ದಾವಣಗೆರೆ: ರಾಜ್ಯದಲ್ಲಿ ಮೀಸಲಾತಿ ಹೋರಾಟದ ಕಾವು ಹೆಚ್ಚಾಗುತ್ತಿರೋ ಬೆನ್ನಲ್ಲೇ ನಿನ್ನೆಯಿಂದ ವಾಲ್ಮೀಕಿ ಜಾತ್ರೆ ಶುರುವಾಗಿದೆ. ಪಂಚಮಸಾಲಿಗೆ 2 ಎ ಮೀಸಲಾತಿ.. ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡುವ ಎರಡು ವಿಚಾರ ಸಿಎಂ ಸುತ್ತಲೂ ಗಿರಕಿ ಹೊಡೆಯುತ್ತಿದೆ. ಆದ್ರೀಗ, ದಾವಣಗೆರೆಯ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ನಡೆಯುತ್ತಿರೋ ವಾಲ್ಮೀಕಿ ಜಾತ್ರೆ ಮೀಸಲಾತಿ ಘೋಷಣೆಯ ನಿರೀಕ್ಷೆ ಹುಟ್ಟುಹಾಕಿದೆ. ಜಾತ್ರೆಯ ಕೊನೆಯ ದಿನವಾದ ಇಂದು ಸಿಎಂ ಬಿಎಸ್ ಯಡಿಯೂರಪ್ಪ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ಹೆಲಿಪ್ಯಾಡ್ ಆಗಮಿಸಿದ್ದು ಸಚಿವ ರಮೇಶ್ ಜಾರಕಿಹೊಳಿ ಬಿಎಸ್ವೈಗೆ ಸ್ವಾಗತಿಸಿದ್ದಾರೆ. ಹಾಗೂ ಪೊಲೀಸರಿಂದ ಗೌರವ ವಂದನೆ ಸಲ್ಲಿಸಲಾಗಿದೆ. ಬಳಿಕ ವೇದಿಕೆಗೆ ಆಗಮಿಸಿದ ಸಿಎಂ ಯಡಿಯೂರಪ್ಪ, ವಾಲ್ಮಿಕಿ ಪ್ರತಿಮೆಗೆ ಪುಷ್ಪ ಅರ್ಚನೆ ಮಾಡಿದ್ರು. ಈ ವೇಳೆ ಸಿಎಂ ಜೊತೆ ರಮೇಶ್ ಜಾರಕಿಹೊಳಿ, ಎಂಪಿ ರೇಣುಕಾಚಾರ್ಯ, ಭೈರತಿ ಬಸವರಾಜ ಉಪಸ್ಥಿತರಿದ್ರು.
ಈ ದೇಶದಲ್ಲಿನ ಧಾರ್ಮಿಕ ಬೇರು ಜಗತ್ತಿಗೆ ಬೆಳಕು ನೀಡಿದೆ
ಸಮಾವೇಶದಲ್ಲಿ ಮಾತನಾಡಿದ ನಿಜಗುಣಾನಂದ ಸ್ವಾಮೀಜಿ ‘ಈ ದೇಶದಲ್ಲಿನ ಧಾರ್ಮಿಕ ಬೇರು ಜಗತ್ತಿಗೆ ಬೆಳಕು ನೀಡಿದೆ. ಇಲ್ಲಿ ಎಲ್ಲರೂ ಭಾವೈಕ್ಯತೆಯಿಂದ ಒಟ್ಟಾಗಿದ್ದೇವೆ. ಧರ್ಮ ತಿಳಿಸಬೇಕಿರುವುದು ಅನ್ನ, ಅರಿವೆ, ಆಶ್ರಯ, ಔಷಧ, ಮನುಷ್ಯ ಬೆಳೆಯಬೇಕಾದರೆ ಇವೆಲ್ಲವೂ ಬೇಕು. ದೇಶ ಸಂತೃಪ್ತಿಯಿಂದ ಇರಲು ರೈತ ಸಂತೃಪ್ತಿಯಿಂದಿರಬೇಕು. ವಾಲ್ಮೀಕಿ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಮಹಾತ್ಮರೆಲ್ಲರೂ ಮಾನವ ಕುಲದ ಏಳಿಗೆಗಾಗಿ ಬಂದವರು. ಬಸವಣ್ಣ, ಬುದ್ದ, ಅಂಬೇಡ್ಕರ್, ಕನಕ ಒಂದು ಸಮುದಾಯಕ್ಕೆ ಸೀಮೀತರಾದವರಲ್ಲ. ಈ ಸಮುದಾಯಗಳಿಗೆ ನ್ಯಾಯ ಸಿಕ್ಕಿದಾಗ ದೇಶದ ಅಸ್ಮಿತೆ ಉಳಿಯುತ್ತದೆ ಎಂದು ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿ ಭಾಷಣದ ವೇಳೆ ಹೇಳಿದರು.
ವಾಲ್ಮೀಕಿ ಸಮುದಾಯದ ಶೇ.7.5ರಷ್ಟು ಮೀಸಲಾತಿ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು ಎಂದು ವಾಲ್ಮೀಕಿ ಜಾತ್ರೆಯಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ.
ವಾಲ್ಮೀಕಿ ಸಮಾವೇಶದಲ್ಲಿ ಮೀಸಲಾತಿ ಬಗ್ಗೆ ಘೋಷಣೆ ಇಲ್ಲ
ಇನ್ನು ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ‘ಮೀಸಲಾತಿ ಸಂಬಂಧ ಸಚಿವರ ಉಪಸಮಿತಿ ರಚನೆಯಾಗಿದೆ. ಉಪ ಸಮಿತಿ ಸಭೆ ಸೇರಿ ಸರ್ಕಾರಕ್ಕೆ ವರದಿ ಕೊಡಬೇಕಾಗಿದೆ. ವರದಿ ನೀಡದೆ ಶೇಕಡಾ 7.5ರಷ್ಟು ಮೀಸಲಾತಿ ನೀಡಲಾಗಲ್ಲ’ ಎಂದು ಹೇಳಿದ್ದಾರೆ.
ಇನ್ನು ಬೆಳಗಾವಿ ಲೋಕಸಭಾ ಕ್ಷೇತ್ರದ ಬೈಎಲೆಕ್ಷನ್ ಸಂಬಂಧ ಚರ್ಚೆ ನಡೆಯುತ್ತಿತ್ತು. ‘ಕೈ’ ಅಭ್ಯರ್ಥಿ ಆಯ್ಕೆ ಸಂಬಂಧ ಈಗಾಗಲೇ 2-3 ಸುತ್ತಿನ ಸಭೆ ನಡೆದಿದೆ. ಪಕ್ಷದವರು ಮೂವರ ಹೆಸರನ್ನು ವರಿಷ್ಠರಿಗೆ ಕಳುಹಿಸಿದ್ದಾರೆ. ಪಕ್ಷ ಹೇಳಿದರೆ ಅನಿವಾರ್ಯವಾಗಿ ಬೈಎಲೆಕ್ಷನ್ನಲ್ಲಿ ಸ್ಪರ್ಧಿಸುವೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.