ಕ್ರಿಸ್‌ಮಸ್‌ನ ಮಾರನೇ ದಿನ, ಅಂದರೆ ಡಿ.26ರಂದು ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಕೆನಡಾ ಸೇರಿದಂತೆ ಅನೇಕ ಕಾಮನ್‌ವೆಲ್ತ್ ರಾಷ್ಟ್ರಗಳಲ್ಲಿ ಪ್ರತಿವರ್ಷ ಬಾಕ್ಸಿಂಗ್ ಡೇ (ಉಡುಗೊರೆ ದಿನ) ಆಚರಿಸಲಾಗುತ್ತವೆ. ಅದೇ ದಿನ ಆಸ್ಟ್ರೇಲಿಯಾದಲ್ಲಿ ಸಾಮಾನ್ಯವಾಗಿ ಒಂದು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯವೂ ನಡೆಯುತ್ತದೆ. ಈ ಪಂದ್ಯಕ್ಕೆ ‘ಬಾಕ್ಸಿಂಗ್ ಡೇ ಟೆಸ್ಟ್’ ಎನ್ನುವುದು ಅನ್ವರ್ಥವಾಗಿ ಬಂದಿದೆ.
ಕ್ರಿಸ್ಮಸ್ ದಿನದಂದು ಚರ್ಚ್ನಲ್ಲಿ ಕೆಲಸ ಮಾಡಿದವರಿಗೆ ಮಾರನೇ ದಿನ ಉಡುಗೊರೆ ಕೊಡಲಾಗುತ್ತದೆ. ಚರ್ಚ್ನಲ್ಲಿ ಇರಿಸಿದ್ದ ಕಾಣಿಕೆ ಪೆಟ್ಟಿಗೆಯನ್ನು ತೆರೆದು, ಅದರಲ್ಲಿ ಸಂಗ್ರಹವಾಗಿರುವ ಹಣವನ್ನು ಉಡುಗೊರೆಗೆ ಬಳಸಲಾಗುತ್ತದೆ. ಹೀಗಾಗಿಯೇ ಇದು ಖುಷಿ ಹೆಚ್ಚಿಸುವ ದಿನವೂ ಹೌದು.
ಡಿ.26ರ ಇನ್ನೊಂದು ವಿಶೇಷವೆಂದರೆ ಅಂದು ಸಂತ ಸ್ಟೀಫನ್ ಹುತಾತ್ಮರಾದ ದಿನ. ಸಂತ ಸ್ಟೀಫನ್ ಸ್ಮರಣಾರ್ಥ ಹಲವು ದೇಶಗಳಲ್ಲಿ ಕ್ರೀಡಾಕೂಟಗಳನ್ನು ನಡೆಸಲಾಗುತ್ತದೆ. ದಕ್ಷಿಣ ಗೋಳಾರ್ಧದಲ್ಲಿ ಬರುವ ಕಾಮನ್‌ವೆಲ್ತ್ ರಾಷ್ಟ್ರಗಳಲ್ಲಿ ಡಿಸೆಂಬರ್, ಜನವರಿ ಮತ್ತು ಫೆಬ್ರವರಿಯ ಬೇಸಿಗೆ. ಕ್ರೀಡಾಕೂಟಗಳನ್ನು ಹೆಚ್ಚಾಗಿ ನಡೆಸಲು ಪೂರಕ ಹವಾಮಾನವೂ ಒಂದು ರೀತಿಯ ಕಾರಣ.
ಇದನ್ನೂ ಓದಿ: ಈ ಸೋಲು ಸುಲಭಕ್ಕೆ ಮರೆತು ಹೋಗುವಂಥದಲ್ಲ!
ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಭಾರತ
ಪ್ರತಿ ವರ್ಷ ಡಿಸೆಂಬರ್ 26 ರಿಂದ 30ರವರೆಗೆ ಆಸ್ಟ್ರೇಲಿಯಾದಲ್ಲಿನ ವಿಶ್ವವಿಖ್ಯಾತ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ಬಾಕ್ಸಿಂಗ್ ಡೇ ಟೆಸ್ಟ್ ನಡೆಯುತ್ತದೆ. ಆಸ್ಟ್ರೇಲಿಯಾ ತಂಡದ ಜೊತೆಗೆ ನಡೆಯುವ ಈ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಯಾವುದೇ ಮತ್ತೊಂದು ತಂಡವು ಪಾಲ್ಗೊಳ್ಳುತ್ತದೆ.
1950ರಲ್ಲಿ ಮೊದಲ ಬಾಕ್ಸಿಂಗ್ ಡೇ ಪಂದ್ಯವು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆಯಿತು. ಭಾರತವು ಕ್ರಮವಾಗಿ 1985, 1991, 1999, 2003, 2007, 2011, 2014, ಮತ್ತು 2018ರಲ್ಲಿ ಆಸ್ಟ್ರೇಲಿಯಾದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳನ್ನು ಆಡಿದೆ. ಭಾರತ ತಂಡ ಈ ಬಾರಿಯೂ ಆಸ್ಟ್ರೇಲಿಯಾದ ಪ್ರವಾಸದಲ್ಲಿದ್ದು, 2020ರ ಬಾಕ್ಸಿಂಗ್ ದಿನದ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸುತ್ತಿದೆ.
ಇದಲ್ಲದೇ ಬಾಕ್ಸಿಂಗ್ ದಿನದ ಟೆಸ್ಟ್ ಪಂದ್ಯಗಳು ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿಯೂ ನಡೆಯುತ್ತದೆ. ಕಳೆದ ವರ್ಷ ನ್ಯೂಜಿಲ್ಯಾಂಡ್ ಆಸ್ಟ್ರೇಲಿಯಾದಲ್ಲಿ ನಡೆದ ಪಂದ್ಯದಲ್ಲಿ ಭಾಗಿಯಾಗಿದ್ದು, ಆಸ್ಟ್ರೇಲಿಯಾ ತಂಡವನ್ನು ಎದುರಿಸಿತ್ತು. ಇನ್ನು ದಕ್ಷಿಣ ಆಫ್ರಿಕಾ ತಂಡವು ಸೆಂಚುರಿಯನ್‌ನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಆಟವಾಡಿತ್ತು.
ಇದನ್ನೂ ಓದಿ: ಗುಡಿಸಿ ಗುಂಡಾತರವಾಯ್ತು ಭಾರತದ ಬ್ಯಾಟಿಂಗ್.. ತಂಡಕ್ಕೆ ಮತ್ತೊಂದು ಆಘಾತ!
ದಾಖಲೆ ಬರೆದ ವೀಕ್ಷಕರ ಸಂಖ್ಯೆ
ಉಭಯ ರಾಷ್ಟ್ರಗಳ ನಡುವೆ ನಡೆಯುವ ಈ ಪಂದ್ಯವನ್ನು ವಿಕ್ಷಿಸಲು ಸಾಕಷ್ಟು ಜನರು ಸೇರುತ್ತಾರೆ. ಇದು ದೇಶದಲ್ಲಿ ನಡೆಯುವ ಅತಿದೊಡ್ಡ ಪಂದ್ಯಾವಳಿಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆಯನ್ನು ಹೊಂದಿದೆ. 2019ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯಾವಳಿಯನ್ನು ವಿಕ್ಷಿಸಲು 80,000ಕ್ಕೂ ಹೆಚ್ಚು ಅಭಿಮಾನಿಗಳು ಆಗಮಿಸಿದ್ದರು. 2013ರಲ್ಲಿ 91,112 ಮಂದಿ ಈ ಪಂದ್ಯವನ್ನು ವೀಕ್ಷಿಸಿದ್ದರು. ಇದೊಂದು ದಾಖಲೆಯಾಗಿಯೇ ಉಳಿದಿದೆ.
ಈ ಬಾರಿಯ ಬಾಕ್ಸಿಂಗ್ ಡೇ ಪಂದ್ಯಾವಳಿ ಆಸ್ಟ್ರೇಲಿಯಾ ಮತ್ತು ಭಾರತ ದೇಶಗಳ ನಡುವೆ ನಡೆಯಲಿದೆ. ಪ್ರತಿ ವರ್ಷ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ನೋಡಲು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ 25,000 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತಿತ್ತು. ಆದರೆ ಈ ಬಾರಿ 30,000 ಜನರ ವೀಕ್ಷಣೆಗೆ ಈ ಮೈದಾನ ಅವಕಾಶ ಮಾಡಿಕೊಡುತ್ತಿದೆ.
Published On - 3:12 pm, Thu, 24 December 20