ಚಿಕ್ಕಮಗಳೂರು: ಕ್ವಾರಂಟಿನ್ ಸೆಂಟರ್ ಗಳ ಅವ್ಯವಸ್ಥೆಯಿಂದ ರೋಸಿ ಹೋಗಿರುವ ಕೊರೊನಾ ಸೋಂಕಿತರು, ನಮ್ಮನ್ನ ಇಲ್ಲಿ ಬಂಧಿಸಿಡುವ ಬದಲು ಜೈಲಿಗಾದರೂ ಹಾಕಿ. ಕೊನೆಯ ಪಕ್ಷ ಅಲ್ಲಿ ರಾಗಿಮುದ್ದೆ ತಿಂದ್ಕೊಂಡಾದ್ರೂ ಜೀವನ ನಡೆಸುತ್ತೇವೆ ಎಂದು ಜಿಲ್ಲಾಡಳಿತದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಹತ್ತು ಗಂಟೆಯಾದರೂ ಇಲ್ಲಿ ಕಾಫಿ ಹಾಗಿರಲಿ.. ಒಂದು ಗ್ಲಾಸ್ ಬಿಸಿ ನೀರು ಸಹ ಕೊಡುತ್ತಿಲ್ಲ. ಶೌಚಾಲಯಕ್ಕೆ ಹೋಗೋಣ ಎಂದರೆ ಶೌಚಾಲಯಗಳು ಸರಿಯಾದ ನಿರ್ವಹಣೆ ಇಲ್ಲದೆ ಗಬ್ಬು ನಾರುತ್ತಿವೆ. ಹೀಗಾಗಿ ಇದೇ ವ್ಯವಸ್ಥೆಯಲ್ಲಿ ಇದ್ದರೆ ನಾವು ಕೊರೊನಾವನ್ನು ನಮ್ಮ ಮನೆಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಸೋಂಕಿತರು ಭಯಭೀತರಾಗಿದ್ದಾರೆ.
ಜೊತೆಗೆ ನಮ್ಮಲ್ಲಿ ಯಾವುದೇ ರೋಗ ಲಕ್ಷಣಗಳು ಇಲ್ಲ. ಹಾಗಾಗಿ ನಮಗೆ ಕೊರೊನಾ ಟೆಸ್ಟ್ ಮಾಡಿಸಿ. ವರದಿಯಲ್ಲಿ ಪಾಸಿಟಿವ್ ಬಂದರೆ ನಮ್ಮನ್ನು ಇಲ್ಲೇ ಇರಿಸಿಕೊಳ್ಳಲ್ಲಿ, ಇಲ್ಲದಿದ್ದರೆ ನಮ್ಮನ್ನು ಮನೆಗೆ ಕಳುಹಿಸಿಕೊಡಲಿ ಎಂದು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ. ಜೊತೆಗೆ ನಮ್ಮ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ದೋಚಲು ಜಿಲ್ಲಾಡಳಿತ ಹೀಗೆ ನಮ್ಮನ್ನು ಕೂಡಿಹಾಕಿದೆ ಎಂದೂ ಜಿಲ್ಲಾಡಳಿತದ ಅಧಿಕಾರಿಗಳ ವಿರುದ್ಧ ಸೋಂಕಿತರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.