Dharwad: ಮಾನವ ಜಾತಿ ತಾನೊಂದೆ ವಲಂ; ‘ಕ್ಷಮೆ ಇರಲಿ, ನಾನು ಹೋರಾಟಗಾರನಲ್ಲ’
Dr. Rajendra Chenni : ‘ರಾಜೂ, ಹೋಗಿ ಊಟ ಮಾಡಿಬಾ’ ಎಂದು ಅವ್ವನ ಮೃದು ಅಪ್ಪಣೆ. ಅವರ ಗುಡಿಸಿಲಲ್ಲಿ ನಡುವೆ ನೆಲದ ಮೇಲಿನ ಪುಟ್ಟ ಮೇಜು... ಅದರ ಮೇಲೊಂದು ಅನ್ನದ ಬೋಗುಣಿ. ಸುತ್ತಲೂ ಕೂಡ ನಾವು. ಸಹನೌಭುನಕ್ತು, ಸಹವೀರ್ಯ....’
Humanity : ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗೀಕೆರೆ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ಶನಿವಾರ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುವಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ.
ಶಿವಮೊಗ್ಗದಲ್ಲಿ ವಾಸಿಸುತ್ತಿರುವ ಲೇಖಕ, ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಬರೆದ ಕವಿತೆ ನಿಮ್ಮ ಓದಿಗೆ.
ಅವ್ವ, ಧಾರವಾಡ, ನುಗ್ಗಿಕೆರಿ ಆರನೇತ್ತಾ ಓದಿದ ನನ್ನ ಅವ್ವ. ಐದು ಮಕ್ಕಳ ಚಾಕರಿ ಮಾಡಿ ಮಲಗುವ ಮೊದಲು ದಿನಾ ಕನ್ನಡದ ಒಂದು ಪುಸ್ತಕ ಓದುತ್ತಿದ್ದಳು. ಐವರು ಮಕ್ಕಳ ಗೆಳೆಯರು ಮನೆಗೆ ಬಂದರೆ ಜಾತಿ ಕೇಳದೆ, ಎಲ್ಲರಿಗೂ ತಿಂಡಿ, ಊಟ ಸರಬರಾಜು ತಂಗಿದರೆ ರಾತ್ರಿ, ನಮ್ಮದೇ ಹಾಸಿಗೆ. ‘ಕಡೇಕ ಹುಟ್ಟಿದ ಕಟ್ಟಾಣಿ’ಯಾದ ನನಗೆ ಕೊಟ್ಟಿದ್ದು ಪ್ರೀತಿಯಲ್ಲ; ಹುಚ್ಚು ಪ್ರೀತಿಯ ಹೊಳೆ. ಮನೆಕೆಲಸಕ್ಕೆ ಮನೆ ಹಿಂದಿನ ಮುಸ್ಲಿಮ್ ಕುಟುಂಬ. ಅವರ ಹಬ್ಬದಂದು ಊಟಕ್ಕೆ ಆದರದ ಕರೆ- ‘ರಾಜೂ, ಹೋಗಿ ಊಟ ಮಾಡಿಬಾ’ ಎಂದು ಅವ್ವನ ಮೃದು ಅಪ್ಪಣೆ ಅವರ ಗುಡಿಸಿಲಲ್ಲಿ ನಡುವೆ ನೆಲದ ಮೇಲಿನ ಪುಟ್ಟ ಮೇಜು… ಅದರ ಮೇಲೊಂದು ಅನ್ನದ ಬೋಗುಣಿ. ಸುತ್ತಲೂ ಕೂಡ ನಾವು. ಸಹನೌಭುನಕ್ತು, ಸಹವೀರ್ಯ…. ನನ್ನ ಮೂರು ಅಕ್ಕಂದಿರ ಮಕ್ಕಳು ಕೋಲು ಹೆಗಲ ಮೇಲಿಟ್ಟುಕೊಂಡು ‘ಆಲಿ ಧೂಲಾ ಆಟ’ ಮೊದಲ ಕಲಿತದ್ದು ಕಾಮನಕಟ್ಟಿ ಚಿಗವ್ವನ ಮನೆಯ ಮುಂದೆ ಮುಸ್ಲಿಮ್ ದೇವರುಗಳು ಬಂದರೆ, ಸಂತರ್ಪಣೆ ಇಲ್ಲದೆ ಮುಂದೆ ಸಾಗುತ್ತಿರಲಿಲ್ಲ. ಹೀಗಾಗಿ ಈದಗಾ ಮೈದಾನ, ಬಾಬರಿ ಮಸೀದಿಯ ಮೊದಲು ನನ್ನ ನಿಘಂಟುವಿನಲ್ಲಿ ‘ಕೋಮು ಸೌಹಾರ್ದ’ ಪದವೇ ಇರಲಿಲ್ಲ. ಅವ್ವ ಹೇಳಿದ, ಬದುಕಿನ ಪಾಠ ಮಾತ್ರವಿತ್ತು. ಈಗ ಶಿವಮೊಗ್ಗ, ನುಗ್ಗಿಕೆರಿ…. ನಾನು ದೀರ್ಘ ಲೇಖನಗಳನ್ನು ಬರೆಯುತ್ತೇನೆ. ಮಧ್ಯರಾತ್ರಿಯ ನಂತರ ಮನೆ ಮುಂದೆ ಬಾಣಂತಿ ಅಕ್ಕನಿಗಾಗಿ ತರಿಸಿಟ್ಟಿದ್ದ ಹೊರಸಿನ ಮೇಲೆ ನಾನು ಮಲಗಿದಾಗ ಅವ್ವ ಬಂದು, ಕೌದಿ ಹೊಚ್ಚಿ ಹೋಗುತ್ತಿದ್ದ ನೆನಪಿನಲ್ಲಿ ಅಳುತ್ತೇನೆ. ಕ್ಷಮೆ ಇರಲಿ, ನಾನು ಹೋರಾಟಗಾರನಲ್ಲ.
*
ಗಮನಿಸಿ : ಪ್ರತಿಕ್ರಿಯಾತ್ಮಕ ಕವನಗಳನ್ನು ಈ ಸರಣಿಗೆ ನೀವೂ ಕಳಿಸಬಹುದು. ಜೊತೆಗೆ ಎರಡು ಸಾಲಿನ ನಿಮ್ಮ ಪರಿಚಯ, ಫೋಟೋ ಇರಲಿ : tv9kannadadigital@gmail.com
ಇದನ್ನೂ ಓದಿ : Communal Clashes: ಕವಿತೆ ಅವಿತಿಲ್ಲ; ನಿಮ್ಮ ಜೈಶ್ರೀರಾಮ ಘೋಷಣೆಯ ಬರಿ ಹರಣ ಹರಣ ಹರಣ
ಇದನ್ನೂ ಓದಿ : Communal Clashes: ಕವಿತೆ ಅವಿತಿಲ್ಲ; ಗೆರೆ ಎಳೆಯೋಣ ಚುಕ್ಕಿಗಳ ಬಿಡಿಸೋಣ ಮನುಜಧರ್ಮದ ಸುಂದರ ರಂಗೋಲಿ ಹರಡೋಣ
Published On - 1:57 pm, Mon, 11 April 22