Dharwad: ಮಾನವ ಜಾತಿ ತಾನೊಂದೆ ವಲಂ; ಸುಗಂಧ ಸೂಸುವ ನದಿಯಂತೆ, ಮೃತನದಿಯನ್ನು ಸೇರಲಿಹವು
Keshava Malagi : ಕೊನೆಗೂ ನೀನಿಲ್ಲಿಗೆ ತಲುಪಿದ್ದೀಯ, ಕೊನೆಗೂ ನಮ್ಮನು ಕಹಿ ತುಂಬಿದ ಮನಗಳ, ಗೊಂಡಾರಣ್ಯದಲಿ ಬಿಟ್ಟು ಹೊರಡುತಲಿರುವೆ, ಕೊನೆಗೂ ನೀನು ಒಡೆಯಲಾರದ, ಗೋಡೆಗಳ ನಡುವೆ ನಿಶ್ಚಲನಾಗಿ ಮಲಗಲಿರುವೆ.
Humanity : ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗೀಕೆರೆ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ಶನಿವಾರ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುವಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ.
ಬೆಂಗಳೂರಿನಲ್ಲಿ ವಾಸಿಸುತ್ತಿರುವ ಲೇಖಕ, ಅನುವಾದಕ ಕೇಶವ ಮಳಗಿ ಪಾಬ್ಲೋ ನೆರೂಡನ ಕವಿತೆ ಅನುವಾದಿಸಿದ್ದಾರೆ.
ಶೋಕಗೀತೆ
ಸಾವು ಮರುಕಳಿಸಿ ಸ್ಮಶಾನ, ಗೋರಿಗಳಲಿ ಕುಣಿಯುತಲೇ ಇತ್ತು. ಬಾಕು ಹಿಡಿದ, ಇಲ್ಲವೇ ಬೈಚಿಟ್ಟುಕೊಂಡ ಮನುಷ್ಯರು ನಡು ಹಗಲು ಅಥವ ಕಾರಿರುಳು ಹತ್ಯೆಗೆ ಹೊಂಚಿ, ಹತ್ಯೆ ಮಾಡುತಲೇ ಇದ್ದರು. ಜೀವಿಗಳ ಸಮಾಧಿ ಸಾಧಿಸುತಲೇ ಇದ್ದರು ಹೆಣಗಳನು ಬೇಯಿಸುತಲೇ ಇದ್ದರು.
ಜೀವಿಗಳು ವಾಸಿಸುವ ಮನೆಗಳು ಸತ್ತಿವೆ ಮುರಿದ ಮಾಳಿಗೆ, ಗಸಿಗಷ್ಟು, ಮೂತ್ರ. ಅಡ್ಡಾದಿಡ್ಡಿ ಓಣಿ, ಮುರಿದ ಜೋಪಡಿ ಜೀವಿಯ ಕಣ್ಣೀರಲಿ ಕೊಚ್ಚಿಹೋಗುತಲಿಹವು.
“ನೀವು ಬದುಕಬೇಕಿರುವುದು ಹೀಗೇ”, ಎನ್ನುವುದು ಶಾಸನ “ನಿನ್ನ ಚಿಂದಿಯಲ್ಲಿಯೇ ನೀನು ಕೊಳಿ” ಎನ್ನುವನು ಚೌಕಿದಾರ “ನೀನೊಬ್ಬ ಕೊಳಕ” ಎನ್ನುವುದು ಧರ್ಮ “ಕೊಚ್ಚೆಯಲ್ಲಿಯೇ ಬದುಕಿ ಸಾಯಿ” ಎನ್ನುವರು ಅವರು.
ಮಾನವಕುಲದ ಹೂವು ತಮಗೆಂದೇ ಕಟ್ಟಿದ ಗೋಡೆಗೆ ಡಿಕ್ಕಿ ಹೊಡೆಯುತಲಿರುವಾಗ ಕೆಲವರು ಬೂದಿಯನೇ ಅಸ್ತ್ರವಾಗಿಸಿ ಅಧಿಕಾರ ನಡೆಸಲು ಹೊಂಚಿದರು.
ಕೊನೆಗೂ ನೀನಿಲ್ಲಿಗೆ ತಲುಪಿದ್ದೀಯ ಕೊನೆಗೂ ನಮ್ಮನು ಕಹಿ ತುಂಬಿದ ಮನಗಳ ಗೊಂಡಾರಣ್ಯದಲಿ ಬಿಟ್ಟು ಹೊರಡುತಲಿರುವೆ ಕೊನೆಗೂ ನೀನು ಒಡೆಯಲಾರದ ಗೋಡೆಗಳ ನಡುವೆ ನಿಶ್ಚಲನಾಗಿ ಮಲಗಲಿರುವೆ.
ಆಮೇಲೆ, ಪ್ರತಿದಿನವೂ ಹೂವುಗಳು- ಸುಗಂಧ ಸೂಸುವ ನದಿಯಂತೆ- ಮೃತ ನದಿಯನ್ನು ಸೇರಲಿಹವು.
ಬದುಕಿನ್ನೂ ಮುಟ್ಟಿರದ ಹೂವುಗಳು ನೀನು ಬಿಟ್ಟು ಹೋದ ಶೂನ್ಯದ ಮೇಲೆ ಉದುರುವವು.
*
ಗಮನಿಸಿ : ಪ್ರತಿಕ್ರಿಯಾತ್ಮಕ ಕವನಗಳನ್ನು ಈ ಸರಣಿಗೆ ನೀವೂ ಕಳಿಸಬಹುದು. ಜೊತೆಗೆ ಎರಡು ಸಾಲಿನ ನಿಮ್ಮ ಪರಿಚಯ, ಫೋಟೋ ಇರಲಿ : tv9kannadadigital@gmail.com
ಇದನ್ನೂ ಓದಿ : Communal Clashes: ಕವಿತೆ ಅವಿತಿಲ್ಲ; ನಾಳೆ ಹುಟ್ಟುವನು ತಾನೂ ಹಿಂದುಮುಂದಾಗಿ
ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ‘ಕ್ಷಮೆ ಇರಲಿ, ನಾನು ಹೋರಾಟಗಾರನಲ್ಲ’
Published On - 2:16 pm, Mon, 11 April 22