲ. ಆದ್ರ ಇದ್ದದ್ದನ್ನೂ ಕಳಕೋಬ್ಯಾಡಾ.

*

ಗಮನಿಸಿ : ಪ್ರತಿಕ್ರಿಯಾತ್ಮಕ ಬರಹಗಳನ್ನು ಈ ಸರಣಿಗೆ ನೀವೂ ಕಳಿಸಬಹುದು. ಜೊತೆಗೆ ಎರಡು ಸಾಲಿನ ನಿಮ್ಮ ಪರಿಚಯ, ಫೋಟೋ ಇರಲಿ. ಪದಮಿತಿ ಸುಮಾರು 400-500 : tv9kannadadigital@gmail.com

ಇದನ್ನೂ ಓದಿ : ಸ್ವಭಾವ ಪ್ರಭಾವ: ಗೊತ್ತಾ ಇಮಾಂಸಾಬಿಗೂ, ಗೋಕುಲಾಷ್ಟಮಿಗೂ ಇರುವ ಸಂಬಂಧ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ