AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Communal Clashes: ಕವಿತೆ ಅವಿತಿಲ್ಲ; ಮೂಗ ಶಾಸಕಾಂಗ ಕುರುಡು ಕಾರ್ಯಾಂಗ ಕಿವುಡು ನ್ಯಾಯಾಂಗ

Nuggikere Dharwad : ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?

Communal Clashes: ಕವಿತೆ ಅವಿತಿಲ್ಲ; ಮೂಗ ಶಾಸಕಾಂಗ ಕುರುಡು ಕಾರ್ಯಾಂಗ ಕಿವುಡು ನ್ಯಾಯಾಂಗ
ಕವಿ ಜಲೀಲ್ ಮುಕ್ರಿ
ಶ್ರೀದೇವಿ ಕಳಸದ
|

Updated on: Apr 10, 2022 | 6:42 PM

Share

ಕವಿತೆ ಅವಿತಿಲ್ಲ : ನಬೀಸಾಬ್, ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗೀಕೆರೆ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ನಿನ್ನೆ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್​ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ; ಮನಸ್ಸು ವಿಷಣ್ಣವಾಗಿದೆ. ಆಕ್ರೋಶ ಅವಡುಗಚ್ಚಿ ಕುಳಿತಿದೆ. ಮಾತು ಸೋಲುತ್ತಿವೆ. ಅದೆಷ್ಟು ಅಗೆಯುತ್ತೀರೋ ಅಗೆಯಿರಿ. ನೀವು ಅಗೆದಷ್ಟೂ ನನ್ನನ್ನೇ ನಾ ಬಗೆದುಕೊಳ್ಳುತ್ತೇನೆ ಎನ್ನುತ್ತಿದೆ ಈ ಹೊತ್ತಿನಲ್ಲಿ ಕವಿತೆ.

ದಕ್ಷಿಣ ಕನ್ನಡದ ಉಪ್ಪಿನಂಗಡಿಯ ಜಲೀಲ್ ಮುಕ್ರಿ ಬರೆದ ಕವಿತೆ

ಗರ್ಭಗುಡಿಯ ಹೊರಗೆ ಹುಡಿಹುಡಿಯಾದ ಕಲ್ಲಂಗಡಿ

ಇಲ್ಲಿ ನನ್ನದೇ ನೆರಳು ನನಗೆ ಭಯಹುಟ್ಟಿಸುತ್ತಿದೆ.

ಗುಡಿ ಗರ್ಭಗುಡಿಯೆದುರು ಕಲ್ಲಂಗಡಿ ಅನಾಥವಾಗಿದೆ.

ಮೂಗ ಶಾಸಕಾಂಗ ಕುರುಡು ಕಾರ್ಯಾಂಗ ಕಿವುಡು ನ್ಯಾಯಾಂಗ.

ಕತ್ತಲಿಗೂ ಭಯವಾಗುವಷ್ಟು ಕತ್ತಲೆ. ಬೆತ್ತ ಹಿಡಿದ ಪೋಲಿಸ್ರೂ ಬೆತ್ತಲೆ.

ನಿನ್ನೆ ಒಟ್ಟಿಗೆ ಚಹಾ ಕುಡಿದವನೂ ಇಂದು ಆಗಂತುಕ ನಿನ್ನೆ ಶಾಂತ ಇಂದು ಆತಂಕ.

ಬೇಕಂತಿಲ್ಲ ಬಿಸಿಲು ನಡುರಾತ್ರಿಯಲ್ಲೂ ಭಯ ಹುಟ್ಟಿಸುವ ನನ್ನದೇ ನೆರಳು..

ದೇವಾ ಲೋಕವನ್ನೊಮ್ಮೆ ಗುಡಿಸಿಬಿಡು ಗುಡಿ, ಗಡಿಯ ಕಲ್ಲಂಗಡಿಯ ಸರಹದ್ದು ನಾಶಮಾಡಿಬಿಡು.

ಪೂಜೆ, ಪ್ರಾರ್ಥನೆ ನಮಾಜು ನಿನಗ್ಯಾಕೆ ತಲುಪುವುದಿಲ್ಲ? ಛಿದ್ರ ಕಲ್ಲಂಗಡಿ, ಛಿದ್ರಗೊಂಡ ಹೃದಯ ಕಾಣದಷ್ಟು ಎತ್ತರದಲ್ಲಿರುವೆಯಾ?

ಜಗತ್ತನ್ನೇ ಕತ್ತಲಾಗಿಸಿ ಬಿಡು ಇಲ್ಲಿ ತನ್ನ ನೆರಳನ್ನೇ ದೇವ ಎಂದು ಕೊಂಡಿಹರು!

ದುಃಖ ಯಾತನೆ ಅರಿಯುವವ ನೀನು ಮಾತ್ರ. ಸ್ವಾರ್ಥ, ಮತಾಂಧತೆ ತುಂಬಿದ ನಾಲ್ಕು ಜನ ಬದುಕು ಉಸಿರುಗಟ್ಟಿಸಿಹರು!

ನಿನ್ನ ಹೆಸರಲ್ಲಿಯೇ ಇಲ್ಲಿ ಗಲಾಟೆ ನಿನ್ನ ನಾಮದಲ್ಲಿಯೇ ಅರಾಜಕತೆ ನಿನ್ನ ತೋರಿಸಿಯೇ ಇಲ್ಲಿ ರಾಷ್ಟ್ರೀಯತೆ ಇದೆಲ್ಲವೂ ನೋಡಿ ಮೌನವಿರುವಿ ನೀನು ಆದರೂ ಭರವಸೆ ಕಳಕೊಳ್ಳಲಾರೆ ನಾನು.

*

ಗಮನಿಸಿ : ಪ್ರತಿಕ್ರಿಯಾತ್ಮಕ ಕವನಗಳನ್ನು ಈ ಸರಣಿಗೆ ನೀವೂ ಕಳಿಸಬಹುದು. ಜೊತೆಗೆ ಎರಡು ಸಾಲಿನ ನಿಮ್ಮ ಪರಿಚಯ, ಫೋಟೋ ಇರಲಿ. : tv9kannadadigital@gmail.com

ಇದನ್ನೂ ಓದಿ : Communal Clashes: ಕವಿತೆ ಅವಿತಿಲ್ಲ; ಚೂರು ಮಾಡಿದ್ದು ಶ್ರೀರಾಮನ ಜೀವಂತ ಗೆಳೆತನವನ್ನ ಸೀತೆಯ ಅಪಾರ ವಿಶ್ವಾಸವನ್ನ

ಇದನ್ನೂ ಓದಿ : Communal Clashes: ಕವಿತೆ ಅವಿತಿಲ್ಲ; ‘ಇದು ಇನ್ನೂ ಶುರುವಾತು, ದೇವರಿರುವ ಬೀದಿಗಳೆಲ್ಲ ಇನ್ನು ವಿಕೃತಿಯ ಕಪ್ಪೆಬಾವಿ!