ದಯವಿಟ್ಟು ಖಾತೆ ಮಾಡಿಸಿ ಕೊಡಿ -ಪ್ರಧಾನಿ ಮೋದಿ ಮೊರೆಹೋದ ವೃದ್ಧ ದಂಪತಿ

|

Updated on: Nov 06, 2020 | 1:20 PM

ಮೈಸೂರು: ನಮ್ಮ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಾವೆಲ್ಲರೂ ಜನರಿಂದ, ಜನರಿಗಾಗಿ ಜನರಿಗೋಸ್ಕರ ಇರುವುದು ಎಂಬ ಮಾತನ್ನು ಮರೆತಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷಿ ಜಿಲ್ಲೆಯಲ್ಲಿ ನಡೆದ ಈ ಪ್ರಕರಣ. ಕಾನೂನಾತ್ಮಕವಾಗಿ ಎಲ್ಲವೂ ಕ್ರಮಬದ್ಧವಾಗಿದ್ದರೂ ಮನೆಯ ಖಾತೆ ಮಾಡಿಕೊಡಲು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರಂತೆ. ಇದರಿಂದ ಬೇಸತ್ತ ವೃದ್ಧ ದಂಪತಿಯೊಂದು ಇದೀಗ ಸಿಎಂ ಯಡಿಯೂರಪ್ಪ ಹಾಗೂ ಪ್ರಧಾನಿ ಮೋದಿ ಮೊರೆ ಹೋಗಿದ್ದಾರೆ. ಏನಿದು ಪ್ರಕರಣ? ಮೂಲತಃ ಮಹಾರಾಷ್ಟರದವರಾದ ಉದಯಶಂಕರ್ ಹಾಗೂ ಶ್ಯಾಮಲಾ ದಂಪತಿಗೆ ಸಾಂಸ್ಕೃತಿಕ ನಗರಿ ಮೈಸೂರು […]

ದಯವಿಟ್ಟು ಖಾತೆ ಮಾಡಿಸಿ ಕೊಡಿ -ಪ್ರಧಾನಿ ಮೋದಿ ಮೊರೆಹೋದ ವೃದ್ಧ ದಂಪತಿ
Follow us on

ಮೈಸೂರು: ನಮ್ಮ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಾವೆಲ್ಲರೂ ಜನರಿಂದ, ಜನರಿಗಾಗಿ ಜನರಿಗೋಸ್ಕರ ಇರುವುದು ಎಂಬ ಮಾತನ್ನು ಮರೆತಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷಿ ಜಿಲ್ಲೆಯಲ್ಲಿ ನಡೆದ ಈ ಪ್ರಕರಣ. ಕಾನೂನಾತ್ಮಕವಾಗಿ ಎಲ್ಲವೂ ಕ್ರಮಬದ್ಧವಾಗಿದ್ದರೂ ಮನೆಯ ಖಾತೆ ಮಾಡಿಕೊಡಲು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರಂತೆ. ಇದರಿಂದ ಬೇಸತ್ತ ವೃದ್ಧ ದಂಪತಿಯೊಂದು ಇದೀಗ ಸಿಎಂ ಯಡಿಯೂರಪ್ಪ ಹಾಗೂ ಪ್ರಧಾನಿ ಮೋದಿ ಮೊರೆ ಹೋಗಿದ್ದಾರೆ.
ಏನಿದು ಪ್ರಕರಣ?
ಮೂಲತಃ ಮಹಾರಾಷ್ಟರದವರಾದ ಉದಯಶಂಕರ್ ಹಾಗೂ ಶ್ಯಾಮಲಾ ದಂಪತಿಗೆ ಸಾಂಸ್ಕೃತಿಕ ನಗರಿ ಮೈಸೂರು ಅಂದರೆ ಪಂಚಪ್ರಾಣ. ಇಲ್ಲಿನ ಪರಿಸರ, ವಾತಾವರಣ, ಜನರನ್ನು ನೋಡಿದ ಮೇಲೆ ತಮ್ಮ ನಿವೃತ್ತ ಜೀವನ ಇಲ್ಲೇ ಕಳೆಯಬೇಕೆಂದು ಬಯಸಿದರು. ತಮ್ಮ ಆಸೆಯಂತೆ ಎರಡು ವರ್ಷದ ಹಿಂದೆ ನಗರದ ಹೃದಯಭಾಗದಲ್ಲಿರುವ ಬ್ರಿಗೇಡ್ ಹಿಲ್ ವ್ಯೂ ಅಪಾರ್ಟ್‌ಮೆಂಟ್‌ನಲ್ಲಿ 2018ರಲ್ಲಿ ಒಂದು ಫ್ಲ್ಯಾಟ್ ಖರೀದಿ ಮಾಡಿದರು. ಇಬ್ಬರಿಗೂ ತಮ್ಮ ಬಹಳ ದಿನಗಳ ಕನಸು ನನಸಾದ ಸಂಭ್ರಮ. ಆದರೆ ಆ ಸಂಭ್ರಮ, ಸಡಗರ ಹೆಚ್ಚು ಕಾಲ ಉಳಿಯಲಿಲ್ಲ. ಇವರ ಕನಸಿನ ಮೇಲೆ ತಣ್ಣೀರು ಎರಚಿದ್ದು ನಮ್ಮ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮನಸ್ಥಿತಿ.

ಖಾತೆ ಮಾಡಿಕೊಡಲು ಮೀನಾ ಮೇಷ
ಹೌದು, ಉದಯಶಂಕರ್ ಶ್ಯಾಮಲಾ ದಂಪತಿ ತಮ್ಮ ಕನಸಿನ ಗೂಡನ್ನು ಪಡೆದುಕೊಂಡರು. ಆದರೆ, ಗೂಡು ಮಾಡಿಕೊಂಡು ಎರಡು ವರ್ಷವಾದರೂ ಅದಕ್ಕೆ ಖಾತೆ ಮಾಡಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಮೈಸೂರು ಮಹಾನಗರ ಪಾಲಿಕೆ. ದಂಪತಿ ತಮ್ಮ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಕಾನೂನಾತ್ಮಕವಾಗಿ ಖಾತೆ ಮಾಡಿಕೊಡುವಂತೆ ಮೈಸೂರು ಮಹಾನಗರ ಪಾಲಿಕೆಗೆ ಮನವಿ ಮಾಡಿದ್ದಾರೆ. ಆದರೆ ಅಧಿಕಾರಿಗಳು ಇದುವರೆಗೂ ಖಾತೆ ಮಾಡಿಕೊಟ್ಟಿಲ್ಲ. ಈ ಬಗ್ಗೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಅವರ ಗಮನಕ್ಕೂ ದಂಪತಿ ಸಾಕಷ್ಟು ಬಾರಿ ತಂದಿದ್ದಾರೆ. ಆದರೂ ನೋ ಯೂಸ್​.

ಖಾತೆಗಾಗಿ ಸಿಎಂ, ಪ್ರಧಾನಿ ಮೊರೆ ಹೋದ ದಂಪತಿ
ಯಾವಾಗ ಪಾಲಿಕೆ ಆಯುಕ್ತರೇ ಖಾತೆ ಮಾಡಿಕೊಡಲು ಹಿಂದೇಟು ಹಾಕಿದರೋ ದಂಪತಿ ಇದು ಹೀಗೆ ಮುಂದುವರಿದರೆ ನಮಗೆ ಖಾತೆ ಸಿಗುವುದಿಲ್ಲ ಎಂದು ಅರಿತರು. ತಕ್ಷಣ ಅವರು ಸಿಎಂ ಯಡಿಯೂರಪ್ಪರ ಕಾರ್ಯದರ್ಶಿಗಳ ಗಮನಕ್ಕೆ ಈ ವಿಚಾರ ತಂದರು. ದುರದೃಷ್ಟವೆಂಬಂತೆ ಅದೂ ಕೂಡ ಪ್ರಯೋಜನವಾಗಲಿಲ್ಲ. ನಂತರ ಇವರು ಪ್ರಧಾನಿ ಮೋದಿ ಗಮನಕ್ಕೂ ಈ ವಿಚಾರವನ್ನು ತಂದಿದ್ದಾರೆ. ಆದರೂ ಉಪಯೋಗವಾಗಿಲ್ಲ. ಅಷ್ಟೇ ಅಲ್ಲ, ಈ ವಿಚಾರವಾಗಿ ಉದಯಶಂಕರ್, ಶ್ಯಾಮಲಾ ದಂಪತಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಕಂದಾಯ ಅಧಿಕಾರಿಗಳು ಸೇರಿ ಸಂಬಂಧಪಟ್ಟ ಎಲ್ಲರ ಗಮನಕ್ಕೂ ತಂದಿದ್ದಾರೆ. ಆದರೆ ಫಲಿತಾಂಶ ಮಾತ್ರ ಶೂನ್ಯ.

ಅಧಿಕಾರಿಗಳ ಭಂಡಾಟ, RTI ಕಾರ್ಯಕರ್ತನ ಕಾಟ
ಇದು ಕೇವಲ ಉದಯಶಂಕರ್, ಶ್ಯಾಮಲಾ ಒಬ್ಬರ ಸಮಸ್ಯೆಯಾಗಿರಲಿಲ್ಲ. ಇದು ಅವರು ವಾಸವಿದ್ದ ಬ್ರಿಗೇಡ್ ಅಪಾರ್ಟ್‌ಮೆಂಟ್‌ನ 200 ಫ್ಲ್ಯಾಟ್‌ನಲ್ಲಿ ವಾಸವಿರುವ ನಿವಾಸಿಗಳ ಸಮಸ್ಯೆಯಾಗಿದೆ. ಬ್ರಿಗೇಡ್ ಗ್ರೂಪ್ ಕಂಪನಿಯವರು ಪ್ರಾಜೆಕ್ಟ್ ಇದಾಗಿದ್ದು, ಸುಮಾರು 300 ಕೋಟಿ ವೆಚ್ಚದಲ್ಲಿ ಈ ಅಪಾರ್ಟ್‌ಮೆಂಟ್‌ ನಿರ್ಮಿಸಿದ್ದರು. ಪ್ರಾಜೆಕ್ಟ್ ಮಾಡುವ ಮುನ್ನ ಸರ್ಕಾರದ ಎಲ್ಲಾ ಅನುಮತಿಯನ್ನು ಪಡೆದುಕೊಂಡಿದ್ದರು. ಕಾನೂನಾತ್ಮಕವಾಗಿಯೇ ಅಪಾರ್ಟ್‌ಮೆಂಟ್ ಸಹ ಕಟ್ಟಿದ್ದರು. ಅದು ಎಷ್ಟರಮಟ್ಟಿಗೆ ಅಂದರೆ ಶೇಖಡಾ ಸೊನ್ನೆಯಷ್ಟು ನಿಯಮ ಉಲ್ಲಂಘನೆಯಾಗದಂತೆ ಎಚ್ಚರವಹಿಸಿ ಸಂಪೂರ್ಣ ಅಪಾರ್ಟ್‌ಮೆಂಟ್‌ ಕಾಮಗಾರಿ ಮುಗಿಸಲಾಗಿತ್ತು.

ಇದಾದ ನಂತರ ಮೈಸೂರು ಮಹಾನಗರ ಪಾಲಿಕೆಯಿಂದ ಸಿ.ಆರ್. ಸಹ ಪಡೆದಿದ್ದರು. ಸಿ.ಆರ್. ಪಡೆದಿದ್ದಾರೆ ಅಂದರೆ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಅಂತಲೇ ಅರ್ಥ. ಪರಿಸ್ಥಿತಿ ಈ ರೀತಿ ಇದ್ದಾಗ ಖಾತೆ ಮಾಡಿಕೊಳ್ಳುವುದಕ್ಕೆ ಯಾವುದೇ ಸಮಸ್ಯೆ ಇರಲಿಲ್ಲ. ಈ ಮಧ್ಯೆ ಖಾತೆ ಮಾಡಿಕೊಡದಿರಲು ಕಾರಣ ಒಬ್ಬ ಆರ್‌ಟಿ‌ಐ ಕಾರ್ಯಕರ್ತ ಅನ್ನೋ ಆರೋಪ ಸಹ ಕೇಳಿ ಬಂದಿದೆ. ಆತ ಬಿಲ್ಡರ್‌ನಿಂದ ಹಣ ಸುಲಿಗೆ ಮಾಡಲು ಸಂಚು ಮಾಡಿದ್ದಾನೆ ಎಂದು ಹೇಳಲಾಗಿದೆ. ಇದಕ್ಕೆ ಕೆಲವು ಪಾಲಿಕೆ ಅಧಿಕಾರಿಗಳು ಸಾಥ್ ನೀಡಿದ್ದಾರಂತೆ. ಇದೇ ಕಾರಣಕ್ಕೆ ಖಾತೆ ಮಾಡಿಕೊಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂಬುವುದು ಪ್ರಮುಖ ಆರೋಪ. ಇದಕ್ಕೆ ಪೂರಕವೆಂಬಂತೆ ಅಧಿಕಾರಿಗಳು ಸಹ ಅಪಾರ್ಟ್‌ಮೆಂಟ್ ವಿಚಾರವಾಗಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಸದ್ಯ ಆ ಆರ್‌ಟಿ‌ಐ ಕಾರ್ಯಕರ್ತ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಿದ ಬ್ರಿಗೇಡ್ ಸಂಸ್ಥೆ ಸಿಂಗಲ್ ಬಡಾವಣೆ ಅನುಮತಿ‌ ಪಡೆದಿಲ್ಲ ಎಂದು ಲೋಕಾಯುಕ್ತಗೆ ದೂರು ನೀಡಿದ್ದಾನೆ. ಇದೇ ನೆಪ ಮಾಡಿಕೊಂಡು ಕಾನೂನು ಸಲಹೆ, ತಜ್ಞರ ವರದಿ, ಮುಡಾ ವರದಿ ಅಂತಾ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ.

‘ಇದು ಕೇವಲ‌ ನಮಗೆ ಖಾತೆ ಮಾಡಿಕೊಡುವ ಪ್ರಶ್ನೆಯಲ್ಲ’
ಇದು ಕೇವಲ‌ ನಮಗೆ ಖಾತೆ ಮಾಡಿಕೊಡುವ ಪ್ರಶ್ನೆಯಲ್ಲ. ಇದು ಅಧಿಕಾರಿಗಳ ಇಚ್ಛಾಸಕ್ತಿ, ಜನಪ್ರತಿನಿಧಿಗಳು ಜನರ ಮೇಲಿನ ಕಾಳಜಿಯ ಪ್ರಶ್ನೆ. ಹೀಗಾಗಿ, ನಾವು ಈ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಅಗತ್ಯ ಬಿದ್ದರೆ ನಾವು ಎಲ್ಲಾ ಅಪಾರ್ಟ್‌ಮೆಂಟ್ ನಿವಾಸಿಗಳು 500ಕ್ಕೂ ಹೆಚ್ಚು ಜನ ಹಿರಿಯ ನಾಗರೀಕರು ಒಳಗೊಂಡಂತೆ ಎಲ್ಲರೂ ಮೈಸೂರು ಮಹಾನಗರ ಪಾಲಿಕೆಯ ಮುಂಭಾಗ ಧರಣಿ ಕೂರುವುದಕ್ಕು ಸಿದ್ಧರಾಗಿದ್ದೇವೆ ಎಂದು ಸಂತ್ರಸ್ತ ಉದಯ​ಶಂಕರ್​ ಹೇಳಿದ್ದಾರೆ.

‘ಅಪಾರ್ಟ್‌ಮೆಂಟ್ ವಿಚಾರವಾಗಿ ಕೆಲ ದೂರುಗಳು ಬಂದಿದ್ದವು’
ಇತ್ತ, ಪಾಲಿಕೆ ಆಯುಕ್ತ ಈ ಕುರಿತು ಪ್ರತಿಕ್ರಿಯಿಸಿದ್ದು ಬ್ರಿಗೇಡ್ ಅಪಾರ್ಟ್‌ಮೆಂಟ್ ವಿಚಾರವಾಗಿ ಕೆಲ ದೂರುಗಳು ಬಂದಿದ್ದವು. ಲೋಕಾಯುಕ್ತದಲ್ಲಿ ಪ್ರಕರಣ ಸಹಾ ದಾಖಲಾಗಿತ್ತು. ಹೀಗಾಗಿ ಈ ಸಂಬಂಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸ್ಪಷ್ಟನೆ ಕೇಳಿ ಪತ್ರ ಬರೆದಿದ್ದೇವೆ. ಕಾನೂನು ತಜ್ಞರ ಸಮಿತಿಯ ಅಭಿಪ್ರಾಯ ಸಹಾ ಕೇಳಲಾಗಿದೆ. ಇನ್ನು 10 ರಿಂದ 15 ದಿನದೊಳಗೆ ಕಾನೂನು ತಜ್ಞರ ವರದಿ ಬರುವ ಸಾಧ್ಯತೆ ಇದೆ. ವರದಿಯನ್ನು ಆಧಾರಿಸಿ ನಾವು ಕ್ರಮಕೈಗೊಳ್ಳುತ್ತೇವೆ.

ಇದು ಒಂದು ಅಪಾರ್ಟ್‌ಮೆಂಟ್ ಖಾತೆಯ ಕಥೆ. ಇದೆಲ್ಲಾ ನೋಡಿದರೆ ವಿನಾಕಾರಣ ಖಾತೆ ಮಾಡಿಕೊಡದೆ ಕಾಲಹರಣ ಮಾಡಲಾಗುತ್ತಿದ್ಯಾ ಅನ್ನೋ ಅನುಮಾನವಂತೂ ಮೂಡುತ್ತದೆ. ಇದೆಲ್ಲಾ ಏನೇ ಇರಲಿ ಅಧಿಕಾರಿಗಳಿರುವುದು ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಲು. ಆದರೆ, ಇಲ್ಲಿ ಅಧಿಕಾರಿಗಳೇ ಜನರಿಗೆ ತೊಂದರೆ ಕೊಡುವ ಕೆಲಸ‌ ಮಾಡುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿರುವುದು ದುರಂತವೇ ಸರಿ. ಇನ್ನಾದರೂ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸಯವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ.