ಬಾಗಲಕೋಟೆ: ಜೀವ ಇರುವಾಗಲೇ ಯುವಕನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದ ಮಹಾ ಎಡವಟ್ಟೊಂದು ಬಯಲಾಗಿದೆ. ಮಹಾಲಿಂಗಪುರ ಸರ್ಕಾರಿ ಆಸ್ಪತ್ರೆಯ ವೈದ್ಯರು ಮಹಾ ಎಡವಟ್ಟು ಮಾಡಿದ್ದಾರೆ. ಯುವಕನೋರ್ವ ಮೃತಪಟ್ಟಿದ್ದಾನೆಂದು ಭಾವಿಸಿ ಪೋಸ್ಟ್‌ಮಾರ್ಟಮ್‌ಗೆ ವೈದ್ಯರು ಸಿದ್ಧತೆ ಮಾಡಿಕೊಂಡಿದ್ದು ಯುವಕ ಬದುಕಿರುವುದು ಅರಿವಿಗೆ ಬಂದ ಮೇಲೆ ಆತನಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಕಳಿಸಿದ್ದಾರೆ. ಸದ್ಯ ಅದೃಷ್ಟವಶಾತ್ ಸ್ವಲ್ಪದರಲ್ಲೇ ಮತ್ತೊಂದು ಮಹಾ ಎಡವಟ್ಟು ತಪ್ಪಿದೆ.
ಫೆಬ್ರವರಿ 27 ರಂದು ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರದ ರಬಕವಿ ರಸ್ತೆಯಲ್ಲಿ ಶಂಕರ್ ಗೊಂಬಿ(27) ಎಂಬ ಯುವಕ ಬೈಕ್ ಅಪಘಾತದಲ್ಲಿ ತಲೆಗೆ ಏಟು ಬಿದ್ದು ತೀವ್ರ ಗಾಯಗೊಂಡಿದ್ದ. ಹೀಗಾಗಿ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯುವಕ ಬದುಕುವ ಸಾಧ್ಯತೆ ಕಡಿಮೆ ಎಂದು ವೆಂಟಿಲೇಟರ್ ಅಳವಡಿಸಿ ಆ್ಯಂಬುಲೆನ್ಸ್‌ನಲ್ಲಿ ಮಹಾಲಿಂಗಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕಳಿಸಿದ್ದರು. ಆದ್ರೆ ಯುವಕನ ಪರಿಸ್ಥಿತಿ ನೋಡಿ ಆತ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿತ್ತು. ಆದ್ರೂ ಮಹಾಲಿಂಗಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆಯಲ್ಲಿ ಮಹಾಲಿಂಗಪುರದ ಸರ್ಕಾರಿ ಆಸ್ಪತ್ರೆಯ ವೈದ್ಯರು ಕೂಡ ಯುವಕ ಮೃತಪಟ್ಟಿದ್ದಾಗಿ ತಿಳಿಸಿದ್ದರು. ಹೀಗಾಗಿ ಪೋಸ್ಟ್‌ಮಾರ್ಟಮ್ ಮಾಡಲು ಕಳುಹಿಸಲಾಗಿತ್ತು. ಈ ವೇಳೆ ಯುವಕನ ಭುಜ, ಕಾಲುಗಳು ಅಲುಗಾಡಿಸಿ, ಉಸಿರಾಡ್ತಿದ್ದ ಹಿನ್ನೆಲೆ ಜೀವಂತವಾಗಿದ್ದಾನೆಂದು ಹೇಳಿ ವಾಪಸ್ ಕಳಿಸಲಾಗಿದೆ. ಮತ್ತೆ ಆತನನ್ನು ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹರಿದಾಡಿದ್ವು ಗೆದ್ದು ಬಾ ಸ್ಟೇಟಸ್
ಇನ್ನು ಶಂಕರ್ ಸ್ನೇಹಿತರು ತನ್ನ ಆತ್ಮೀಯನ ಸಾವಿಗೆ ಶೋಕಾಚರಣೆ ಆರಂಭಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್ ಮಾಡಿ ಮಿಸ್ ಯು, ಗೆದ್ದು ಬಾ ಗೆಳೆಯ ಎಂದು ಬರೆದುಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಶಂಕರ್‌ಗೆ ಶ್ರದ್ಧಾಂಜಲಿ ಸಲ್ಲಿಸಲಾಗಿತ್ತು. ಮರಳಿ ಬಾರದೂರಿಗೆ ನಿನ್ನ ಪಯಣ ಎಂಬ ಹಾಡಿನ ಮೂಲಕ ಭಾವಚಿತ್ರಗಳನ್ನು ಹಾಕಿ ವಿಡಿಯೋ ಫೋಸ್ಟ್ ಮಾಡಿದ್ದರು. ಅದೃಷ್ಟವಶಾತ್ ಶಂಕರ್ ಶವಾಗಾರದಿಂದ ಪುನಃ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗೆಳೆಯ ಮೃತಪಟ್ಟಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸ್ನೇಹಿತರು ಪೋಸ್ಟ್, ಸ್ಟೇಟಸ್ ಡಿಲೀಟ್ ಮಾಡಿದ್ದಾರೆ.
ಇದನ್ನೂ ಓದಿ: ಕಾಲು ಜಾರಿ ಭದ್ರಾ ಕಾಲುವೆಗೆ ಬಿದ್ದ ಯುವಕ ಸಾವು: ಶವಕ್ಕಾಗಿ ಹುಡುಕಾಟ