ಕೊನೆಗೂ ಮಂಡಿಯೂರಿದ ಕ್ರಿಕೆಟ್ ಆಸ್ಟ್ರೇಲಿಯಾ..! ಸಿಡ್ನಿಯಲ್ಲಿ ಭಾರತೀಯ ಆಟಗಾರರು ಜನಾಂಗೀಯ ನಿಂದನೆಗೊಳಗಾಗಿದ್ದು ನಿಜ
ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ಜನಾಂಗೀಯ ನಿಂದನೆಗೆ ಒಳಗಾಗಿದ್ದರು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ದೃಢಪಡಿಸಿದೆ.
ಸಿಡ್ನಿ: ಇತ್ತೀಚೆಗೆ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಕ್ರಿಕೆಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯದ ವೇಳೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (SCG) ಪ್ರೇಕ್ಷಕರಿಂದ ಭಾರತೀಯ ಆಟಗಾರರು ಜನಾಂಗೀಯ ಕಿರುಕುಳಕ್ಕೆ ಒಳಗಾಗಿರುವುದು ಸತ್ಯ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಬುಧವಾರ ಒಪ್ಪಿಕೊಂಡಿದೆ.
ಸಿಡ್ನಿ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಕೊನೆಯಲ್ಲಿ ಎಸ್‌ಸಿಜಿ ಕ್ರೀಡಾಂಗಣದಲ್ಲಿ ಕುಳಿತಿದ್ದ ಪ್ರೇಕ್ಷಕರು, ಟೀಂ ಇಂಡಿಯಾ ಆಟಗಾರರಾದ ಜಸ್ಪ್ರಿತ್ ಬುಮ್ರಾ ಮತ್ತು ಸಿರಾಜ್ ಅವರನ್ನು ಜನಾಂಗೀಯ ನಿಂದನೆಗೆ (sledging) ಗುರಿಪಡಿಸಿದ್ದಾರೆ ಎಂದು ಮ್ಯಾಚ್ ರೆಫರಿ ಡೇವಿಡ್ ಬೂನ್‌ಗೆ ಟೀಂ ಇಂಡಿಯಾ ಆಟಗಾರರು ದೂರು ನೀಡಿದ್ದರು. ನಂತರ ನಾಲ್ಕನೇ ದಿನಾದಟದಲ್ಲೂ ಈ ಘಟನೆ ಮರುಕಳಿಸಿತು. ಹೀಗಾಗಿ ಟೀಂ ಇಂಡಿಯಾ ಆಟಗಾರರು ಈ ವಿಚಾರವನ್ನು ಮತ್ತೆ ಆಂಪೈರ್ ಗಮನಕ್ಕೆ ತಂದರು.
ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ಗೆ ವರದಿ ಸಲ್ಲಿಕೆ ಇದರಿಂದಾಗಿ ನಾಲ್ಕನೇ ದಿನದಂದು ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್ ಸಮಯದಲ್ಲಿ ಟೀ ವಿರಾಮಕ್ಕೂ ಮುನ್ನ ಆರು ಜನರನ್ನು ಮೈದಾನದಿಂದ ಹೊರಹಾಕಲಾಯಿತು. ಈ ಘಟನೆಯ ನಂತರ, ಕ್ರಿಕೆಟ್ ಆಸ್ಟ್ರೇಲಿಯಾ ತನಿಖೆಯನ್ನು ಪ್ರಾರಂಭಿಸಿತ್ತು ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಈ ವಿಚಾರದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿಗೆ ಸೂಚಿಸಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಕ್ರಿಕೆಟ್ ಆಸ್ಟ್ರೇಲಿಯಾ, ಭಾರತ ವಿರುದ್ಧದ ಮೂರನೇ ಟೆಸ್ಟ್ ಸಮಯದಲ್ಲಿ ಎಸ್‌ಸಿಜಿ ಮೈದಾನದಲ್ಲಿ ಪ್ರೇಕ್ಷಕರ ವರ್ತನೆ ಕುರಿತು ತನ್ನ ವರದಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ಗೆ ಸಲ್ಲಿಸಿದೆ ಎಂದು ಸಿಎ ಸಮಗ್ರತೆ ಮತ್ತು ಭದ್ರತೆಯ ಮುಖ್ಯಸ್ಥ ಸೀನ್ ಕ್ಯಾರೊಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನಾಂಗೀಯ ನಿಂದನೆಗೆ ಒಳಗಾಗಿದ್ದರು.. ವರದಿಯಲ್ಲಿ, ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ಜನಾಂಗೀಯ ನಿಂದನೆಗೆ ಒಳಗಾಗಿದ್ದರು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ದೃಢಪಡಿಸಿದೆ. ಈ ವಿಷಯದ ಬಗ್ಗೆ ಸಿಎ ಸ್ವಂತ ತನಿಖೆ ಮುಕ್ತವಾಗಿದೆ, ಸಿಸಿಟಿವಿ ದೃಶ್ಯಾವಳಿಗಳು, ಟಿಕೆಟಿಂಗ್ ಡೇಟಾಗಳ ವಿಶ್ಲೇಷಣೆಯ ಮೂಲಕ ಈ ಘಟನೆಗೆ ಕಾರಣಕರ್ತರನ್ನು ಸಿಎ ಪತ್ತೆಹಚ್ಚಲಿದೆ ಎಂದರು.
ಜನಾಂಗೀಯ ನಿಂದನೆಗೊಳಗಾದ ಮಹಮದ್ ಸಿರಾಜ್ ಭಾರತಕ್ಕೆ ಮರಳಿದ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಈ ಬಗ್ಗೆ ಮಾತಾನಾಡಿದ್ದ ಸಿರಾಜ್, ಪ್ರಕರಣದ ತನಿಖೆ ನಡೆಯುತ್ತಿದೆ. ನಮಗೆ ನ್ಯಾಯ ಸಿಗುತ್ತದೆಯೋ ಇಲ್ಲವೋ ಎಂದು ನೋಡೋಣ. ನಾನು ಫಿಲ್ಡಿಂಗ್ ಮಾಡುವ ವೇಳೆ ಕೆಲವು ಪ್ರೇಕ್ಷಕರು ನನ್ನನ್ನು ನಿಂದಿಸುತ್ತಿದ್ದಾರೆಂದು ನಾನು ನನ್ನ ತಂಡದ ನಾಯಕರಾದ ಅಜಿಂಕ್ಯಾ ರಹಾನೆಗೆ ಹೇಳಿದ್ದೆ ಎಂದಿದ್ದರು.
ನಾವು ಕ್ರಿಕೆಟ್ ಆಟವನ್ನು ಗೌರವಿಸುತ್ತೇವೆ.. ಇದನ್ನು ಗಂಭೀರವಾಗಿ ಪರಿಗಣಿಸಿದ ರಹಾನೆ ಈ ವಿಚಾರವನ್ನು ಅಂಪೈರ್ ಬಳಿ ಹೇಳಿಕೊಂಡರು. ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡ ಅಂಪೈರ್, ನೀವು ಆಟವನ್ನು ಇಲ್ಲಿಗೆ ನಿಲ್ಲಿಸಬಹುದು ಎಂದು ಹೇಳಿದ್ದರು. ಆದರೆ ಕ್ಯಾಪ್ಟನ್ ರಹಾನೆ, ನಾವು ಹಾಗೆ ಹೋಗುವುದಿಲ್ಲ, ನಾವು ಕ್ರಿಕೆಟ್ ಆಟವನ್ನು ಗೌರವಿಸುತ್ತೇವೆ. ನೀವು ಆ ಪ್ರೇಕ್ಷಕರನ್ನು ಮೈದಾನದಿಂದ ಹೊರಗೆ ಕಳುಹಿಸಬಹುದು ಎಂದು ಅಂಪೈರ್ ಬಳಿ ಹೇಳಿಕೊಂಡಿದ್ದರು ಎಂದು ಸಿರಾಜ್ ಹೇಳಿಕೆ ನೀಡಿದ್ದರು.
ಘಟನೆಯ ಬಳಿಕ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಡೇವಿಡ್ ವಾರ್ನರ್ ಮತ್ತು ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಸೇರಿದಂತೆ ಆಸ್ಟ್ರೇಲಿಯಾದ ಆಟಗಾರರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು.
Published On - 12:11 pm, Wed, 27 January 21