ಬಾಗಲಕೋಟೆ: ಉನ್ನತ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿಯೇ ನಕಲಿ ಫೇಸ್‌ಬುಕ್ ಖಾತೆ ತೆರೆದು, ದುಡ್ಡು ಎತ್ತುವ ಕುಕೃತ್ಯ ಎಸಗಿದರೆ ಏನು ಮಾಡೋದು!? ಇಂಥಹ ಕುಕೃತ್ಯದಿಂದ ಬಾಧೆಗೊಳಗಾಗಿರುವ ಬಾಗಲಕೋಟೆಯ ಡಿಸಿಆರ್‌ಬಿ ಡಿವೈಎಸ್‌ಪಿ ರವೀಂದ್ರ ಶಿರೂರ ಅವರು ಇದೀಗ ತಮ್ಮ ಸ್ನೇಹಿತರ ವಲಯಕ್ಕೆ ಫೋನ್ ಮಾಡಿ, ಹೀಗೀಗೆ ಯಾರೋ ಖದೀಮ ನನ್ನ ಹೆಸರಲ್ಲಿ ದುಡ್ಡು ಮಾಡೋ ಪ್ರೋಗ್ರಾಂ ಹಾಕಿಕೊಂಡಿದ್ದಾನೆ. ನೀವು ಯಾರೂ ಅವನ ಮಾತಿಗೆ ಬೆಲೆ ಕೊಟ್ಟು ದುಡ್ಡು ಹಾಕೋಕ್ಕೆ ಹೋಗಬೇಡಿ. ಶೀಘ್ರದಲ್ಲೇ ಈ ಖದೀಮನನ್ನು ಹಿಡಿಯುತ್ತೇವೆ ಎಂದು ಸ್ನೇಹಿತ ಬಳಗದಲ್ಲಿ ಒಬ್ಬೊಬ್ಬರಿಗೂ ಎಚ್ಚರಿಕೆ ಮಿಶ್ರಿತ ಮನವಿ ಮಾಡುತ್ತಿದ್ದಾರೆ.
ಹೌದು, ಜಿಲ್ಲೆಯ DCRB DYSP ರವೀಂದ್ರ ಶಿರೂರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಅಕೌಂಟ್ ಕಾರ್ಯಪ್ರವೃತ್ತವಾಗಿದೆ. ಫೇಸ್‌ಬುಕ್ ಮೆಸೇಜ್ ಮೂಲಕ ರವೀಂದ್ರ ಹೆಸರಲ್ಲಿ ಮನವಿ ಮಾಡಿಕೊಳ್ಳುತ್ತಿರುವ ಖದೀಮ, ತಕ್ಷಣ ಖಾತೆಗೆ ಹಣ ಹಾಕುವಂತೆ ರವೀಂದ್ರ ಸ್ನೇಹಿತರಿಗೆ ಮೆಸೇಜ್ ಹಾಕುತ್ತಿದ್ದಾನೆ. ಫೇಸ್ ಬುಕ್ ನಲ್ಲಿ ಇರುವ ಅಂದಾಜು 400 ಫ್ರೆಂಡ್ಸ್ ಗೆ ಮೆಸೇಜ್ ಹೋಗಿರುವ ಶಂಕೆ ವ್ಯಪ್ತಪಡಿಸಲಾಗಿದೆ. ತಕ್ಷಣ ಎಚ್ಚೆತ್ತ ಈ ಬಗ್ಗೆ ಡಿವೈಎಸ್‌ಪಿ ರವೀಂದ್ರ ಶಿರೂರ ಅವರು ಸ್ವತಃ ಸಿಇಆರ್‌ಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.