
ಹಾವೇರಿ: ಹಾವೇರಿ ಜಿಲ್ಲೆಯಲ್ಲೀಗ ಎಲ್ಲೆಲ್ಲೂ ಯೂರಿಯಾ ಗೊಬ್ಬರ ಕೊರತೆ ಕಾಡುತ್ತಿದೆ. ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮ ಆರಂಭ ಕಂಡಿದೆ. ಬೆಳೆ ಕೂಡ ಉತ್ತಮವಾಗಿಯೇ ಬೆಳೆಯುತ್ತಿವೆ. ಕಳೆದ ಕೆಲವು ದಿನಗಳಿಂದ ಹದ ಮಳೆ ಆಗುತ್ತಿರುವುದರಿಂದ ಬಹುತೇಕ ರೈತರು ಬೆಳೆಗಳಿಗೆ ಯೂರಿಯಾ ಗೊಬ್ಬರ ಹಾಕುತ್ತಿದ್ದಾರೆ. ಜಿಲ್ಲೆಯ ಬ್ಯಾಡಗಿ, ಹಾವೇರಿ, ರಾಣೆಬೆನ್ನೂರು, ಹಿರೇಕೆರೂರು ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಯೂರಿಯಾ ಗೊಬ್ಬರದ ಕೊರತೆ ಕಾಡುತ್ತಿದೆ. ರೈತರು ಗೊಬ್ಬರಕ್ಕಾಗಿ ಕಾದು ಕಾದು ಗೊಬ್ಬರ ಸಿಗದೆ ಬರಿಗೈಯಲ್ಲಿ ಮನೆಗೆ ವಾಪಸ್ ಆಗುತ್ತಿದ್ದಾರೆ.
ಟವೆಲ್ ಪಾಳೆಗೆ ಇಟ್ಟ ರೈತರು..
ಬೆಳ್ಳಂಬೆಳಿಗ್ಗೆಯೇ ಯೂರಿಯಾ ಗೊಬ್ಬರಕ್ಕಾಗಿ ಸಹಕಾರಿ ಸಂಘಗಳ ಕಚೇರಿಗಳ ಮುಂದೆ ಟವೆಲ್‌ಗಳನ್ನು ರೈತರು ತಮ್ಮ ತಮ್ಮ ಹೆಸರಿನಲ್ಲಿ ಕ್ಯೂನಲ್ಲಿ ಹಚ್ಚಿ ಹೋಗುತ್ತಿದ್ದಾರೆ. ರೈತರು ಕ್ಯೂನಲ್ಲಿ ಇಟ್ಟ ಟವೆಲ್ ಪಾಳೆ ಬರುತ್ತಿದ್ದಂತೆ ರೈತರು ಯೂರಿಯಾ ಗೊಬ್ಬರ ಪಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಅನೇಕ ಕಡೆಗಳಲ್ಲಿ ಯೂರಿಯಾ ಗೊಬ್ಬರ ಸಿಗದೆ ರೈತರು ಪರದಾಡುತ್ತಿದ್ದಾರೆ. ಸಧ್ಯದ ಪರಿಸ್ಥಿತಿಯಲ್ಲಿ ರೈತರು ಬೆಳೆಗಳಿಗೆ ಯೂರಿಯಾ ಗೊಬ್ಬರವನ್ನು ಹಾಕುತ್ತಿದ್ದಾರೆ. ಯೂರಿಯಾ ಗೊಬ್ಬರಕ್ಕೆ ಪ್ರತಿಯೊಬ್ಬ ರೈತರು ಕಾದು ಕುಳಿತಿದ್ದಾರೆ. ಆದರೆ ರೈತರಿಗೆ ಬೇಕಾದಷ್ಟು ಪ್ರಮಾಣದಲ್ಲಿ ಯುರಿಯಾ ಗೊಬ್ಬರ ಸಿಗುತ್ತಿಲ್ಲ.
ಕೃಷಿ ಇಲಾಖೆ ಅಧಿಕಾರಿಗಳು ಯೂರಿಯಾ ಗೊಬ್ಬರದ ಕೊರತೆ ಇಲ್ಲ ಎನ್ನುತ್ತಿದ್ದರೂ ರೈತರಿಗೆ ಮಾತ್ರ ಅಗತ್ಯ ಪ್ರಮಾಣದಷ್ಟು ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಕೃಷಿ ಸಚಿವ ಬಿ.ಸಿ.ಪಾಟೀಲರ ತವರು ಜಿಲ್ಲೆಯಲ್ಲಿಯೇ ಯೂರಿಯಾ ಗೊಬ್ಬರ ಸಿಗದೆ ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ರೈತರು ಕೃಷಿ ಸಚಿವರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೃತಕ ಅಭಾವದ ಅನುಮಾನ..
ರೈತರಿಗೆ ಅಗತ್ಯ ಪ್ರಮಾಣದಷ್ಟು ಯೂರಿಯಾ ಗೊಬ್ಬರ ಸಿಗದೆ ರೈತರು ಈಗ ಕಂಗಾಲಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ರೈತರು ನಿತ್ಯವೂ ಕೃಷಿ ಪತ್ತಿನ ಕಚೇರಿಗಳಿಗೆ ಅಲೆದಾಡಿದರೂ ರೈತರಿಗೆ ಅಗತ್ಯ ಪ್ರಮಾಣದಷ್ಟು ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಆದಷ್ಟು ಬೇಗ ಜಿಲ್ಲೆಯವರೆ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲರು ಜಿಲ್ಲೆಯ ರೈತರಿಗೆ ಆಗುತ್ತಿರುವ ಯೂರಿಯಾ ಗೊಬ್ಬರದ ಕೊರತೆಯನ್ನು ನೀಗಿಸಬೇಕಿದೆ.
-ಪ್ರಭುಗೌಡ ಎನ್. ಪಾಟೀಲ
Published On - 11:47 am, Sat, 8 August 20