
ಬೆಂಗಳೂರು: ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆಯಾದ ಬಳಿಕ ರಾಜರಾಜೇಶ್ವರಿನಗರದಲ್ಲಿ ಅಸೆಂಬ್ಲಿ ಉಪ ಚುನಾವಣಾ ಕಣ ರಂಗೇರಿದೆ. ಆರ್. ಮುನಿರತ್ನ ರಾಜೀನಾಮೆ ನಂತರ ತೆರವುಗೊಂಡ ಕ್ಷೇತ್ರವನ್ನ ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಮೂರೂ ಪ್ರಮುಖ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ.
ಈ ನಡುವೆ, ಒಮ್ಮತ ಅಭ್ಯರ್ಥಿಯನ್ನು ಹಾಕುವಂತೆ ಕಾಂಗ್ರೆಸ್ ನಾಯಕರ ಮೇಲೆ ಒತ್ತಡ ಹೇರಲಾಗುತ್ತಿದೆ. ಮೈತ್ರಿ ಸರ್ಕಾರದ ಪತನಕ್ಕೆ ನೇರ ಕಾರಣವೆಂದು ಹೇಳಲಾಗುವ S-B-M ತ್ರಯರಲ್ಲಿ ಮುನಿರತ್ನ ಸಹ ಒಬ್ಬರು. ಹೀಗಾಗಿ, ಮುನಿರತ್ನ ವಿರುದ್ಧ ಕಾಂಗ್ರೆಸ್-ಜೆಡಿಎಸ್ ಕೈ ಜೋಡಿಸಲೇ ಬೇಕು ಎಂಬುದು ಕೈ ಕಾರ್ಯಕರ್ತರ ಮನದಾಳದ ಮಾತು ಅನ್ನೋ ಮಾತಿದೆ.
ಟಾರ್ಗೆಟ್ ಮುನಿರತ್ನ ಯಶಸ್ವಿ ಸೂತ್ರ
ಉಭಯ ಪಕ್ಷಗಳು ಒಮ್ಮತದ ಅಭ್ಯರ್ಥಿ ಹಾಕಿದ್ರೆ ಮಾತ್ರ ಮುನಿರತ್ನ ಸೋಲು ಖಚಿತ. ಟಾರ್ಗೆಟ್ ಮುನಿರತ್ನ ಯಶಸ್ವಿ ಆಗಲೇ ಬೇಕು ಅಂತಿರೋ ಕೈ ಕಾರ್ಯಕರ್ತರು ದೋಸ್ತಿ ಸರ್ಕಾರ ಪತನಕ್ಕೆ ಮುನಿರತ್ನ ಕೂಡ ಕಾರಣ ಎಂಬ ತಮ್ಮ ಮನದಾಳದ ಕೋಪವನ್ನು ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಕ್ಕಿರೋ ಅವಕಾಶ ಬಿಡಲೇಬಾರದು. ಅದಕ್ಕಾಗಿ, DK ಶಿವಕುಮಾರ್ ಹಾಗೂ ಕುಮಾರಸ್ವಾಮಿ ಒಂದಾಗಿ ಅಭ್ಯರ್ಥಿ ಹಾಕುವಂತೆ ಒತ್ತಡ ಹೇರಿದ್ದು ಈಗಾಗಲೇ ಶಿವಕುಮಾರ್ರನ್ನು ಭೇಟಿಯಾಗಿ ರಾಜರಾಜೇಶ್ವರಿ ನಗರ ಕಾಂಗ್ರೆಸ್ ನಾಯಕರು ಮಾತುಕತೆ ನಡೆಸಿದ್ದಾರೆ.
ಆದಿಚುಂಚನಗಿರಿ ಮಠಕ್ಕೆ ದಿವಂಗತ DK ರವಿ ಪತ್ನಿ ಕುಸುಮಾ ಭೇಟಿ
ಈ ನಡುವೆ, ಆದಿಚುಂಚನಗಿರಿ ಮಠಕ್ಕೆ ಮಾಜಿ IAS ಅಧಿಕಾರಿ, ದಿವಂಗತ DK ರವಿ ಪತ್ನಿ ಕುಸುಮಾ ಭೇಟಿ ನೀಡಿದ್ದಾರೆ. ತಮ್ಮ ತಂದೆ ಹನುಮಂತರಾಯಪ್ಪ ಜೊತೆ ವಿಜಯನಗರದಲ್ಲಿರುವ ಶಾಖಾ ಮಠಕ್ಕೆ ಭೇಟಿ ಕೊಟ್ಟು ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದರು. ಕುಸುಮಾ RR ನಗರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಹೇಳಲಾಗುತ್ತಿದೆ.