Communal Clashes: ಕವಿತೆ ಅವಿತಿಲ್ಲ; ಗೆರೆ ಎಳೆಯೋಣ ಚುಕ್ಕಿಗಳ ಬಿಡಿಸೋಣ ಮನುಜಧರ್ಮದ ಸುಂದರ ರಂಗೋಲಿ ಹರಡೋಣ

Nuggikere Dharwad : ಯಾವ ಶಾಸ್ತ್ರದಲಿಹುದು? ಅದಾವ ಸ್ಮೃತಿಗಳಲಿಹುದು ಈ ನಶೆಯ ದಿಶೆ ಮರುದಿನವೇ ರಾಮ ಬರುವನಿದ್ದ ಗುಡಿಯೊಳಗೆ ಭಂಟ ಹನುಮ ನಿದ್ರಿಸುತಿದ್ದ ಧೂಪದೀಪಗಳ ನಡುವೆ ಈ ನೆತ್ತರೋಕುಳಿ ಏಕೆ?

Communal Clashes: ಕವಿತೆ ಅವಿತಿಲ್ಲ; ಗೆರೆ ಎಳೆಯೋಣ ಚುಕ್ಕಿಗಳ ಬಿಡಿಸೋಣ ಮನುಜಧರ್ಮದ ಸುಂದರ ರಂಗೋಲಿ ಹರಡೋಣ
ಕವಿ ನಾ ದಿವಾಕರ
Follow us
ಶ್ರೀದೇವಿ ಕಳಸದ
|

Updated on:Apr 11, 2022 | 9:44 AM

ಕವಿತೆ ಅವಿತಿಲ್ಲ : ನಬೀಸಾಬ್, ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗೀಕೆರೆ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ನಿನ್ನೆ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್​ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ; ಮನಸ್ಸು ವಿಷಣ್ಣವಾಗಿದೆ. ಆಕ್ರೋಶ ಅವಡುಗಚ್ಚಿ ಕುಳಿತಿದೆ. ಮಾತು ಸೋಲುತ್ತಿವೆ. ಅದೆಷ್ಟು ಅಗೆಯುತ್ತೀರೋ ಅಗೆಯಿರಿ. ನೀವು ಅಗೆದಷ್ಟೂ ನನ್ನನ್ನೇ ನಾ ಬಗೆದುಕೊಳ್ಳುತ್ತೇನೆ ಎನ್ನುತ್ತಿದೆ ಈ ಹೊತ್ತಿನಲ್ಲಿ ಕವಿತೆ.

ಕೋಲಾರದ ಚಿಂತಾಮಣಿಯವಾರದ ಕವಿ ನಾ ದಿವಾಕರ ಈಗ ವಾಸಿಸುವುದು ಮೈಸೂರಿನಲ್ಲಿ. ಅವರ ಕವನ ಓದಿಗೆ. 

ಅದು ಒಡೆದ ಭ್ರೂಣ

ಅಲ್ಲಿ ಚದುರಿರುವುದಾದರೂ ಏನು ಹೆಪ್ಪುಗಟ್ಟಿದ ಬೆವರು ಕೆಂಪೇರಿದೆ ಮಣ್ಣ ಕಣಗಳ ನಡುವೆ ಕಲ್ಲಂಗಡಿ ಬೀಜಗಳು ಎಲ್ಲೋ ಬಿತ್ತಿದ ವಿಷಬೇರುಗಳನ್ನು ನೆನಪಿಸುತ್ತಿವೆ ನಬೀಸಾಬಿಯ ತಳ್ಳುಗಾಡಿಯ ಕಂಬನಿಗೆ ಹಣ್ಣ ಚೂರುಗಳೂ ಮಿಡಿಯುತ್ತಿವೆ ;

ಒಡೆದುದು ಗರ್ಭವಲ್ಲ ಮಾನವತೆಯ ಭ್ರೂಣ, ಚೆಲ್ಲಿದ ಸೂರ್ಯನ ತುಣುಕುಗಳಂತೆ ಕಾಣುವ ನಬೀಸಾಬಿಯ ಛಿದ್ರ ಬದುಕು ; ಯಾವ ಶಾಸ್ತ್ರದಲಿಹುದು ? ಅದಾವ ಸ್ಮೃತಿಗಳಲಿಹುದು ಈ ನಶೆಯ ದಿಶೆ ಮರುದಿನವೇ ರಾಮ ಬರುವನಿದ್ದ ಗುಡಿಯೊಳಗೆ ಭಂಟ ಹನುಮ ನಿದ್ರಿಸುತಿದ್ದ ಧೂಪದೀಪಗಳ ನಡುವೆ ಈ ನೆತ್ತರೋಕುಳಿ ಏಕೆ ?

ಹೌದು, ಅದು ನೆತ್ತರಲ್ಲ ಕಲ್ಲಂಗಡಿಯ ಅಂತರಂಗದ ರಂಗು, ಸವಿದವರಿಗೆ ಸಿಹಿ ಬೆಳೆದವರಿಗೆ ಸಿರಿ ಕತ್ತರಿಸಿ ಹಂಚುವನ ಬಡ ಬದುಕಿಗೆ ರಂಗು ನೀಡುವ ಛಾಯೆ; ಹಟ್ಟಿಯೊಳು ಹಸಿದೊಟ್ಟೆ ಚಿಂದಿ ಆಯುವ ತೋಳು ಬಾಯ್ದೆರೆದ ಹಸುಳೆ ಮೊಲೆಯುಣಿಸುವ ತಾಯಿ ಬಿಸಿಯುಸಿರ ನಿಟ್ಟುಸಿರಿನಲಿ ಕಂಡ ಕೆಂಬಣ್ಣದ ರಂಗೋಲಿ;

ಚುಕ್ಕಿಗಳಳಿಸಿಹವು ಗೆರೆಗಳೆಲ್ಲವು ಬಲಿ ವಿಷಧಾರೆಯ ತೊರೆಗೆ ಅಲ್ಲಿ ಧರ್ಮವನರಸದಿರಿ ಮನುಜರಿಲ್ಲದ ಲೋಕ ಇನ್ನೆಂತು ಧರ್ಮಸೆರೆ; ಗೆರೆ ಎಳೆಯೋಣ ಚುಕ್ಕಿಗಳ ಬಿಡಿಸೋಣ ಮನುಜಧರ್ಮದ ಸುಂದರ ರಂಗೋಲಿ ಹರಡೋಣ ಅಲ್ಲಿರಬಹುದು ಮಾನವತೆಯ ರಕ್ತ ಧಮನಿಗಳಲಿ ಹೃದಯಾಂಗಣದಲಿ!

ಗಮನಿಸಿ : ಪ್ರತಿಕ್ರಿಯಾತ್ಮಕ ಕವನಗಳನ್ನು ಈ ಸರಣಿಗೆ ನೀವೂ ಕಳಿಸಬಹುದು. ಜೊತೆಗೆ ಎರಡು ಸಾಲಿನ ನಿಮ್ಮ ಪರಿಚಯ, ಫೋಟೋ ಇರಲಿ. : tv9kannadadigital@gmail.com

ಇದನ್ನೂ ಓದಿ : Communal Clashes: ಕವಿತೆ ಅವಿತಿಲ್ಲ; ಚೂರು ಮಾಡಿದ್ದು ಶ್ರೀರಾಮನ ಜೀವಂತ ಗೆಳೆತನವನ್ನ ಸೀತೆಯ ಅಪಾರ ವಿಶ್ವಾಸವನ್ನ

ಇದನ್ನೂ ಓದಿ : Communal Clashes: ಕವಿತೆ ಅವಿತಿಲ್ಲ; ‘ಇದು ಇನ್ನೂ ಶುರುವಾತು, ದೇವರಿರುವ ಬೀದಿಗಳೆಲ್ಲ ಇನ್ನು ವಿಕೃತಿಯ ಕಪ್ಪೆಬಾವಿ!

ಇದನ್ನೂ ಓದಿ :Communal Clashes: ಕವಿತೆ ಅವಿತಿಲ್ಲ; ಮೂಗ ಶಾಸಕಾಂಗ ಕುರುಡು ಕಾರ್ಯಾಂಗ ಕಿವುಡು ನ್ಯಾಯಾಂಗ

Published On - 9:36 am, Mon, 11 April 22