ಕಾಂಥಿ ಯಾರ ಕುಟುಂಬದ ಆಸ್ತಿಯೂ ಅಲ್ಲ: ಸುವೇಂದು ಅಧಿಕಾರಿ ವಿರುದ್ಧ ಟಿಎಂಸಿ ಕಿಡಿ
ಸುವೇಂದು ಅಧಿಕಾರಿಯ ಊರಲ್ಲಿ ಬುಧವಾರ ಪಾದಯಾತ್ರೆ ಮತ್ತು ಬೃಹತ್ ರ‍್ಯಾಲಿ ಹಮ್ಮಿಕೊಂಡಿತ್ತು. ಈ ರ‍್ಯಾಲಿಯಲ್ಲಿ ಮಾತನಾಡಿದ ಟಿಎಂಸಿ ಸಂಸದ ಸೌಗತ ರಾಯ್ ಕಾಂಥಿ ಯಾರೊಬ್ಬರ ಆಸ್ತಿ ಅಲ್ಲ ಎಂಬುದನ್ನು ಅಲ್ಲಿ ಸೇರಿದ್ದ ಜನರು ಸಾಬೀತು ಮಾಡಿದ್ದಾರೆ. ಯಾರು ಟಿಎಂಸಿ ತೊರೆದರೂ ನಮಗದು ವಿಷಯವಲ್ಲ ಎಂದಿದ್ದಾರೆ.
ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದ ಸುವೇಂದು ಅಧಿಕಾರಿಯ ಕುಟುಂಬ ವಾಸಿಸುತ್ತಿರುವ ಪೂರ್ವ ಮೇಧಿನಿಪುರ್ನ ಕಾಂಥಿಯಲ್ಲಿ ತೃಣಮೂಲ ಕಾಂಗ್ರೆಸ್ ಬುಧವಾರ ಪಾದಯಾತ್ರೆ ಮತ್ತು ಬೃಹತ್ ರ‍್ಯಾಲಿ ಹಮ್ಮಿಕೊಂಡಿತ್ತು. ಈ ಬಗ್ಗೆ ಮಾತನಾಡಿದ ಟಿಎಂಸಿ ಸಂಸದ ಸೌಗತ ರಾಯ್, ಕಾಂಥಿ ಯಾರೊಬ್ಬರ ಆಸ್ತಿ ಅಲ್ಲ ಎಂಬುದನ್ನು ಅಲ್ಲಿ ಸೇರಿದ್ದ ಜನರು ಸಾಬೀತು ಮಾಡಿದ್ದಾರೆ. ಯಾರು ಟಿಎಂಸಿ ತೊರೆದರೂ ನಮಗದು ದೊಡ್ಡ ವಿಷಯವಲ್ಲ ಎಂದಿದ್ದಾರೆ.
ಕೆಲವು ವರದಿಗಳ ಪ್ರಕಾರ ರ‍್ಯಾಲಿಯಲ್ಲಿ ಭಾಗವಹಿಸಿದವರು ಸುವೇಂದು ಅಧಿಕಾರಿಯ ಮನೆ ಮುಂದೆ ತಲುಪಿದಾಗ ಮೀರ್ ಜಾಫರ್, ಮೋಸಗಾರ ಎಂದು ಕೂಗಿದ್ದಾರೆ.
ರ‍್ಯಾಲಿಯಲ್ಲಿ ಭಾಷಣ ಮಾಡಿದ ರಾಜ್ಯ ನಗರಾಭಿವೃದ್ಧಿ ಸಚಿವ ಫಿರ್ಹಾದ್ ಹಕೀಂ, ಸುವೇಂದು ಅಧಿಕಾರಿ ವಿರುದ್ಧ ಕಿಡಿ ಕಾರಿದ್ದಾರೆ. ‘ತನ್ನ ಎಲ್ಲ ಕೆಟ್ಟ ಕಾರ್ಯಗಳಿಂದ ತಪ್ಪಿಸಿಕೊಳ್ಳಲು ಸುವೇಂದು ಬಿಜೆಪಿ ಸೇರಿದ್ದಾರೆ. ನೀವು ಸ್ವಜನಪಕ್ಷಪಾತದ ಬಗ್ಗೆ ಮಾತನಾಡುತ್ತಿದ್ದೀರಿ. ನಿಮ್ಮ ಅಪ್ಪ ಸಿಸಿರ್ ಅಧಿಕಾರಿ ಅಲ್ಲದೇ ಇದ್ದರೆ ನೀವು ಸುವೇಂದು ಅಧಿಕಾರಿ ಆಗಿರುತ್ತಿದ್ದಿರಾ? ನೀವು ಕೋಮುವಾದಿ ಪಕ್ಷಗಳೊಂದಿಗೆ ಸೇರಿದ್ದೀರಿ. ಮೇದಿನಿಪುರ್ನ ಜನರು ಇದಕ್ಕೆ ಉತ್ತರ ನೀಡುತ್ತಾರೆ’ ಎಂದಿದ್ದಾರೆ.
ಕಾಂಥಿ ಸಮೀಪದ ರಾಮ್ನಗರದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಮಂಗಳವಾರ ಬಿಜೆಪಿ ರ‍್ಯಾಲಿ ಆಯೋಜಿಸಿತ್ತು. ರ‍್ಯಾಲಿ ಆರಂಭವಾಗುವ ಮುನ್ನ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ನಡೆದ ಸಂಘರ್ಷದಲ್ಲಿ ಮೂವರಿಗೆ ಗಾಯಗಳಾಗಿವೆ. ಬಿಜೆಪಿ ಕಾರ್ಯಕರ್ತರು ಟಿಎಂಸಿ ಪಕ್ಷದ ಕಚೇರಿಯನ್ನು ಹಾದುಹೋಗುತ್ತಿದ್ದಾಗ ಸಂಘರ್ಷವುಂಟಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಗಲಭೆಗೆ ಕಾರಣ ಟಿಎಂಸಿ ಎಂದು ಬಿಜೆಪಿ ಆರೋಪಿಸಿದರೆ, ಬಿಜೆಪಿ ಕಾರ್ಯಕರ್ತರೇ ಕಾರಣ ಎಂದು ಟಿಎಂಸಿ ದೂರಿದೆ. ಬಿಜೆಪಿ ಕಾರ್ಯಕರ್ತರು ನಮ್ಮ ಕಚೇರಿ ಮೇಲೆ ದಾಂಧಲೆ ನಡೆಸಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಆದರೆ ಯಾವುದೇ ಪ್ರಚೋದನೆ ಇಲ್ಲದೆ ಟಿಎಂಸಿ ಕಾರ್ಯಕರ್ತರು ನಮ್ಮ ಮೇಲೆ ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಹೇಳಿದೆ.
ಮೊದಲ ಬಾರಿ ಬಿಜೆಪಿ ರ‍್ಯಾಲಿಯಲ್ಲಿ ಮಾತನಾಡಿದ ಸುವೇಂದು, ನಾನು ವಿಶ್ವಾಸಘಾತುಕ ಅಥವಾ ಮೀರ್ ಜಾಫರ್ ಅಲ್ಲ. ಟಿಎಂಸಿ ಒಂದು ಕಂಪನಿಯಾಗಿ ಬದಲಾಗಿದೆ. ಸ್ವಾಭಿಮಾನ ಇರುವ ಯಾವುದೇ ವ್ಯಕ್ತಿ ಟಿಎಂಸಿಯಲ್ಲಿ ಇರಲಾರ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಟಿಎಂಸಿಗೆ ಆಸರೆ ನೀಡದೇ ಇರುತ್ತಿದ್ದರೆ 2001ಕ್ಕೆ ಮುನ್ನವೇ ಪಕ್ಷ ಹೇಳಹೆಸರಿಲ್ಲದಾಗಿ ಹೋಗುತ್ತಿತ್ತು ಎಂದಿದ್ದಾರೆ. ನಾವು ಗೆದ್ದು ಹೊಸ ಬಂಗಾಳವನ್ನು ರೂಪಿಸುತ್ತೇವೆ. ನಮಗೆ ಬದಲಾವಣೆ ಬೇಕು ಎಂದಿದ್ದಾರೆ ಸುವೇಂದು.
ಟಿಎಂಸಿ ತೊರೆದ ಸುವೇಂದು ಅಧಿಕಾರಿಗೆ Z ಶ್ರೇಣಿಯ ಭದ್ರತೆ ನೀಡಲು ಕೇಂದ್ರ ಸರ್ಕಾರದ ನಿರ್ಧಾರ