ಬಾಗಲಕೋಟೆ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಿಗದಿಯಾಗಿದ್ದ ಮದುವೆಯನ್ನು ತಾಲೂಕು ಆಡಳಿತ ರದ್ದು ಮಾಡಿಸಿದೆ. ಬಳ್ಳಾರಿ ಯುವಕನ ಜೊತೆ ಇಂದು ಗುಳೇದಗುಡ್ಡದ ಯುವತಿ ಮದುವೆ ನಡೆಯಬೇಕಿತ್ತು. ಆದ್ರೆ, ಯುವಕನ ತಾಯಿಗೆ ಕೊರೊನಾ ಪಾಸಿಟಿವ್ ಇದೆ ಎನ್ನುವ ಮಾಹಿತಿ ಇದೆ. ಅಲ್ಲದೆ, ಬಳ್ಳಾರಿ ಆಸ್ಪತ್ರೆಯಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತ ಮಧುಮಗ ಹಾಗೂ ಸಂಬಂಧಿಕರು ಬಳ್ಳಾರಿಯಿಂದ ಬಸ್ ತೆಗೆದುಕೊಂಡು ಮದುವೆಗೆ ಗುಳೇದಗುಡ್ಡಕ್ಕೆ ಆಗಮಿಸಿದ್ದರು. ಈ ವಿಷಯ ತಿಳಿದು ರಾತ್ರಿಯೇ ಗುಳೇದಗುಡ್ಡ ತಾಲೂಕು ಆಡಳಿತ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದಾರೆ. ಮದುವೆಯನ್ನು ರದ್ದುಮಾಡಿಸಿ, ಬಂದವರನ್ನು ವಾಪಸ್ ಕಳುಹಿಸಿದ್ದಾರೆ.
ಗುಳೇದಗುಡ್ಡದ ಮರಡಿಮಠದ ಬಳಿ ಇರುವ ಹೆಣ್ಣಿನ ಮನೆಯ ಮುಂದೆ ಮದುವೆ ನಡೆಯಬೇಕಿತ್ತು. ಮದುವೆ ನಡೆಯಬೇಕಿದ್ದ ಆ ಪ್ರದೇಶವನ್ನು ಅಧಿಕಾರಿಗಳು ಸ್ಯಾನಿಟೈಸ್ ಮಾಡಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಉಪವಿಭಾಗಾಧಿಕಾರಿ ಗಂಗಪ್ಪ ಸೇರಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.