ಹುಬ್ಬಳ್ಳಿ: ಮಹದಾಯಿ ಕಾಮಗಾರಿ ವಿಳಂಬ ಹಿನ್ನೆಲೆಯಲ್ಲಿ ಮಹದಾಯಿ ಹೋರಾಟಗಾರರಿಂದ ಬೆಂಗಳೂರು ಚಲೋ ನಡೆಸಲು ನಿರ್ಧರಿಸಲಾಗಿದೆ ಎಂದು ಮಹದಾಯಿ ಹೋರಾಟಗಾರ ವೀರೇಶ್ ಸೊಬರದಮಠ ತಿಳಿಸಿದ್ದಾರೆ. ಮಹದಾಯಿ ಹೋರಾಟದ ಕಿಚ್ಚು ಮತ್ತೆ ಹೊತ್ತಿಕೊಳ್ಳುವಂತೆ ಕಾಣುತ್ತಿದೆ. ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಹೋರಾಟಗಾರರು ಸಿದ್ಧರಾಗಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ವೀರೇಶ್ ಸೊಬರದಮಠ “ತುಮಕೂರಿನ ಸಿದ್ಧಗಂಗಾ ಮಠದಿಂದ ರೈತರ ಪಾದಯಾತ್ರೆಗೆ ಚಿಂತನೆ ನಡೆಸಿದ್ದೇವೆ. ಚಕ್ಕಡಿ, ಟ್ರ್ಯಾಕ್ಟರ್ಗಳ ಮೂಲಕ ಬೆಂಗಳೂರು ಚಲೋ ನಡೆಸಲಿದ್ದೇವೆ. 4 ಜಿಲ್ಲೆಯ ರೈತರಿಂದ ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಯುತ್ತೆ. ಜೀವ ಹೋದರೂ ಸರಿ ಕಾಮಗಾರಿ ಆರಂಭವಾಗುವವರೆಗೆ ಬೆಂಗಳೂರು ಬಿಟ್ಟು ಕದಲುವುದಿಲ್ಲ” ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಚಲೋ ಹಿನ್ನೆಲೆಯಲ್ಲಿ ನರಗುಂದದಲ್ಲಿ ಶೀಘ್ರದಲ್ಲೇ ಸಾವಿರಾರು ರೈತರೊಂದಿಗೆ ಸಭೆ ನಡೆಸಲು ಚಿಂತನೆ ನಡೆಸಲಾಗುತ್ತಿದೆ. ಬೆಂಗಳೂರಿನಿಂದ ಈ ಸಲ ಬರಿಗೈಯಲ್ಲಿ ಮರಳಿ ಬರುವುದಿಲ್ಲ. ಗೋವಾ ಪದೇ ಪದೇ ಕ್ಯಾತೆ ತೆಗೆಯುತ್ತಿದೆ. ಗೋವಾ ತನ್ನ ಹೋರಾಟವನ್ನು ಮಾಡುತ್ತಿದೆ. ರಾಜ್ಯದ ರಾಜಕಾರಣಿಗಳು ಮಹದಾಯಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. 500 ಕೋಟಿ ಮೀಸಲಿಟ್ಟರೂ ಟೆಂಡರ್ ಕರೆಯುತ್ತಿಲ್ಲವೆಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.