ಜಿ. ಕೆ. ಗೋವಿಂದರಾವ್ ಅವರು ಕೊಡಗಿನ ಗೋಣಿಕೊಪ್ಪದಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿದ್ದರು. ಒಮ್ಮೆ ಬೆಂಗಳೂರಿಗೆ ಬಂದು ತುಘಲಕ್ ನಾಟಕ ಮಾಡಿದರು. ಆಗಲೇ ಅವರನ್ನು ನಾನು ನೋಡಿದ್ದು ಮತ್ತು ಪರಿಚಯ ಮಾಡಿಕೊಂಡಿದ್ದು. ಆಗ ಲಂಕೇಶ್ ಕೂಡ ಜೊತೆಗಿದ್ದರು, ನಾನು ವಿದ್ಯಾರ್ಥಿಯಾಗಿದ್ದೆ. ಇದೆಲ್ಲ 70ರ ದಶಕದ ಪೂರ್ವದಲ್ಲಿ ನಡೆದಿದ್ದು. ಆಗ ಟಿವಿ ಇನ್ನೂ ಪ್ರವೇಶಿಸಿರಲಿಲ್ಲ. ನಾಟಕವೇ ದೊಡ್ಡ ಪ್ರಪಂಚವಾಗಿತ್ತು ನಮಗೆಲ್ಲ. ಮಾಯಾಮೃಗ, ಮಗಳು ಜಾನಕಿ ಬಿಟ್ಟರೆ ಉಳಿದೆಲ್ಲ ನನ್ನ ಧಾರಾವಾಹಿಗಳಲ್ಲಿ ಅವರು ಅಭಿನಯಿಸಿದ್ಧಾರೆ. ಎತ್ತರದ ನಿಲುವು ಅಮರೀಶ್ ಪುರಿ ಎಂದು ನಾವೆಲ್ಲ ತಮಾಷೆ ಮಾಡುತ್ತಿದ್ದೆವು. ಅವರೊಬ್ಬ ಪ್ರತಿಭಾನ್ವಿತ, ಜ್ಞಾನಿ ಎನ್ನುವುದಕ್ಕಿಂತ ಹೃದಯವಂತ ಎನ್ನಬಹುದು. ಬಹಳ ಆಪ್ತ ಮನಸಿನವರು.
ಟಿ.ಎನ್. ಸೀತಾರಾಮ್, ನಿರ್ದೇಶಕ
ಲಂಕೇಶರ ಬಳಿ ನನಗೆ ಮನಸಿನ ಸಂಕಟ, ದುಃಖ ಹೇಳಿಕೊಳ್ಳೋದಕ್ಕೆ ಆಗುತ್ತಿರಲಿಲ್ಲ. ಆದರೆ ಅದೇ ಗೋವಿಂದರಾವ್ ಅವರೊಂದಿಗೆ ಎರಡು ನಿಮಿಷ ಮಾತನಾಡಿದರೆ ಬಹಳ ಸಮಾಧಾನ ಅನ್ನಿಸುತ್ತಿತ್ತು. ಯಾರೊಂದಿಗೂ ಅವರು ಅದೇ ಆಪ್ತಭಾವದಲ್ಲಿ ಒಡನಾಡುತ್ತಿದ್ದರು. ಬಹಳಷ್ಟು ಕಲಾವಿದರು ಅವರನ್ನು ಇಷ್ಟಪಡೋದಕ್ಕೆ ಇದೇ ಕಾರಣ. ಒಂದೆಡೆ ಸಣ್ಣ ಹುಡುಗನಂಥ ವ್ಯಕ್ತಿತ್ವ ಇನ್ನೊಂದೆಡೆ ತಾಯಿಹೃದಯ.
ನಮ್ಮ ಧಾರಾವಾಹಿಯ ಸಂವಾದಗಳು ಬೇರೆ ಬೇರೆ ಊರಿನಲ್ಲಿ ನಡೆಯುತ್ತಿದ್ದ ಆ ಸಮಯದಲ್ಲಿ ಅವರು ಎಲ್ಲೆಡೆಯೂ ಬಹಳ ಉತ್ಸಾಹದಿಂದ ಬರುತ್ತಿದ್ದರು. ಸಂವಾದವೆಂದರೆ ಅವರಿಗೆ ಬಹಳ ಇಷ್ಟ. ಒಮ್ಮೆ ಧಾರವಾಡಕ್ಕೆ ಅವರನ್ನು ಬಿಟ್ಟುಹೋಗಿಬಿಟ್ಟೆವು. ಅದೂ ಅವರ ಪ್ರೀತಿಯ ಧಾರವಾಡ! ಒಂದು ತಿಂಗಳ ಕಾಲ ನನ್ನೊಂದಿಗೆ ಅವರು ಮಾತನಾಡಲಿಲ್ಲ. ಶೂಟಿಂಗ್ ಸೆಟ್ನಲ್ಲಿದ್ದರೂ ಕೋಪವನ್ನು ಹಾಗೇ ಕಾಪಿಟ್ಟುಕೊಂಡು ನನ್ನನ್ನು ನೋಡುವ ನೋಟ ಇತ್ತಲ್ಲ, ಈಗಲೂ ಕಾಡುತ್ತದೆ. ಸುತ್ತಮುತ್ತ ಓಡಾಡುತ್ತಲೇ ನಾಟಕೀಯ ಧ್ವನಿಯಲ್ಲೇ ತಮ್ಮ ಮನಸಿನೊಳಗಿದ್ದ ಬೇಸರವನ್ನು ಹೊರಹಾಕುತ್ತ ನನ್ನನ್ನು ಕೆಣಕುವುದಿತ್ತಲ್ಲ, ಆ ಧ್ವನಿಯಿತ್ತಲ್ಲ… ಅದಿನ್ನೂ ಕಣ್ಣಮುಂದೆ ಹಾಗೇ ಇದೆ. ವಿಚಿತ್ರ ಕೋಪ, ಮನಸಿಗೆ ಇಷ್ಟವಾಗುವಂಥ ಜಗಳ.
ಲೂಯಿ ಫಿಷರ್ ಅವರು ಗಾಂಧೀಜಿ ಬಗ್ಗೆ ಬರೆದಿದ್ದನ್ನು ಓದಿದೀಯಾ? ಓದು ಎಂದು ಒಮ್ಮೆ ದುಂಬಾಲು ಬಿದ್ದರು. ಒಂದು ರಾತ್ರಿ ಆಟೋದಲ್ಲಿ ಬಂದು ನೀನಿದನ್ನು ಓದಲೇಬೇಕು ಎಂದು ಕೊಟ್ಟು ಹೊರಟುಹೋಗಿಬಿಟ್ಟರು. ತಮಗಿಷ್ಟವಾದದ್ದನ್ನು ಇತರರಿಗೂ ಓದಿಸಲೇಬೇಕು ಎಂಬ ಪ್ರೀತಿಯ ಒತ್ತಾಯ ಅವರಲ್ಲಿರುತ್ತಿತ್ತು. ತುಂಬಾ ಚೇಷ್ಟೆ ಮಾಡುವ ಹುಡುಗ ಸನ್ಯಾಸಿಯಾದರೆ ಹೇಗೋ, ಜ್ಞಾನಿಯಾದರೆ ಹೇಗೋ ಹಾಗಿತ್ತು ಅವರ ವ್ಯಕ್ತಿತ್ವ.
ತುಂಬಾ ಚೇಷ್ಟೆ ಮಾಡುವ ಹುಡುಗ ಸನ್ಯಾಸಿ ಯಾದರೆ ಹೇಗೋ ಜ್ಞಾನಿಯಾದರೆ ಹೇಗೋ ಹಾಗಿತ್ತು ಅವರ ವ್ಯಕ್ತಿತ್ವ.
ಇದನ್ನೂ ಓದಿ : G.K Govinda Rao: ಕನ್ನಡದ ಹಿರಿಯ ನಟ, ಚಿಂತಕ ಪ್ರೊ.ಜಿ.ಕೆ ಗೋವಿಂದ ರಾವ್ ನಿಧನ
Published On - 10:42 am, Fri, 15 October 21