ರೈತ ಮುಖಂಡರ ಬಳಿ ಕಾಲಾವಕಾಶ ಕೇಳಿದ ಕೇಂದ್ರ ಸಚಿವರು; ಮತ್ತೆ ಡಿ.9ಕ್ಕೆ ಮಾತುಕತೆ
ಇಂದು ಸಂಜೆ ಚಹಾ ವಿರಾಮದ ನಂತರ ಮಾತುಕತೆ ಶುರುವಾಗುತ್ತಿದ್ದಂತೆ ರೈತರು ಕೇಂದ್ರ ಸಚಿವರನ್ನು ಹೆದರಿಸಿದ್ದಾರೆ. ನೀವು ಮೂರು ಕೃಷಿ ಕಾಯ್ದೆಯನ್ನು ಹಿಂಪಡೆಯದೆ ಇದ್ದರೆ ನಾವು ಈಗಲೇ ಹೊರನಡೆಯುತ್ತೇವೆ ಎಂದಿದ್ದಾರೆ.
ದೆಹಲಿ: ಕೃಷಿ ಕಾಯ್ದೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ಹೋರಾಟ ನಡೆಸುತ್ತಿರುವ ರೈತರೊಂದಿಗೆ ಕೇಂದ್ರ ಸರ್ಕಾರ ವಿಜ್ಞಾನ ಭವನದಲ್ಲಿ 5ನೇ ಸುತ್ತಿನ ಮಾತುಕತೆ ನಡೆಸಿದೆ. ಇಲ್ಲೂ ಕೂಡ ಅಂಥ ಪ್ರಮುಖ ನಿರ್ಣಯ ಕೈಗೊಳ್ಳಲು ಸಾಧ್ಯವಾಗಲಿಲ್ಲ..ಡಿಸೆಂಬರ್ 9ಕ್ಕೆ ಮತ್ತೊಂದು ಸುತ್ತಿನ ಅಂದರೆ ಆರನೇ ಸುತ್ತಿನ ಮಾತುಕತೆ ನಡೆಯಲಿದೆ.
ರೈತರ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೂ, ಕೃಷಿ ಕಾಯ್ದೆ ಹಿಂಪಡೆಯುವ ಬಗ್ಗೆ ಮಾತನಾಡುತ್ತಿಲ್ಲ. ಅದು ಸಾಧ್ಯವಿಲ್ಲ ಎಂಬುದೇ ಅದರ ನಿಲುವಾಗಿದೆ. ಇಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ ಸಚಿವ ಪಿಯೂಷ್ ಗೋಯಲ್ ನೇತೃತ್ವದಲ್ಲಿ ರೈತರೊಂದಿಗೆ ಮಾತುಕತೆ ನಡೆದಿತ್ತು. ಮೂರು ಕೃಷಿ ಕಾಯ್ದೆಯ ಅನುಕೂಲಗಳನ್ನು ರೈತ ಮುಖಂಡರಿಗೆ ತಿಳಿಸಲು ಕೇಂದ್ರ ಸಚಿವರು ಪ್ರಯತ್ನಿಸಿದರು.
ಆದರೂ ಕೊನೆಯಲ್ಲಿ ಯಾವುದೇ ನಿರ್ಧಾರ ಪ್ರಕಟವಾಗಿಲ್ಲ. ಪ್ರಸ್ತಾವನೆ ಸಲ್ಲಿಸಲು ಇನ್ನು ಸ್ವಲ್ಪ ಕಾಲಾವಕಾಶ ಬೇಕು..ನಮ್ಮಲ್ಲೇ ಒಂದು ಸಭೆಯಾಗಬೇಕು ಎಂದು ಕೇಂದ್ರ ಸಚಿವರು ರೈತ ಮುಖಂಡರಿಗೆ ಹೇಳಿದ್ದಾರೆ. ಅದಕ್ಕೆ ಅವರೂ ಒಪ್ಪಿಗೆ ಸೂಚಿಸಿದ್ದು, ಬುಧವಾರ ಮತ್ತೊಮ್ಮೆ ಮಾತುಕತೆ ನಡೆಯಲಿದೆ. ಅಲ್ಲದೆ, ನಿಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಹಿರಿಯ ನಾಗರಿಕರು ಮತ್ತು ಮಕ್ಕಳನ್ನು ದಯವಿಟ್ಟು ಮನೆಗೆ ಕಳಿಸಿ ಎಂದು ಕೃಷಿ ಸಚಿವ ನರೇಂದ್ರ ತೋಮರ್ ರೈತ ಪ್ರತಿನಿಧಿಗಳಲ್ಲಿ ಮನವಿ ಮಾಡಿದ್ದಾರೆ.
ಸಮಾಧಾನಪಡಿಸಿದ ಸರ್ಕಾರ ಇಂದು ಸಂಜೆ ಚಹಾ ವಿರಾಮದ ನಂತರ ಮಾತುಕತೆ ಶುರುವಾಗುತ್ತಿದ್ದಂತೆ ರೈತರು ಕೇಂದ್ರ ಸಚಿವರನ್ನು ಹೆದರಿಸಿದ್ದಾರೆ. ನೀವು ಮೂರು ಕೃಷಿ ಕಾಯ್ದೆಯನ್ನು ಹಿಂಪಡೆಯದೆ ಇದ್ದರೆ ನಾವು ಈಗಲೇ ಹೊರನಡೆಯುತ್ತೇವೆ ಎಂದಿದ್ದಾರೆ. ಆಗ ಕೇಂದ್ರ ಸಚಿವರು, ಅವರನ್ನು ಸಮಾಧಾನಪಡಿಸಿ ಮತ್ತೆ ಮಾತು ಮುಂದುವರಿಸಿದ್ದಾರೆ. ಆದರೆ ಒಂದು ಹೊತ್ತಲ್ಲಿ, ರೈತಮುಖಂಡರಲ್ಲೇ ಸ್ವಲ್ಪ ಅಭಿಪ್ರಾಯ ಭೇದ ಕಂಡುಬಂತು.
ಕೇಂದ್ರ ಸಚಿವರ ಜೊತೆ ರೈತರ 5ನೇ ಸುತ್ತಿನ ಮಾತುಕತೆ ಆರಂಭ: ಬಸ್ನಲ್ಲೇ ಸಭೆಗೆ ಆಗಮಿಸಿದ ಕೃಷಿಕರು
Published On - 7:38 pm, Sat, 5 December 20