ಉಡುಪಿ: ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜಾನುವಾರುಗಳನ್ನು ಪೊಲೀಸರು ರಕ್ಷಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಠಾಣೆಯ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ಇಂದು ಕಾರ್ಕಳದ ಪಳ್ಳಿಕಡೆಯಿಂದ ವೇಗವಾಗಿ ಬಂದ ಕಾರೊಂದನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಕಾರ್ ಚಾಲಕ, ವಾಹನ ನಿಲ್ಲಿಸದೆ ಮುಂದೆ ಸಾಗಿದ್ದಾನೆ. ಹೀಗಾಗಿ ಪೊಲೀಸರು ವಾಹನವನ್ನ ಹಿಂಬಾಲಿಸಿ ಕಟ್ಟಿಂಗೇರಿ ನಾಲ್ಕು ಬೀದಿ ಜಂಕ್ಷನ್ ಬಳಿ ಕಾರನ್ನು ಅಡ್ಡಗಟ್ಟಿದ್ದಾರೆ.
ಖಾಕಿಯನ್ನು ಕಂಡ ಕೂಡಲೇ ಕಾರಿನಲ್ಲಿದ್ದ ಖದೀಮರು ಅಲ್ಲಿಂದ ಕಾಲ್ಕಿತ್ತಿದ್ದಾರೆ . ಈ ವೇಳೆ ಕಾರಿನ ಡೋರ್ ತೆಗೆದು ನೋಡಿದ ಪೊಲೀಸರಿಗೆ ಶಾಕ್ ಆಗಿದೆ. ಕಾರಿನ ಇಕ್ಕಟ್ಟಾದ ಜಾಗದಲ್ಲಿ ಮೂರು ಜಾನುವಾರುಗಳ ಕಾಲುಗಳನ್ನು ಕಟ್ಟಿ ಕಿರಾತಕರು ತುಂಬಿದ್ದರು. ಕೂಡಲೆ ಪೊಲೀಸರು ಜಾನುವಾರಗಳನ್ನು ಕಾರಿನಿಂದ ಕೆಳಗಿಳಿಸಿ ರಕ್ಷಣೆ ಮಾಡಿದ್ದಾರೆ.
ಪರಾರಿಯಾಗಿರುವ ದುಷ್ಕರ್ಮಿಗಳಿಗೆ ಪೊಲೀಸರು ಬಲೆ ಬೀಸಿದ್ದು, ಜಾನುವಾರುಗಳ ಅಕ್ರಮ ಸಾಗಾಟಕ್ಕೆ ಬಳಸಿದ ಕಾರು ಉಮ್ಮರ್ ಮೊಯಿದ್ದೀನ್ ಎಂಬಾತನಿಗೆ ಸೇರಿದ್ದು ಎಂಬ ಮಾಹಿತಿ ನೀಡಿದ್ದಾರೆ.