
ಬಾಗಲಕೋಟೆ:ಅತ್ತೆ ಮನೆಯವರು ಆಸ್ತಿ ಮತ್ತು ವರದಕ್ಷಿಣೆ ನೀಡಿಲ್ಲವೆಂದು ಜಗಳ ತೆಗೆದ ಪತಿ ಮಹಾಶಯ ತನ್ನ ಹೆಂಡತಿ ಹಾಗೂ ಅತ್ತೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಲಿಂಗಾಪುರ ಗ್ರಾಮದ ರಂಜಿತಾ(22) ಹಾಗೂ ರೇಣವ್ವ(50) ಮೃತ ದುರ್ದೈವಿಗಳು. ವರ್ಷದ ಹಿಂದೆ ಮೃತ ರಂಜಿತಾಗೆ, ವಿಠ್ಠಲ ಎಂಬ ಯುವಕನೊಂದಿಗೆ ಮದುವೆಯಾಗಿತ್ತು. ಆದರೆ ಆಸ್ತಿ ವಿಚಾರವಾಗಿ ಪದೇಪದೇ ರಂಜಿತಾಳ ಜೊತೆ ವಿಠ್ಠಲ ಜಗಳ ತೆಗೆಯುತ್ತಿದ್ದ, ಇದರಿಂದ ರೋಸಿ ಹೋಗಿದ್ದ ರಂಜಿತ ವಾರದ ಹಿಂದೆ ಜಗಳವಾಡಿಕೊಂಡು ತವರಿಗೆ ವಾಪಾಸಾಗಿದ್ದಳು.
ಆದರೆ 2 ದಿನಗಳ ಹಿಂದೆ ತಾಯಿ ಜೊತೆ ಗಂಡನ ಮನೆಗೆ ವಾಪಸಾಗಿದ್ದ ರಂಜಿತಾ ಜೊತೆ, ಪತಿ ವಿಠ್ಠಲ ಪುನಃ ಜಗಳ ತೆಗೆದಿದ್ದಾನೆ. ವಿಕೋಪಕ್ಕೆ ತಿರುಗಿದ ಜಗಳದಲ್ಲಿ ವಿಠ್ಠಲ ಕೊಡಲಿಯಿಂದ ಕೊಚ್ಚಿ, ತನ್ನ ಪತ್ನಿ ಹಾಗೂ ಅತ್ತೆಯನ್ನು ಕೊಂದಿದ್ದಾನೆ ಎಂದು ಮೃತರ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಸದ್ಯ ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.