ಇಲ್ಲಿರುವ ಚಿತ್ರಗಳನ್ನೊಮ್ಮೆ ಗಮನಿಸಿ. ಅಪರೂಪಕ್ಕೊಮ್ಮೆ ಸಿಗುವಂಥ ಪೋಟೊಗಳಿವು. ದಿನಬೆಳಗಾದರೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಟೀಕಿಸುವ ರಾಜ್ಯ ಕಾಂಗ್ರೆಸ್ನ ಇಬ್ಬರು ವರಿಷ್ಠ ನಾಯಕರು- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್, ಬಿಎಸ್ವೈರೊಂದಿಗೆ ಲಹರಿ ಮೂಡ್ನಲ್ಲಿ ಹರಟುತ್ತಿದ್ದಾರೆ!
ಯಡಿಯೂರಪ್ಪ, ಸಿದ್ದರಾಮಯ್ಯ, ಡಿಕೆಶಿ ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮುಖಾಮುಖಿಯಾಗಿ ಮಾತುಕತೆಯಲ್ಲಿ ತೊಡಗಿದರು. ಈ ನಾಯಕರು ಬೆಳಗಾವಿಯಿಂದ ಬೆಂಗಳೂರಿಗೆ ಬರುವ ಮೊದಲು ವಿಮಾನ ನಿಲ್ದಾಣದಲ್ಲಿ ಮುಖಾಮುಖಿಯಾಗಿದ್ದು.
ಮೊದಲು ಉಭಯ ಕುಶಲೋಪರಿ ವಿಚಾರಿಸಿಕೊಂಡ ನಾಯಕರು ವಿಮಾನ ಹೊರಡಲು ಇನ್ನೂ ಸಮಯವಿದ್ದ ಕಾರಣ ಒಂದೆಡೆ ಕೂತು ಹರಟಿದರು. ನಂತರ ಮೂವರು ಒಂದೇ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣಿಸಿದರು. ವಿಮಾನದಲ್ಲೂ ಅಕ್ಕಪಕ್ಕವೇ ಕೂತಿದ್ದರೋ ಇಲ್ಲವೇ ದೂರ ದೂರ ಕೂತಿದ್ದರೋ ಎನ್ನುವುದು ಇನ್ನೂ ಗೊತ್ತಾಗಬೇಕಿದೆ.
ಹಾಗೆಯೇ, ಅವರ ಭೇಟಿ ಆಕಸ್ಮಿಕವೋ, ಕಾಕತಾಳೀಯವೋ ಅಥವಾ ಪೂರ್ವನಿಯೋಜಿತವೋ ಅಂತಲೂ ಅರ್ಥವಾಗುತ್ತಿಲ್ಲ!