ಬೆಂಗಳೂರು: ಜೆಡಿಎಸ್ ಪಕ್ಷದ ನಾಯಕರಾದ ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಮತ್ತು ಒಕ್ಕಲಿಗ ಸಮುದಾಯದ ವಿರುದ್ಧ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಕೆಟ್ಟದಾಗಿ ಮಾತನಾಡಿರುವ ಬಗ್ಗೆ ಮತ್ತೋರ್ವ ಕಾಂಗ್ರೆಸ್ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ ಕ್ಷಮೆ ಕೇಳಿದ್ದಾರೆ. ನಮ್ಮ ಪಕ್ಷದ, ಸಮುದಾಯದ ನಾಯಕರ ಮಾತುಗಳಿಂದ ನೋವಾಗಿದ್ದರೆ ಕ್ಷಮಿಸಿ ಎಂದು ಜಮೀರ್ ಅಹ್ಮದ್ ಹೆಸರು ಉಲ್ಲೇಖಿಸದೆ ಮಾತನಾಡಿದ್ದಾರೆ.
ಇತ್ತೀಚೆಗೆ ನಾನು ತಾಯಿ ನಿಧನರಾಗಿರುವುದರಿಂದ ಮಾಧ್ಯಮ ಹೇಳಿಕೆ ನೀಡಲಾಗಿಲ್ಲ. ಆದರೆ, ನಮ್ಮ ಪಕ್ಷದ, ಸಮಾಜದ ಮುಖಂಡರು ಕುಮಾರಸ್ವಾಮಿ ಹಾಗೂ ಒಕ್ಕಲಿಗರ ಬಗ್ಗೆ ಮಾತನಾಡಿ ಮನನೊಂದಿದೆ ಎಂದು ತಿಳಿಯಿತು. ಹಾಗಾಗಿ, ಕುಮಾರಸ್ವಾಮಿ ಮತ್ತು ದೇವೇಗೌಡರ ಬಳಿ ನಾನು ಕ್ಷಮೆ ಕೇಳುತ್ತೇನೆ. ಅವರ ಹೇಳಿಕೆಯಿಂದ ನಿಮ್ಮ ಮನಸಿಗೆ ಏನಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ವಿಡಿಯೋ ಮೂಲಕ ಕ್ಷಮಾಪಣೆ ಕೇಳಿದ್ದಾರೆ.
ಇತಿಹಾಸ ಕಾಲದಿಂದ ಕೂಡಿಕೊಂಡು ಬಾಳಿದ ಸಮಾಜ ಇದು. ಟಿಪ್ಪು ಸುಲ್ತಾನ್ ಮಕ್ಕಳನ್ನು ಬ್ರಿಟೀಷರು ಒತ್ತೆ ಇಟ್ಟಾಗ, ಮಂಡ್ಯ, ಶ್ರೀರಂಗಪಟ್ಟಣ, ಚೆನ್ನಪಟ್ಟಣ, ಹಳೆ ಮೈಸೂರಿನ ರೈತಾಪಿ ಜನ, ಒಕ್ಕಲಿಗರು ದುಡ್ಡು ಕೊಟ್ಟು ಮಕ್ಕಳನ್ನು ಬಿಡಿಸಿಕೊಂಡು ಬಂದಿದ್ದರು. ಇದು ನೂರಾರು ವರ್ಷಗಳಿಂದ ಕೂಡಿಕೊಂಡು ಬಾಳಿದ ಸಮಾಜ ಎಂದು ಒಕ್ಕಲಿಗ ಹಾಗೂ ಮುಸ್ಲಿಂ ಸಮುದಾಯದ ಸಾಮರಸ್ಯದ ಬಗ್ಗೆ ಮಾತನಾಡಿದ್ದಾರೆ.
ಇವತ್ತು ಹಳ್ಳಿಗಳಲ್ಲಿ ನಮ್ಮ ಜೀವನ ಸುಭದ್ರವಾಗಿದೆ. ಯಾರು ಏನೇ ಹೇಳಿದರೂ ಕೂಡ, ಸಮಾಜದ ಬಗ್ಗೆ ಬಿರುಕು ಆಗಲು ಸಾಧ್ಯವಿಲ್ಲ. ದೇವೇಗೌಡರು ಅತ್ಯುತ್ತಮ ನಾಯಕರು. ಕುಮಾರಸ್ವಾಮಿ ಕೂಡ ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿಕೊಂಡು ಬಂದಿದ್ದಾರೆ ಎಂದು ಸಿ.ಎಂ. ಇಬ್ರಾಹಿಂ ವಿವರಿಸಿದ್ದಾರೆ.
ರಾಜಕೀಯವಾಗಿ ಟೀಕೆ ಮಾಡುವುದು ಬೇರೆ. ಆದರೆ, ವ್ಯಕ್ತಿಗತವಾಗಿ ಟೀಕೆ ಮಾಡಿದಾಗ ಏಕವಚನದಲ್ಲಿ ಮಾತನಾಡುವುದು ಸಂಸ್ಕೃತಿಗೆ ತಕ್ಕಂಥದ್ದಲ್ಲ. ಅವರ ಹೆಸರನ್ನು ಹೇಳಲು ಹೋಗುವುದಿಲ್ಲ. ಯಾರಿಂದಾದರೂ ಆ ಸಮಾಜಕ್ಕೆ ನೋವಾಗಿದ್ದರೆ ನೀವು ಇದನ್ನು ಮನಸಿನಿಂದ ತೆಗೆದುಹಾಕಿ. ನಾವೆಲ್ಲರೂ ಕೂಡಿಬಾಳೋಣ ಎಂದು ಸೌಹಾರ್ದತೆಯ ಬಗ್ಗೆ ತಿಳಿಸಿದ್ದಾರೆ.
ಮನೆಯಲ್ಲಿ ತಾಯಿ ತೀರಿಕೊಂಡರು. ತಂಗಿ ಗಂಡ ಕೂಡ ತೀರಿಹೋದರು. ಹಾಗಾಗಿ ಹೊರಬರಲು ಆಗಿಲ್ಲ. ಅನ್ಲಾಕ್ ಆದಮೇಲೆ ಪ್ರವಾಸ ಪ್ರಾರಂಭ ಮಾಡುತ್ತೇನೆ. ಜನರ ಮಧ್ಯೆ ಓಡಾಡಿ ಜೀವ ಇರೊವರೆಗೂ ಹೋರಾಡುತ್ತೇನೆ. ಯಾವ ಅಧಿಕಾರಕ್ಕೆ ಹೋಗಬೇಕು ಎನ್ನುವುದೂ ನನ್ನ ಆಸೆಯಲ್ಲ. ಎಲ್ಲಾ ಸಮಾಜದ ಜನರು ಒಂದು ತಾಯಿಯ ಮಕ್ಕಳಂತೆ ಬದುಕಬೇಕು ಎಂಬುದು ಆಸೆ ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಸಮಸ್ಯೆ ಆಗಿದ್ದಾಗ, ಜನವರಿ 5ರಂದು ಮಗ ತೀರಿಕೊಂಡ, ಅವನನ್ನು ಮಣ್ಣುಮಾಡಿ 6ನೇ ತಾರೀಖಿಗೆ ಅಲ್ಲಿಗೆ ಹೋಗಿ ಸಮಸ್ಯೆ ಪರಿಹಾರ ಮಾಡಿದೆ. ಈ ರಾಜ್ಯ ಕೂಡಿಬಾಳುವ ರಾಜ್ಯ. ಹಾಗೇ ಇರಬೇಕು. ಬಿಜೆಪಿ ಬಗ್ಗೆ ಅಭಿಪ್ರಾಯ ಬೇಧ ಇದೆ. ಆದರೆ, ಜಾತಿ ಹೆಸರು ನಿಂದನೆ ಮಾಡೋದಲ್ಲ. ಇಲ್ಲಿಗೆ ಇದನ್ನು ಮುಗಿಸೋಣ. ಇದರ ಮುಂದಿನ ಚರ್ಚೆ ಬೇಡ ಎಂದು ಹಳೆಯ ಘಟನೆಯನ್ನು ನೆನಪಿಸಿಕೊಂಡು, ಮಾತನಾಡಿದ್ದಾರೆ. ಜೈ ಹಿಂದ್. ಜೈ ಕರ್ನಾಟಕ ಎಂದೂ ವಿಡಿಯೋ ಕೊನೆಗೊಳಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಸಿದ್ಧಾಂತ ಏನೆಂದು ಅವರಿಗೆ ಗೊತ್ತಿಲ್ಲ: ಜಮೀರ್ ಅಹಮದ್ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ
Zameer Ahmed: ಲಸಿಕೆ ಜಾಗೃತಿ ಮೂಡಿಸಲು ಸ್ಕೂಟರ್ ಓಡಿಸಿದ ಶಾಸಕ ಜಮೀರ್ ಅಹ್ಮದ್ ಹೆಲ್ಮೆಟ್ ಹಾಕೋದು ಮರೆತರು
Published On - 7:49 pm, Sun, 27 June 21