ಗದಗ: ಜಿಲ್ಲೆಯ ಶಿರಹಟ್ಟಿ ಹೊರವಲಯದಲ್ಲಿ ರೈತರು ಸ್ವಂತ ಹಣದಿಂದಲೇ ರಸ್ತೆ ಕಾಮಗಾರಿ ಮಾಡಿದ್ದಾರೆ. ಹೊಸಳ್ಳಿಯಿಂದ ರೈತರ ಜಮೀನುಗಳಿಗೆ ತೆರಳುವ ರಸ್ತೆ ದುರಸ್ತಿಯಾಗಿತ್ತು. ಈ ಬಗ್ಗೆ ಹಲವು ಬಾರಿ ಶಿರಹಟ್ಟಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿಗೆ ರೈತರು ಮನವಿ ಮಾಡಿಕೊಂಡಿದ್ದರು. ರೈತರು ಮನವಿ ಮಾಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ರೈತರೇ ದುರಸ್ತಿಗೊಂಡಿದ್ದ ರಸ್ತೆ ಕಾಮಗಾರಿ ಮಾಡಿಕೊಂಡಿದ್ದಾರೆ.
ತಲಾ 1 ಸಾವಿರದಂತೆ ಹಣ ಹಾಕಿಕೊಂಡು ಸುಮಾರು 53ಕ್ಕೂ ಹೆಚ್ಚು ರೈತರಿಂದ ರಸ್ತೆ ಕಾಮಗಾರಿ ಕಾರ್ಯ ನಡೆಯುತ್ತಿದೆ. ರಸ್ತೆಯ ಅಕ್ಕಪಕ್ಕದ ಗಿಡಮರಗಳನ್ನು ತಾವೇ ಸ್ವತಃ ಕಟ್ ಮಾಡಿ ಕಲ್ಲು ಎತ್ತಿ ಹಾಕಿ ರೈತರೇ ಕಾರ್ಮಿಕರಂತೆ ಕೆಲಸ ಮಾಡುತ್ತಿದ್ದಾರೆ. ಇಂತಹ ಕೊರೊನಾ ಸಂಕಷ್ಟದಲ್ಲೂ ರೈತರು ಸರ್ಕಾರ ಮಾಡಲಾಗದ ಕೆಲಸವನ್ನು ತಾವೇ ಮಾಡಿದ್ದಾರೆ. ನಮಗೆ ಇಂಥ ಸರ್ಕಾರವೂ ಬೇಡ, ಶಾಸಕರೂ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.