ದೊಡ್ಡ ರೈತರು ಸಾಲ ವಾಪಸ್ ಕಟ್ಟುತ್ತಿಲ್ಲ, ಅನುಮಾನದ ಗೂಡಾದ DCC ಬ್ಯಾಂಕ್ ವಹಿವಾಟು

ಕಲಬುರಗಿ : ಸರ್ಕಾರ ಜಾರಿಗೊಳಿಸಿರುವ ಬಡ್ಡಿ ಮನ್ನಾ ಯೋಜನೆಯ ಲಾಭ ಪಡೆದುಕೊಳ್ಳಲು ಯಾದಗಿರಿ-ಕಲಬುರಗಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ನಿಂದ ಮಧ್ಯಮ ಅವಧಿ ಸಾಲ ಪಡೆದ ಅನೇಕ ರೈತರು ಹಿಂದೇಟು ಹಾಕುತ್ತಿದ್ದಾರೆ. ಒಟ್ಟು ಮೊತ್ತದಲ್ಲಿ ಅರ್ಧದಷ್ಟು ಕಡಿಮೆಯಾಗುತ್ತಿದ್ದರೂ ಸಹ ಕೆಲ ದೊಡ್ಡ ಮತ್ತು ಶಕ್ತಿಯುಳ್ಳ ರೈತರು ಹಿಂದೇಟು ಹಾಕುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಲಬುರಗಿ ನಗರದಲ್ಲಿರುವ ಡಿಸಿಸಿ ಬ್ಯಾಂಕ್‌ನಿಂದ 2099 ಜನ ರೈತರು ಮಧ್ಯಮ ಅವಧಿ ಸಾಲ ಪಡೆದುಕೊಂಡಿದ್ದಾರೆ. ಇವರಲ್ಲಿ 413 ರೈತರು ಮಾತ್ರ ಸಾಲ ಮರು ಪಾವತಿಸಿದ್ದಾರೆ. […]

ದೊಡ್ಡ ರೈತರು ಸಾಲ ವಾಪಸ್ ಕಟ್ಟುತ್ತಿಲ್ಲ, ಅನುಮಾನದ ಗೂಡಾದ DCC ಬ್ಯಾಂಕ್ ವಹಿವಾಟು
Guru

| Edited By: sadhu srinath

Jun 27, 2020 | 5:04 PM

ಕಲಬುರಗಿ : ಸರ್ಕಾರ ಜಾರಿಗೊಳಿಸಿರುವ ಬಡ್ಡಿ ಮನ್ನಾ ಯೋಜನೆಯ ಲಾಭ ಪಡೆದುಕೊಳ್ಳಲು ಯಾದಗಿರಿ-ಕಲಬುರಗಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ನಿಂದ ಮಧ್ಯಮ ಅವಧಿ ಸಾಲ ಪಡೆದ ಅನೇಕ ರೈತರು ಹಿಂದೇಟು ಹಾಕುತ್ತಿದ್ದಾರೆ. ಒಟ್ಟು ಮೊತ್ತದಲ್ಲಿ ಅರ್ಧದಷ್ಟು ಕಡಿಮೆಯಾಗುತ್ತಿದ್ದರೂ ಸಹ ಕೆಲ ದೊಡ್ಡ ಮತ್ತು ಶಕ್ತಿಯುಳ್ಳ ರೈತರು ಹಿಂದೇಟು ಹಾಕುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕಲಬುರಗಿ ನಗರದಲ್ಲಿರುವ ಡಿಸಿಸಿ ಬ್ಯಾಂಕ್‌ನಿಂದ 2099 ಜನ ರೈತರು ಮಧ್ಯಮ ಅವಧಿ ಸಾಲ ಪಡೆದುಕೊಂಡಿದ್ದಾರೆ. ಇವರಲ್ಲಿ 413 ರೈತರು ಮಾತ್ರ ಸಾಲ ಮರು ಪಾವತಿಸಿದ್ದಾರೆ. ಬಡ ಮತ್ತು ಸಣ್ಣ ರೈತರು ಸಾಲ ಮರು ಪಾವತಿಸುತ್ತಿದ್ದರೆ, ದೊಡ್ಡ ರೈತರು ಮಾತ್ರ ಸಾಲ ಮರುಪಾವತಿಸಲು ಆಸಕ್ತಿ ತೋರುತ್ತಿಲ್ಲ. ಇದು ಅನುಮಾನಕ್ಕೆಡೆ ಮಾಡಿದೆ.

ತಲಾ ಐದು ಲಕ್ಷದಿಂದ ಹತ್ತು ಲಕ್ಷದವರೆಗೆ ಸಾಲ ಮುಂಗಾರು ಹಂಗಾಮಿಗೆ ಸಣ್ಣ ರೈತರಿಗೆ ಬೆಳೆ ಸಾಲ ಸಿಗುತ್ತಿಲ್ಲ ಎಂದು ಪರದಾಡುತ್ತಿರುವಾಗ, ಈ ದೊಡ್ಡ ರೈತರು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಬಹುತೇಕ ರೈತರು ಜಮೀನಿನಲ್ಲಿ ನೀರಾವರಿ ಮಾಡಲು ಪೈಪ್‌ಲೈನ್, ಟ್ರ್ಯಾಕ್ಟರ್ ಖರೀದಿಗೆ, ಕೃಷಿ ಸಲಕರಣೆ ಖರೀದಿಸಲು ಮಧ್ಯಮ ಅವಧಿ ಸಾಲವನ್ನು ಪಡೆದುಕೊಂಡಿದ್ದಾರೆ. ಪ್ರತಿಯೊಬ್ಬರು ಕನಿಷ್ಠ ಐದು ಲಕ್ಷದಿಂದ ಹತ್ತು ಲಕ್ಷದವರೆಗೆ ಸಾಲ ಪಡೆದುಕೊಂಡಿದ್ದಾರೆ.

ಸಾಲ ಕಟ್ಟಿದರೆ ಬಡ್ಡಿ ಮನ್ನಾ ಇನ್ನು ಸಾಲ ಪಡೆದುಕೊಂಡು ಐದಾರು ವರ್ಷಗಳಾಗಿದ್ದರಿಂದ ಈಗ ಅಸಲು ಬಡ್ಡಿ ಸೇರಿ ಡಬಲ್ ಆಗಿದೆ. ಇತ್ತೀಚೆಗೆ ಸರ್ಕಾರ ಮಧ್ಯಮ ಅವಧಿ ಸಾಲ ಪಡೆದುಕೊಂಡವರಿಗೂ ಸಹಾಯ ಮಾಡಿಕೊಡಲು ಸಂಪೂರ್ಣ ಬಡ್ಡಿ ಮನ್ನಾ ಮಾಡಿದೆ. ಐದಾರು ವರ್ಷಗಳ ಹಿಂದೆ ತೆಗೆದುಕೊಂಡ ಸಾಲದಲ್ಲಿ ಉಳಿದದ್ದನ್ನು ಕಟ್ಟಿದರೆ ಅವರ ಎಲ್ಲ ಬಡ್ಡಿ ಮನ್ನಾ ಆಗುತ್ತದೆ. ಇದಕ್ಕೆ ಜೂನ್ ತಿಂಗಳ 30ರವರೆಗೂ ಅವಕಾಶವಿದೆ.

ಸಾಲ ಮನ್ನಾ ಆಗುತ್ತದೆ ಎಂದು ರೈತರ ದಾರಿತಪ್ಪಿಸಲಾಗುತ್ತಿದೆ ಆದರೆ, ಕೆಲವರು ಸಾಲವೇ ಮನ್ನಾ ಆಗುತ್ತದೆ ಎಂದುಕೊಂಡು ತೆಪ್ಪಗಿದ್ದಾರೆ. ಕೊರೊನಾ ಹೊಡೆತಕ್ಕೆ ಸರ್ಕಾರವೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವಾಗ ಮನ್ನಾ ಮಾಡುವ ಮಾತೇ ಇಲ್ಲ ಎಂದೂ ಸ್ಪಷ್ಟಪಡಿಸಿದೆ. ಆದರೂ ಕೆಲವರು ರೈತರ ದಾರಿ ತಪ್ಪಿಸುತ್ತಿದ್ದಾರೆ ಎಂಬ ಗುಸುಗುಸು ಕೇಳಿ ಬರುತ್ತಿದೆ. ಇದು ಬ್ಯಾಂಕಿನವರ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ತೆಗೆದುಕೊಂಡ ಸಾಲವನ್ನ ಅವಧಿಯೊಳಗೆ ಪಾವತಿಸದವರ ಮೇಲೆ ಕಾನೂನು ಕ್ರಮ ಕೈಗೊಂಡರೆ ಮಾತ್ರ ಬ್ಯಾಂಕ್‌ನ ಆರ್ಥಿಕ ಸ್ಥಿತಿ ಸುಧಾರಿಸಬಹುದು.

ಚಿಕ್ಕ ಹಿಡುವಳಿದಾರರಿಗೆ ಸಿಗುತ್ತಿಲ್ಲ ಸಾಲ ಇನ್ನು ದೊಡ್ಡ ರೈತರು ಪಡೆದ ಸಾಲವನ್ನು ಮರಳಿ ಬ್ಯಾಂಕ್‌ಗೆ ಕಟ್ಟದೇ ಇರುವದರಿಂದ ಸಣ್ಣ ರೈತರಿಗೆ ಸಾಲ ಸಿಗದಂತಾಗಿದೆ. ಅನೇಕ ರೈತರು ಸಾಲವನ್ನು ಸಕಾಲದಲ್ಲಿ ಮರುಪಾವತಿಸಿದ್ರೂ ಕೂಡಾ ಇದೀಗ ಅವರಿಗೆ ಅವಶ್ಯಕತೆ ಇದ್ದಾಗ ಸಾಲ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ದಿವಾಳಿಯತ್ತ ಡಿಸಿಸಿ ಬ್ಯಾಂಕ್‌ ಮತ್ತೊಂದೆಡೆ ಬ್ಯಾಂಕ್‌ನ ಆರ್ಥಿಕ ಸ್ಥಿತಿ ಕೂಡಾ ದಿವಾಳಿ ಹಂತಕ್ಕೆ ತಲುಪಿದೆ. ಬ್ಯಾಂಕ್‌ನಲ್ಲಿ ನಡಿಯುತ್ತಿವೆ ಎನ್ನಲಾದ ಅವ್ಯವಹಾರಗಳಿಂದ ಈಗಾಗಲೇ ಬ್ಯಾಂಕ್ ನಷ್ಟದ ಹಾದಿಯಲ್ಲಿದ್ದು, ಸೂಪರ್ ಸೀಡ್ ಮಾಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ನಬಾರ್ಡ್‌ಗೆ ಸರ್ಕಾರ ಪತ್ರ ಬರೆದಿದ್ದು, ಬ್ಯಾಂಕ್‌ಗೆ ಆಡಳಿತಾಧಿಕಾರಿ ನೇಮಿಸಲು ಮುಂದಾಗಿದೆ. -ಸಂಜಯ್‌ ಚಿಕ್ಕಮಠ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada