Communal Clashes: ಕವಿತೆ ಅವಿತಿಲ್ಲ; ಚೂರು ಮಾಡಿದ್ದು ಶ್ರೀರಾಮನ ಜೀವಂತ ಗೆಳೆತನವನ್ನ ಸೀತೆಯ ಅಪಾರ ವಿಶ್ವಾಸವನ್ನ

Nuggikere Dharwad : ಪುಂಡರೇ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ, ಇನ್ನಾದರೂ ಯೋಚಿಸಿ.

Communal Clashes: ಕವಿತೆ ಅವಿತಿಲ್ಲ; ಚೂರು ಮಾಡಿದ್ದು ಶ್ರೀರಾಮನ ಜೀವಂತ ಗೆಳೆತನವನ್ನ ಸೀತೆಯ ಅಪಾರ ವಿಶ್ವಾಸವನ್ನ
ಕವಿ ಚಿದಂಬರ ನರೇಂದ್ರ
Follow us
ಶ್ರೀದೇವಿ ಕಳಸದ
|

Updated on:Apr 10, 2022 | 4:44 PM

ಕವಿತೆ ಅವಿತಿಲ್ಲ : ನಬೀಸಾಬ್, ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗೀಕೆರೆ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ನಿನ್ನೆ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್​ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ; ಮನಸ್ಸು ವಿಷಣ್ಣವಾಗಿದೆ. ಆಕ್ರೋಶ ಅವಡುಗಚ್ಚಿ ಕುಳಿತಿದೆ. ಮಾತು ಸೋಲುತ್ತಿವೆ. ಅದೆಷ್ಟು ಅಗೆಯುತ್ತೀರೋ ಅಗೆಯಿರಿ. ನೀವು ಅಗೆದಷ್ಟೂ ನನ್ನನ್ನೇ ನಾ ಬಗೆದುಕೊಳ್ಳುತ್ತೇನೆ ಎನ್ನುತ್ತಿದೆ ಈ ಹೊತ್ತಿನಲ್ಲಿ ಕವಿತೆ.

ಧಾರವಾಡದ ಚಿದಂಬರ ನರೇಂದ್ರ ಕವಿ, ಅನುವಾದಕ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ಕವಿತೆ ಓದಿಗೆ.

ನುಗ್ಗೀಕೇರಿ ಹಣಮಪ್ಪನ ಅಂಗಳದಲ್ಲಿ ಶ್ರೀ ರಾಮಸೇನೆಯ ಕಾಲಾಳುಗಳು ಒಡೆದದ್ದು ಕೇವಲ ನಬೀ ಸಾಹೇಬ ಮಾರುತ್ತಿದ್ದ ಕಲ್ಲಂಗಡಿ ಹಣ್ಣುಗಳನ್ನಲ್ಲ, ಅವರು ಒಡೆದು ಹಾಕಿದ್ದು ಒಂದು ಅಖಂಡ ಭಕ್ತಿ ಪರಂಪರೆಯ ಜೀವಾಳವನ್ನ.

ಅವರು ಒಡೆದು ಚೂರು ಚೂರು ಮಾಡಿದ್ದು ಶ್ರೀರಾಮನ ಜೀವಂತ ಗೆಳೆತನವನ್ನ ತಾಯಿ ಸೀತೆಯ ಅಪಾರ ವಿಶ್ವಾಸವನ್ನ ಶಬರಿಯ ಅನನ್ಯ ವಾತ್ಸಲ್ಯವನ್ನ.

ಅವರು ಒಡೆದು ಘಾಸಿಗೊಳಿಸಿದ್ದು ಕಬೀರನ ಅಚಲ ಭಕ್ತಿಯನ್ನ ತುಳಸೀದಾಸರ ಸಂತ ಪ್ರೇಮವನ್ನ ಗಾಂಧಿಯ ದೃಢ ನಿಶ್ಚಯವನ್ನ, ಕುವೆಂಪುವಿನ ವಿಶ್ವಮಾನವನ ಆತ್ಮವನ್ನ ಭರತವರ್ಷದ ನಂಬಿಕೆಯನ್ನ.

ಇನ್ನು ನಿದ್ದೆ ಇಲ್ಲ ಮಾರುತಿಗೆ ಹಾಗಾಗಿ ಎದ್ದು ಕೂಡಲೇಬೇಕು ರಾಮನೂ, ನಬೀ ಸಾಹೇಬರ ಕಲ್ಲಂಗಡಿಯ ಚೂರುಗಳಲ್ಲಿ ಅವರಿಗೆ ಎದ್ದು ಕಾಣುತ್ತಿರುವುದು, ನಾಶವಾಗುತ್ತಿರುವ ಸಭ್ಯತೆಯ ಸ್ಪಷ್ಟ ಚಿತ್ರವಷ್ಟೇ ಅಲ್ಲ, ಮತ್ತೆ ಹೊಸದಾಗಿ ಎದ್ದು ನಿಲ್ಲುತ್ತಿರುವ ಭೀಮಶಕ್ತಿಯ ದಿಟ್ಟ ರೂಪವೂ.

ಗಮನಿಸಿ : ಪ್ರತಿಕ್ರಿಯಾತ್ಮಕ ಕವನಗಳನ್ನು ಈ ಸರಣಿಗೆ ನೀವೂ ಕಳಿಸಬಹುದು. ಜೊತೆಗೆ ಎರಡು ಸಾಲಿನ ನಿಮ್ಮ ಪರಿಚಯ, ಫೋಟೋ ಇರಲಿ. : tv9kannadadigital@gmail.com

ಇದನ್ನೂ ಓದಿ :  Communal Clashes: ಕವಿತೆ ಅವಿತಿಲ್ಲ; ‘ಇದು ಇನ್ನೂ ಶುರುವಾತು, ದೇವರಿರುವ ಬೀದಿಗಳೆಲ್ಲ ಇನ್ನು ವಿಕೃತಿಯ ಕಪ್ಪೆಬಾವಿ!

Published On - 4:44 pm, Sun, 10 April 22