ಬೆಂಗಳೂರು: ಕಮ್ಮಿ ಆಯ್ತು, ಕೊರೊನಾ ಕಾಟ ಕಮ್ಮಿ ಆಯ್ತು ಅಂತ ಜನ ನಿಟ್ಟುಸಿರು ಬಿಟ್ಟಿದ್ದರು. ಲಾಕ್‌ಡೌನ್‌ನಲ್ಲಿ ಅನುಭವಿಸಿದ ಕಷ್ಟವನ್ನ ಜನ ಮರೆಯುತ್ತ ಬಂದಿದ್ರು.. ಎಲ್ಲರ ಜೀವನ ಸಹಜ ಸ್ಥಿತಿಗೆ ಬಂದಿತ್ತು. ಆದ್ರೆ ಒಂದು ವರ್ಷದ ಹಿಂದೆ ಶಾಕ್ ಕೊಟ್ಟಿದ್ದ ಕೊರೊನಾ ಮತ್ತೆ ಅಟ್ಟಹಾಸ ಮೆರೆಯುತ್ತಿದೆ. ಮತ್ತೆ ಜನರಲ್ಲಿ ಹೆಮ್ಮಾರಿ ವೈರಸ್ ಭಯ ಹುಟ್ಟಿಸಿದೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕು ಪ್ರಕರಣ ಮತ್ತೆ ಏರಿಕೆ ಕಾಣುತ್ತಿದೆ. ಮಹಾರಾಣಿ ಮಹಿಳಾ ಕಾಲೇಜು (ಮಹಾರಾಣಿ ಮಹಿಳಾ ಕ್ಲಸ್ಟರ್ ಯೂನಿವರ್ಸಿಟಿ)ಯಲ್ಲಿ ಪದವಿ ಅಂತಿಮ ಪರೀಕ್ಷೆ ನಡೆಯುತ್ತಿದ್ದು ಕೊರೊನಾ ಪಾಸಿಟಿವ್ ಬಂದಿದ್ದ ವಿದ್ಯಾರ್ಥಿನಿಯ ಜೊತೆಯಿದ್ದ ನಾಲ್ವರು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಗುತ್ತಿದೆ. ಪಿಪಿಇ ಕಿಟ್ ಹಾಕಿಕೊಂಡು ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುತ್ತಿದ್ದಾರೆ.
ಈಡಿಗ ಹಾಸ್ಟೆಲ್ ಕೊರೊನಾ ಪಾಸಿಟಿವ್ ಬಂದಿದ್ದ ವಿದ್ಯಾರ್ಥಿನಿಗಳ ಜತೆಗಿದ್ದ ಹಿನ್ನೆಲೆಯಲ್ಲಿ ಈ ನಾಲ್ವರು ವಿದ್ಯಾರ್ಥಿನಿಯರಿಗೆ ಪಿಪಿಇ ಕಿಟ್ ಹಾಕಿಕೊಂಡೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ನಿನ್ನೆ ಈ ನಾಲ್ಕು ವಿದ್ಯಾರ್ಥಿನಿಯರ ಕೊರೊನಾ ರಿಪೋರ್ಟ್ ನೆಗೆಟಿವ್ ಬಂದಿದೆ. ಆದ್ರೂ ಹೋಂ ಐಸೋಲೇಷನ್, ಕ್ವಾರಂಟೈನ್ ಅವಧಿ ಹಿನ್ನೆಲೆಯಲ್ಲಿ ಈ ರೀತಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ.
ಮಹಾರಾಣಿ ಕ್ಲಸ್ಟರ್ ವಿವಿಯ ಪಿಜಿ ವಿದ್ಯಾರ್ಥಿನಿಯರಿಗೆ ರಜೆ
ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಮಹಾರಾಣಿ ಕ್ಲಸ್ಟರ್ ವಿವಿಯ ಪಿಜಿ ವಿದ್ಯಾರ್ಥಿನಿಯರಿಗೆ ರಜೆ ನೀಡಲಾಗಿದೆ. ಆಫ್ಲೈನ್ ಕ್ಲಾಸ್ ಬಂದ್ ಮಾಡಲಾಗಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ತರಗತಿ ನೀಡಲು ಮುಂದಾಗಿದ್ದು ಭೌತಿಕ ತರಗತಿಗೆ ರಜೆ ನೀಡಲಾಗಿದೆ. ಈಡಿಗ ಸಮುದಾಯದ ಹಾಸ್ಟೆಲ್ನಲ್ಲಿದ್ದ ಕೆಲವರಿಗೆ ಸೋಂಕು ಕಾಣಿಸಿಕೊಂಡಿತ್ತು. ಮಹಾರಾಣಿ ಕ್ಲಸ್ಟರ್ ವಿವಿಯ 4 ವಿದ್ಯಾರ್ಥಿಗಳು ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ರು. ಈ ಹಿನ್ನೆಲೆ 4 ವಿದ್ಯಾರ್ಥಿಗಳಿಗೆ ಪತ್ಯೇಕ ಕೊಠಡಿಯಲ್ಲಿ ಪಿಪಿಇ ಕಿಟ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಇಂದು ಅಂತಿಮ ವರ್ಷದ ಬಿಎ, ಬಿಬಿಎ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದೆ.
BBMPಗೆ ತಲೆನೋವಾದ ವಿದ್ಯಾರ್ಥಿನಿಯರ ಹಾಸ್ಟೆಲ್ ಕೇಸ್
ದಾವಣಗೆರೆಯಿಂದ ಬಂದ ವಿದ್ಯಾರ್ಥಿನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಬಸ್ನಲ್ಲಿ ಬಂದಿದ್ದ ವಿದ್ಯಾರ್ಥಿನಿಗೆ ಕೊರೊನಾ ಬಂದಿದ್ದು ಹೇಗೆ ಎಂಬ ಅನುಮಾನ ವ್ಯಕ್ತವಾಗಿದ್ದು ಈ ವಿದ್ಯಾರ್ಥಿನಿಯಿಂದಾಗಿ ಹಾಸ್ಟೆಲ್ ಕೊರೊನಾ ಕ್ಲಸ್ಟರ್ ಆಯ್ತಾ ಎನ್ನಲಾಗುತ್ತಿದೆ. ಈ ವಿದ್ಯಾರ್ಥಿನಿ ದಾವಣಗೆರೆಯಿಂದ ಬಸ್, ಆಟೋದಲ್ಲಿ ಪ್ರಯಾಣಿಸಿದ್ದರು. ಹೀಗಾಗಿ ಈಗ ಆರೋಗ್ಯಾಧಿಕಾರಿಗಳಿಂದ ಟ್ರಾವೆಲ್ ಹಿಸ್ಟರಿ ಪರಿಶೀಲನೆ ಮಾಡಲಾಗುತ್ತಿದೆ. ಕೊರೊನಾ ಕೇಸ್ ಹೆಚ್ಚಳವಾಗದಂತೆ ತಡೆಗೆ ಸರ್ವ ಪ್ರಯತ್ನ ಮಾಡಲಾಗುತ್ತಿದೆ.
ಮಲ್ಲೇಶ್ವರಂನಲ್ಲಿರುವ ಈಡಿಗರ ಹಾಸ್ಟೆಲ್ನ 15 ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹಾಸ್ಟೆಲ್ನಲ್ಲಿ ಮಹಾರಾಣಿ ಕಾಲೇಜು, ಹೆಬ್ಬಾಳ ಇಂಜಿನಿಯರಿಂಗ್ ಕಾಲೇಜು, ಯಲಹಂಕದ ಕಾಲೇಜು, ಕೆಂಗೇರಿ ಕಾಲೇಜು ಸೇರಿ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರಿದ್ದಾರೆ. ಪ್ರತಿ ಕಾಲೇಜಿನಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಬಿಬಿಎಂಪಿಯಿಂದ ಹಾಸ್ಟೆಲ್ ಸ್ಯಾನಿಟೈಸ್ ಮಾಡಲಾಗುತ್ತಿದೆ. ಸೋಂಕಿತರ ಟ್ರಾವೆಲ್ ಹಿಸ್ಟರಿ ಪರಿಶೀಲನೆ ಮಾಡಿ ಸಂಬಂಧಪಟ್ಟ ಕಾಲೇಜಿನ ಮಾಹಿತಿ ಪಡೆದು ಸೂಚಿಸಲಾಗುತ್ತಿದೆ. ಸೋಂಕಿತ ವಿದ್ಯಾರ್ಥಿನಿಯರ ಕ್ಲಾಸ್ನಲ್ಲಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಸಂಪರ್ಕಿತರ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಪರೀಕ್ಷೆಗೆ ಬೇಕಾದ ಪಿಪಿಇ ಕಿಟ್ ಮತ್ತು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಬ್ಬರಿಸುತ್ತಿದೆ ಕೊರೊನಾ ಎರಡನೇ ಅಲೆ.. ಏಕೆ ಸೋಂಕಿತರ ಸಂಖ್ಯೆ ಏರುತ್ತಿದೆ ಗೊತ್ತಾ, ಇಲ್ಲಿದೆ ಉತ್ತರ
Published On - 12:22 pm, Fri, 19 March 21