‘HDK ಪಾಪ ಕಷ್ಟದ ದಿನಗಳನ್ನು ಎದುರಿಸ್ತಿದ್ದಾರೆ -ಅವ್ರ ಮನಸ್ಸನ್ನು ಇನ್ನೂ ನೋಯಿಸಲು ಇಷ್ಟಪಡಲ್ಲ’
ಕುಮಾರಸ್ವಾಮಿ ಪಾಪ ಈಗ ರಾಜಕೀಯವಾಗಿ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಅವರ ಮನಸ್ಸನ್ನು ಇನ್ನೂ ನೋಯಿಸಲು ಇಷ್ಟ ಪಡಲ್ಲ ಎಂದು C.P.ಯೋಗೇಶ್ವರ್ ಹೇಳಿದರು.

ಬೆಂಗಳೂರು: ನಾನು ಹಿಂದೆಯೇ ಮಂತ್ರಿ ಆಗಿದ್ದವನು. ಕುಮಾರಸ್ವಾಮಿ ಹಿಂದೆ ರಾಜ್ಯದ ಸಿಎಂ ಆಗಿರಬೇಕು ಅಂತಾ ಜನ ಬಯಸಿದ್ರೂ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಅವರಿಗೆ ಆಗಲಿಲ್ಲ. ಹಾಗಾಗಿ, ಅವರು ಇವತ್ತು ಚನ್ನಪಟ್ಟಣಕ್ಕೆ ಮಾತ್ರ ಸೀಮಿತ ಆಗಿದ್ದಾರೆ ಎಂದು ನಾನೇ ಚನ್ನಪಟ್ಟಣಕ್ಕೆ ಸರ್ಕಾರ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಬಿಜೆಪಿ ವಿಧಾನಪರಿಷತ್ ಸದಸ್ಯ C.P.ಯೋಗೇಶ್ವರ್ ಪ್ರತಿಕ್ರಿಯಿಸಿದರು.
ಪಕ್ಷ ನನ್ನನ್ನು ರಾಜಕೀಯವಾಗಿ ಉನ್ನತೀಕರಿಸೋದು ಪಕ್ಷದ ಒಳಗೆ ಹಾಗೂ ಹೊರಗೆ ಬಹಳ ಜನರಿಗೆ ಸಂಕಟವಾಗ್ತಿದೆ. ಜೊತೆಗೆ, ಇದು ನನ್ನ ಸ್ನೇಹಿತರಾದ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ಗೆ ತಳಮಳ ಆಗಿರಬೇಕು. ಹೀಗಾಗಿ, ಎರಡೂ ಪಕ್ಷಗಳ ಧುರೀಣರು ಸಂಕಷ್ಟಕ್ಕೆ ಬಿದ್ದವರಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು.
ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ. ಕುಮಾರಸ್ವಾಮಿ ಬಹಳ ಹತಾಶವಾಗಿ ಮಾತಾಡ್ತಿದ್ದಾರೆ. ಶಿವಕುಮಾರ್ ಏನೇನೋ ಹೇಳಿಕೆಗಳನ್ನು ಕೊಡ್ತಿದ್ದಾರೆ. ಕುಮಾರಸ್ವಾಮಿ ಪಾಪ ಈಗ ರಾಜಕೀಯವಾಗಿ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಅವರ ಮನಸ್ಸನ್ನು ಇನ್ನೂ ನೋಯಿಸಲು ಇಷ್ಟ ಪಡಲ್ಲ ಎಂದು C.P.ಯೋಗೇಶ್ವರ್ ಹೇಳಿದರು.
ಕುಮಾರಸ್ವಾಮಿ ಸಿಎಂ ಭೇಟಿಗೆ ಅಂತಾ ಬರ್ತಾರೆ, ಏನು ಮಾಡಕಾಗುತ್ತೆ? ಪಾಪ ಈಗಾಗಲೇ ಬಹಳ ನೊಂದಿದ್ದಾರೆ, ಅಧಿಕಾರ ಕಳೆದುಕೊಂಡಿದ್ದಾರೆ. ಕೆಲಸ ಮಾಡಿಸಿಕೊಂಡು ಹೋಗಲಿ, ಯಾರು ಬೇಡ ಅಂತಾರೆ ಎಂದು ಯೋಗೇಶ್ವರ್ ಹೇಳಿದರು. ‘ಅವರನ್ನ ಮಂತ್ರಿ ಮಾಡಿಬಿಟ್ರೆ ಹೆದರಿಕೊಳ್ಳೋನಲ್ಲ ನಾನು.. ಚನ್ನಪಟ್ಟಣಕ್ಕೆ ನಾನೇ ಮಂತ್ರಿ – ನಾನೇ ಸರ್ಕಾರ’
‘ಶಿವಕುಮಾರ್ ಗಾಳಿಯಲ್ಲಿ ಪಟಾಕಿ ಹೊಡೆಯುತ್ತಲೇ ಇರ್ತಾರೆ’ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ ಕುರಿತು ದೆಹಲಿಗೆ ಹೋಗಿ ಬಂದ MLC ವರಿಷ್ಠರಿಗೆ ಮಾಹಿತಿ ಕೊಟ್ಟಿದ್ದಾರೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ನನಗೆ ಅದು ಗೊತ್ತಿಲ್ಲ, ಶಿವಕುಮಾರ್ ಅವರನ್ನೇ ಕೇಳಬೇಕು. ನಿನ್ನೆ ನನ್ನ ಜೊತೆ MLC ನಾರಾಯಣ ಸ್ವಾಮಿ ಕೂಡಾ ಬಂದಿದ್ದರು ಎಂದು ಯೋಗೇಶ್ವರ್ ಪ್ರತಿಕ್ರಿಯಿಸಿದರು.
ಜೊತೆಗೆ, ಡಿ.ಕೆ. ಶಿವಕುಮಾರ್ ಎಲ್ಲಾ ಹೇಳಿಕೆಗಳಿಗೆ ಉತ್ತರ ಕೊಡಬೇಕಂತಿಲ್ಲ. ಅವರು ನನ್ನ ಬಗ್ಗೆ ಇಂತಹ ಪಿತೂರಿ ಮಾಡುತ್ತಲೇ ಇರ್ತಾರೆ, ಗೊತ್ತಿರುವುದೇ ಅದು. ನನ್ನ ಬಗ್ಗೆ ಪಿತೂರಿ ಮಾಡಿದ ಕುಮಾರಸ್ವಾಮಿ, ಶಿವಕುಮಾರ್ ಇವತ್ತು ಏನು ಅನುಭವಿಸುತ್ತಿದ್ದಾರೆ ಅಂತಾ ನೀವು ನೋಡ್ತಿದ್ದೀರಿ. ಅವರು ಮುಂದೆ ಇನ್ನೂ ಬಹಳ ಅನುಭವಿಸುವುದು ಇದೆ ಎಂದು ನಯವಾಗಿ ತಿರುಗೇಟು ಕೊಟ್ಟರು.
ಅಂದು ನಾನು ಅವರ ಕಾಲಿಗೆ ಬಿದ್ದೆ ಅಂತಾ ಶಿವಕುಮಾರ್ ಹೇಳಿದ್ದರಲ್ಲ ಆಮೇಲೆ ಅವರು ಅದನ್ನು ಏನೂ ಹೇಳಲೇ ಇಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ಬಹಳ ಕೀಳು ಅಭಿರುಚಿಯ ವಿಷಯ ಪ್ರಸ್ತಾಪ ಮಾಡಿ ನಗೆಪಾಟಲಿಗೆ ಈಡಾಗುತ್ತಿದ್ದಾರೆ. ಯಾಕೆ ಈ ಹತಾಶೆ ಮನೋಭಾವನೆ ಅಂತಾ ಗೊತ್ತಿಲ್ಲ ಎಂದು ಯೋಗೇಶ್ವರ್ ಹೇಳಿದರು.