
ಮಂಡ್ಯ: ಜಿಲ್ಲೆಯಲ್ಲಿ ಸಂಭವಿಸಬೇಕಿದ್ದ ಭಾರಿ ದುರಂತವೊಂದು ಆರೋಗ್ಯಾಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿದ್ದರಿಂದ ತಪ್ಪಿದೆ. ಅಧಿಕಾರಿಗಳು ಎಚ್ಚರ ವಹಿಸದೇ ಇದ್ದಿದ್ರೆ, ಗ್ರಾಮದ ಹಲವರು ಪ್ರಾಣ ಕಳೆದುಕೊಳ್ಳಬೇಕಿತ್ತು.
ಇದೇ ರೀತಿ ಕನಕಪುರ ಗ್ರಾಮದಲ್ಲಿ ನೆಲೆಸಿರೋ ವೈದ್ಯರೊಬ್ಬರು ಮಂಗಳವಾರ ಮಾರಮ್ಮನಿಗೆ ಪ್ರಭಾವಳಿಯನ್ನ ನೀಡಿದ್ರು. ಈ ವೇಳೆ ಗ್ರಾಮಸ್ಥರಿಗೆ ಪ್ರಸಾದವಾಗಿ ನೀಡಲು ಪುಳಿಯೋಗರೆ ಮಾಡಿಸಿದ್ರು. ಪ್ರಸಾದ ತಿಂದ ಜನ ತಮ್ಮ ತಮ್ಮ ಮನೆಗಳಿಗೆ ತೆರಳಿದ್ರು. ಆದ್ರೆ, ರಾತ್ರಿಯಾಗ್ತಿದ್ದಂತೆ ಕೆಲವರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ.
ಮಂಗಳವಾರ ರಾತ್ರಿ ಕೆಲವರು ಅಸ್ವಸ್ಥರಾಗಿ ಚಿಕಿತ್ಸೆ ಪಡೆದಿದ್ರೂ ಊರಲ್ಲಿ ಯಾವುದೇ ಆತಂಕ ಇರಲಿಲ್ಲ. ನಿನ್ನೆ ಬೆಳಗ್ಗೆ 15 ಜನರು ಒಟ್ಟಿಗೆ ವಾಂತಿ ಭೇದಿಯಾಗಿದೆ ಅಂತಾ ಒಟ್ಟಿಗೆ ಚಿಕಿತ್ಸೆ ಪಡೆದ ಕುರಿತು ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ತಕ್ಷಣ ಎಚ್ಚೆತ್ತ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಜನರಿಗೆ ಚಿಕಿತ್ಸೆ ನೀಡಿದ್ರು.
ಗ್ರಾಮದ 60 ಕ್ಕೂ ಹೆಚ್ಚು ಜನರು ವಾಂತಿ ಭೇದಿಯಿಂದ ಬಳಲುತ್ತಿದ್ದು ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ. ಗ್ರಾಮದ 3 ಮಕ್ಕಳು, ಇಬ್ಬರು ಮಹಿಳೆಯರು ಸೇರಿದಂತೆ 5 ಜನರನ್ನ ಹೆಚ್ಚಿನ ಚಿಕಿತ್ಸೆಗಾಗಿ ಮಳವಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಮರಾಜ ನಗರ ಜಿಲ್ಲೆಯ ಸುಳ್ವಾಡಿ ದುರಂತ ನಡೆದು ಇನ್ನೇನು 2 ವರ್ಷಗಳಾಗುತ್ತಿವೆ. ಇದೇ ಮಾದರಿಯಲ್ಲಿ ಮಂಡ್ಯದಲ್ಲಿ ನಡೆಯಲಿದ್ದ ದುರಂತ ತಪ್ಪಿದೆ. ಆರೋಗ್ಯಾಧಿಕಾರಿಗಳು ಗ್ರಾಮದಲ್ಲೇ ಮೊಕ್ಕಾಂ ಹೂಡಿದ್ದು ತೀವ್ರ ನಿಗಾ ವಹಿಸಿದ್ದಾರೆ. 2 ಸಾವಿರಕ್ಕೂ ಹೆಚ್ಚು ಜನರಿರುವ ಊರಿನ ಜನರು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.