ಇಂಡಿಯನ್ ಪ್ರಿಮೀಯರ್ ಲೀಗ್ 13 ನೇ ಆವೃತ್ತಿಯ ನಂತರ ಚೆನೈ ಸೂಪರ್ ಕಿಂಗ್ಸ್ ಟೀಮಿಗೆ ಮೇಜರ್ ಸರ್ಜರಿಯಾಗುವುದು ಖಚಿತವಾಗಿದೆ. ಮಹೇಂದ್ರಸಿಂಗ್ ಧೋನಿಯ ಪಡೆಯಲ್ಲಿ ಮೂವತ್ತಕ್ಕಿಂತ ಜಾಸ್ತಿ ವಯಸ್ಸಾಗಿರುವವರು ಮೆಜಾರಿಟಿಯಾಗಿರುವುದರಿಂದಲೇ ಅದನ್ನು 2017ರಿಂದಲೇ ಡ್ಯಾಡೀಸ್ ಆರ್ಮಿ ಎಂದು ಕರೆಯಲಾಗುತಿತ್ತು. ಆದರೆ ಡ್ಯಾಡಿಗಳು ಪ್ರತಿ ಸೀಸನ್ನಲ್ಲೂ ಉತ್ತಮವಾಗಿ ಪರ್ಫಾರ್ಮ್ ಮಾಡುತ್ತಿದ್ದುದ್ದರಿಂದ ಆ ಟ್ಯಾಗ್ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ.
ಆದರೆ ಪ್ರಸಕ್ತ ಸೀಸನ್ನಲ್ಲಿ ಡ್ಯಾಡಿಗಳು ದಣಿದರೋ, ಸುಸ್ತಾದರೋ ಅಥವಾ ಎರಡು ವರ್ಷಗಳ ಹಿಂದೆ ಅವರಲ್ಲಿದ್ದ ಶಕ್ತಿ ಉಡುಗಿಹೋಗಿದೆಯೋ ಅನ್ನೋದು ಅವರಿಂದಲೇ ಗೊತ್ತಾಗಬೇಕು. ಇವರೆಲ್ಲ ನಿಷ್ಪ್ರಯೋಜಕರು ಅಂತ ಅವರ ದಣಿಗಳಿಗೆ ಗೊತ್ತಾಗಿದೆ. ಹಾಗಾಗೇ, ಅವರನ್ನು ಟೀಮಿನಿಂದ ಹೊರಹಾಕಿ ಯುವಕರನ್ನು ಸೇರಿಸಿಕೊಳ್ಳುವ ಯೋಚನೆ ನಡೆಯುತ್ತಿದೆ.
ಅಂದಹಾಗೆ, ಯಾರ ತಲೆದಂಡ ಆಗಲಿದೆ ಅನ್ನುವುದರ ಬಗ್ಗೆ ನೋಡುವುದಾದದರೆ, ಮೊದಲ ಸಾಲಿನಲ್ಲೇ ನಾಯಕ ಎಮ್ ಎಸ್ ಧೋನಿ ಕಾಣಿಸುತ್ತಾರೆ. ಆದರೆ, ಟೀಮ್ ಮ್ಯಾನೇಜ್ಮೆಂಟ್ ಅವರನ್ನು ಅಷ್ಟು ಕಠೋರವಾಗಿ ನಡೆಸಿಕೊಳ್ಳಲಾರದು. ಯಾಕೆಂದರೆ, ರಾಂಚಿಯ ರಾಕ್ಸ್ಟಾರ್, ಸೂಪರ್ ಕಿಂಗ್ಸ್ ನೀಡಿರುವ ಸೇವೆ ಅಸಾಮಾನ್ಯವಾದದ್ದು. ತಮಿಳನಾಡಿನಲ್ಲಿ ವ್ಯಕ್ತಿಪೂಜೆ ಜಾಸ್ತಿ ಕಂಡುಬರುತ್ತದೆ. ಅಲ್ಲಿ ಸಿನಿಮಾ ಹೀರೊಗಳು, ರಾಜಕಾರಣಿಗಳು ದೇವರ ನಂತರದ ಸ್ಥಾನ ಪಡೆದುಕೊಂಡುಬಿಡುತ್ತಾರೆ. ಧೋನಿಗೂ ಅಂಥ ಗೌರವ, ಆದರ ದಕ್ಕಿಬಿಟ್ಟಿದೆ. ಕಳೆದ 12 ಸೀಸನ್ಗಳಲ್ಲಿ ಪ್ರತಿಬಾರಿ ಚೆನೈ ಪ್ಲೇ ಆಫ್ ಹಂತ ತಲುಪಿದೆ, ಮತ್ತು ಮೂರು ಬಾರಿ ಪ್ರಶಸ್ತಿ ಗೆದ್ದಿದೆ. ಕೇವಲ ಮುಂಬೈ ಇಂಡಿಯನ್ಸ್ ಮಾತ್ರ ಚೆನೈಗಿಂತ ಹೆಚ್ಚು ಸಲ (4) ಟ್ರೋಫಿ ಗೆದ್ದ್ದಿದೆ. ಇದೇನು ಕಡಿಮೆ ಸಾಧನೆಯೇ?
ಈ ಹಿನ್ನೆಲೆಯಲ್ಲಿ, ಧೋನಿ ಕನಿಷ್ಠ ಇನ್ನೊಂದು ಸೀಸನ್ಗೆ ಮುಂದುವರಿಯಲಿದ್ದಾರೆ. ಆದರೆ, ಕೇದಾರ್ ಜಾಧವ್, ಇಮ್ರಾನ್ ತಾಹಿರ್, ಶೇನ್ ವಾಟ್ಸನ್, ಪಿಯುಷ್ ಚಾವ್ಲಾ, ಡ್ವೇನ್ ಬ್ರಾವೊ ಮೊದಲಾದವರ ತಲೆದಂಡ ಪಕ್ಕಾ. ಡ್ಯಾಡಿ ಆರ್ಮಿಯ ಮತ್ತಿಬ್ಬರು ಯೋಧರಾಗಿರುವ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರ ಮೂರು ವರ್ಷದ ಕಾಂಟ್ರ್ಯಾಕ್ಟ್ ಇದೇ ಸೀಸನ್ಗೆ ಮುಗಿದಿದೆ. ಅದನ್ನು ನವೀಕರಿಸುವ ಇರಾದೆ ಟೀಮ್ ಮ್ಯಾನೇಜ್ಮೆಂಟ್ ಖಂಡಿತವಾಗಿಯೂ ಮಾಡದು.
ಐಪಿಎಲ್ 14ನೇ ಸೀಸನ್ಗೆ ಬಹಳ ದಿನಗಳೇನೂ ಉಳಿದಿಲ್ಲ. ಈ ಬಾರಿ ಆಟಗಾರರ ಹರಾಜು ಪ್ರಕ್ರಿಯೆ ನಡೆದರೆ ಚೆನೈ ಟೀಮಿನ ಸೀನಿಯರ್ ಸಿಟಿಜನ್ಗಳಿಗೆ ವಿಆರ್ಎಸ್ ತೆಗೆದುಕೊಳ್ಳಿ ಅಂತ ನೊಟೀಸು ಜಾರಿಯಾಗೋದು ನಿಶ್ಚಿತ.