Dharwad: ಮಾನವ ಜಾತಿ ತಾನೊಂದೆ ವಲಂ; ಗುತ್ತುಮನೆಯ ಶೆಟ್ಟರಿಗೆ ಸತ್ತಾರನ ಬೈಹುಲ್ಲು ಬೇಕು
Safwan Savanuru : ‘ಗಿರಿಜಕ್ಕ ಮನೆಖರ್ಚಿಗೆಂದು ಸುರುಟುವ ಬೀಡಿಕಟ್ಟುಗಳ ಮೊಯಿದುವಿನ ಬ್ರಾಂಚಿಗೆ ಕೊಂಡೊಯ್ದು ಕೊಡಬೇಕು.’
Humanity : ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗೀಕೆರೆ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ಶನಿವಾರ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುವಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರಿನಲ್ಲಿ ವಾಸವಾಗಿರುವ ಸಫ್ವಾನ್ ಸವಣೂರು (ಸವಣೂರಿಗ) ಬರೆದ ಕವಿತೆ.
ಸಹಬಾಳ್ವೆ
ಗುತ್ತುಮನೆಯ ಶೆಟ್ಟರು ಸಾಕುತ್ತಿರುವ ಎತ್ತುಗಳಿಗೆ ಹೊತ್ತು ಹೊತ್ತಿಗೆ ಹಾಕಲು ಸತ್ತಾರನ ಬೈಹುಲ್ಲು ಬೇಕು. ಮಮ್ಮದಾಕರು ದಿನವೂ ಕಾಮತರ ಹೋಟೆಲಿನಲ್ಲಿ ಪಟ್ಟಾಂಗ ಹೊಡೆಯುತ್ತಾ ಬಿಸಿ ಬಿಸಿ ಚಾ ಹೀರಬೇಕು.
ಪುರುಷೋತ್ತಮ ಗೌಡರ ಮಧ್ಯಾಹ್ನದೂಟದ ಸಾರಿಗೆ ಹಸೈನಾರಾಕ ಮಾರುವ ಹಸಿಮೀನು ಆಗಬೇಕು. ಇಸ್ಮಾಯಿಲ್ ಸಾಹೇಬರ ಅಡಿಕೆ ಕೊಯ್ಯಬೇಕಾದರೆ ದೂಜಪ್ಪ ಪೂಜಾರಿಯು ಅಲ್ಲಿ ಹಾಜರಿರಲೇಬೇಕು.
ಗಿರಿಜಕ್ಕ ಮನೆಖರ್ಚಿಗೆಂದು ಸುರುಟುವ ಬೀಡಿಕಟ್ಟುಗಳ ಮೊಯಿದುವಿನ ಬ್ರಾಂಚಿಗೆ ಕೊಂಡೊಯ್ದು ಕೊಡಬೇಕು. ಅದ್ರಾಮ ತನ್ನ ಕುಟುಂಬದ ಹಸಿವು ನೀಗಿಸಬೇಕಾದರೆ ಶಾಂತರಾಮ ಶೆಟ್ಟರ ಮನೆಗೆ ದುಡಿಯಲು ಹೋಗಬೇಕು.
ಸುಳ್ಳು ಸುದ್ದಿಗಳ ಹಬ್ಬಿಸಿ ಹಿಂದೂ ಮುಸ್ಲಿಮನೆಂದು ವಿಭಜಿಸಿ ಲಾಭ ಪಡೆಯಲು ಹವಣಿಸುವ ದುರುಳರೇ, ಒಂದೇ ಅಮ್ಮನ ಮಕ್ಕಳಂತೆ ಸಾಮರಸ್ಯದಿಂದ ಬದುಕುವ ನಮ್ಮೀ ಬಾಂಧವ್ಯದ ರುಚಿ ನಿಮಗೆ ಹೇಗೆ ತಿಳಿಯಬೇಕು?
*
ಗಮನಿಸಿ : ಪ್ರತಿಕ್ರಿಯಾತ್ಮಕ ಕವನಗಳನ್ನು ಈ ಸರಣಿಗೆ ನೀವೂ ಕಳಿಸಬಹುದು. ಜೊತೆಗೆ ಎರಡು ಸಾಲಿನ ನಿಮ್ಮ ಪರಿಚಯ, ಫೋಟೋ ಇರಲಿ : tv9kannadadigital@gmail.com
ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ಸುಗಂಧ ಸೂಸುವ ನದಿಯಂತೆ, ಮೃತನದಿಯನ್ನು ಸೇರಲಿಹವು
ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ಇರುಳಿನಲಿ ಹೋದಾನು ಪರಮಾತ್ಮ ಸಾಬಿಯ ಮನೆಗೆ
ಇದನ್ನೂ ಓದಿ : Communal Clashes: ಕವಿತೆ ಅವಿತಿಲ್ಲ; ನಿಮ್ಮ ಜೈಶ್ರೀರಾಮ ಘೋಷಣೆಯ ಬರಿ ಹರಣ ಹರಣ ಹರಣ