ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವುದು ಮಹಿಳೆಯರ ಕರ್ತವ್ಯ: ಉತ್ತರಾಖಂಡ ಸಿಎಂ ತಿರತ್ ಸಿಂಗ್ ರಾವತ್ ಹೇಳಿಕೆ ಸಮರ್ಥಿಸಿಕೊಂಡ ಪತ್ನಿ ರಶ್ಮಿ ತ್ಯಾಗಿ

Ripped Jeans : ಸಮಾಜ ಮತ್ತು ದೇಶದ ನಿರ್ಮಾಣದಲ್ಲಿ ಮಹಿಳೆಯರು ಮಹತ್ತರ ಪಾತ್ರವಹಿಸುತ್ತಾರೆ. ನಮ್ಮ ಸಾಂಸ್ಕೃತಿಕ ಪರಂಪರೆ, ನಮ್ಮ ಅಸ್ಮಿತೆ, ನಮ್ಮ ಉಡುಗೆ ಇವುಗಳನ್ನು ರಕ್ಷಿಸುವ ಜವಾಬ್ದಾರಿ ದೇಶದ ಮಹಿಳೆಯರದ್ದು ಎಂದು ತಿರತ್ ಸಿಂಗ್ ರಾವತ್ ಅವರ ಪತ್ನಿ ರಶ್ಮಿ ತ್ಯಾಗಿ ಹೇಳಿದ್ದಾರೆ.

ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವುದು ಮಹಿಳೆಯರ ಕರ್ತವ್ಯ: ಉತ್ತರಾಖಂಡ ಸಿಎಂ ತಿರತ್ ಸಿಂಗ್ ರಾವತ್ ಹೇಳಿಕೆ ಸಮರ್ಥಿಸಿಕೊಂಡ ಪತ್ನಿ ರಶ್ಮಿ ತ್ಯಾಗಿ
ತಿರತ್ ಸಿಂಗ್ ರಾವತ್ - ರಶ್ಮಿ ತ್ಯಾಗಿ
Follow us
|

Updated on:Mar 19, 2021 | 12:18 PM

ಡೆಹ್ರಾಡೂನ್: ಹರಿದ ಜೀನ್ಸ್  ( ripped jeans) ಧರಿಸುವ ಮಹಿಳೆಯರು ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದ್ದಾರೆ? ಎಂದು ಉತ್ತರಾಖಂಡದ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಪ್ರಶ್ನಿಸಿದ್ದರು. ಮಹಿಳೆಯರ ಉಡುಗೆ ಬಗ್ಗೆ ಈ ರೀತಿಯ ಹೇಳಿಕೆ ನೀಡಿದ ರಾವತ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ, ಅವರ ಪತ್ನಿ ರಶ್ಮಿ ತ್ಯಾಗಿ ಸಮರ್ಥನೆಗಿಳಿದಿದ್ದಾರೆ. ತಿರತ್ ಸಿಂಗ್ ರಾವತ್ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಸಮಾಜ ಮತ್ತು ದೇಶದ ನಿರ್ಮಾಣದಲ್ಲಿ ಮಹಿಳೆಯರು ಮಹತ್ತರ ಪಾತ್ರವಹಿಸುತ್ತಾರೆ. ನಮ್ಮ ಸಾಂಸ್ಕೃತಿಕ ಪರಂಪರೆ, ನಮ್ಮ ಅಸ್ಮಿತೆ, ನಮ್ಮ ಉಡುಗೆ ಇವುಗಳನ್ನು ರಕ್ಷಿಸುವ ಜವಾಬ್ದಾರಿ ದೇಶದ ಮಹಿಳೆಯರದ್ದು ಎಂದು ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ ರಶ್ಮಿ ತ್ಯಾಗಿ ರಾವತ್ ಹೇಳಿದ್ದಾರೆ.

ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ರಾವತ್, ಮಹಿಳೆಯರು ಹರಿದ ಜೀನ್ಸ್ ಧರಿಸಿ ಮಕ್ಕಳೊಂದಿಗೆ ಓಡಾಡುತ್ತಾರೆ. ಇವರು ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತಾರೆ ಎಂದು ಪ್ರಶ್ನಿಸಿದ್ದರು. ರಾವತ್ ಅವರ ಹೇಳಿಕೆಯನ್ನು ಖಂಡಿಸಿ ವಿಪಕ್ಷ ಪ್ರತಿಭಟನೆಯನ್ನು ನಡೆಸಿತ್ತು.  ಮೌಲ್ಯಗಳ ಕೊರತೆಯಿಂದಾಗಿ ಈಗಿನ ಯುವ ತಲೆಮಾರು ವಿಚಿತ್ರ ರೀತಿಯ ಫ್ಯಾಷನ್ ಟ್ರೆಂಡ್ ಅನುಸರಿಸುತ್ತಾರೆ. ಮೊಣಕಾಲಿನ ಭಾಗದಲ್ಲಿ ಹರಿದಿರುವ ಜೀನ್ಸ್ ತೊಟ್ಚು ತಾವು ದೊಡ್ಡಜನ ಎಂದು ಭಾವಿಸುತ್ತಾರೆ. ಮಹಿಳೆಯರು ಕೂಡಾ ಇದನ್ನೇ ಅನುಸರಿಸುತ್ತಿದ್ದಾರೆ. ಯುವ ಜನರು ರಿಪ್​ಡ್ ಜೀನ್ಸ್ ಖರೀದಿಸಲು ಮಾರುಕಟ್ಟೆಗೆ ಹೋಗಿ ಅಲ್ಲಿ ಅವರಿಗೆ ಜೀನ್ಸ್ ಸಿಗದೇ ಇದ್ದರೆ ಅವರು ಜೀನ್ಸ್ ನ್ನು ಕತ್ತರಿಯಿಂದ ಕತ್ತರಿಸುತ್ತಾರೆ.

ನಾನೊಂದು ಬಾರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ನನ್ನ ಪಕ್ಕದಲ್ಲಿ ಮಹಿಳೆಯೊಬ್ಬರು ಕುಳಿತಿದ್ದರು. ಆಕೆ ಬೂಟ್ಸ್ ಧರಿಸಿದ್ದರು, ಧರಿಸಿದ ಜೀನ್ಸ್ ಮೊಣಕಾಲಿನ ಭಾಗದಲ್ಲಿ ಹರಿದಿತ್ತು, ಕೈಯಲ್ಲಿ ತುಂಬಾ ಬ್ರೇಸ್ಲೆಟ್. ಆಕೆಯ ಜತೆ ಇಬ್ಬರು ಮಕ್ಕಳಿದ್ದರು. ಆಕೆಯ ಪತಿ ಜೆಎನ್​ಯು ಪ್ರೊಫೆಸರ್. ನೀವೊಂದು ಎನ್​ಜಿಒ ನಡೆಸುತ್ತೀರಿ, ಮೊಣಕಾಲಿನ ಭಾಗದಲ್ಲಿ ಹರಿದಿರುವ ಜೀನ್ಸ್ ಧರಿಸುತ್ತೀರಿ. ಸಮಾಜದಲ್ಲಿ ಓಡಾಡುತ್ತೀರಿ, ನಿಮ್ಮ ಮಕ್ಕಳು ನಿಮ್ಮ ಜತೆಯಲ್ಲಿದ್ದಾರೆ. ನೀವು ಯಾವ ಮೌಲ್ಯವನ್ನು ಹೇಳಿಕೊಡುತ್ತಿದ್ದೀರಿ ಎಂದು ರಾವತ್ ಪ್ರಶ್ನಿಸಿದ್ದಾರೆ.

ರಿಪ್​ಡ್ ಜೀನ್ಸ್ ಸ್ಟೈಲ್ ಅನ್ನು ‘ಕತ್ತರಿ ಸಂಸ್ಕೃತಿ’ ಎಂದು ಹೇಳಿದ ರಾವತ್, ಹರಿದ ಜೀನ್ಸ್ ಧರಿಸಿ ಮೊಣಕಾಲು ತೋರಿಸಿದರೆ ಶ್ರೀಮಂತರು ಎಂದೆನಿಸಿಕೊಳ್ಳುವುದಿಲ್ಲ ಎಂಬುದನ್ನು ನಾವು ಕಲಿಸಿಕೊಡಬೇಕಿದೆ. ಹರಿದ ಜೀನ್ಸ್ ಧರಿಸಿ ನಾನು ನನ್ನ ಮಕ್ಕಳನ್ನು ಎಲ್ಲಿಗೆ ಕರೆದೊಯ್ಯುತ್ತಿದ್ದೇನೆ? ಮೊಣಕಾಲು ತೋರಿಸುವಲ್ಲಿ ಹುಡುಗಿಯರು ಕಮ್ಮಿಯೇನಿಲ್ಲ. ಇದೆಲ್ಲಾ ಸರಿಯೇ?. ಭಾರತದಲ್ಲಿರುವ ಜನರು ಹರಿದ ಜೀನ್ಸ್ ಧರಿಸುತ್ತಿದ್ದರೆ ಇತರ ದೇಶದ ಜನರು ಮೈಮುಚ್ಚಿಕೊಂಡು, ಯೋಗ ಕಲಿಯುತ್ತಿದ್ದಾರೆ ಎಂದಿದ್ದಾರೆ.

ರಾವತ್ ಹೇಳಿಕೆಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ನ ಹಿರಿಯ ನಾಯಕ ಕಪಿಲ್ ಸಿಬಲ್, ಈ ಹೇಳಿಕೆ ಆಘಾತವನ್ನುಂಟುಮಾಡಿದೆ ಎಂದು ಹೇಳಿದ್ದಾರೆ. ರಾವತ್ ಹೇಳಿಕೆ ಅವಮಾನಕರ. ತಕ್ಷಣವೇ ಅವರು ಮಹಿಳೆಯರ ಕ್ಷಮೆ ಕೇಳಬೇಕು ಎಂದು ಉತ್ತರಾಖಂಡದ ಕಾಂಗ್ರೆಸ್ ಮುಖ್ಯಸ್ಥ ಪ್ರೀತಂ ಸಿಂಗ್ ಒತ್ತಾಯಿಸಿದ್ದಾರೆ.

ರಾವತ್​ ಅವರ ಹೇಳಿಕೆಯನ್ನು ಖಂಡಿಸಿದ ಕಾಂಗ್ರೆಸ್ ವಕ್ತಾರ ಗರಿಮಾ ದಸೌನಿ, ಈ ಹೇಳಿಕೆ ಅಸಂಬದ್ಧ ಎಂದಿದ್ದಾರೆ. ಯಾವುದೇ ವ್ಯಕ್ತಿಯ ಉಡುಗೆ ಬಗ್ಗೆ ಮುಖ್ಯಮಂತ್ರಿಯೊಬ್ಬರು ಈ ರೀತಿ ಕಾಮೆಂಟ್ ಮಾಡಬಾರದು. ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳುವಾಗ ಬಿಜೆಪಿ ನಾಯಕರು ಮೌನವಾಗಿರುವುದು ಯಾಕೆ ಎಂದು ಗರಿಮಾ ಪ್ರಶ್ನಿಸಿದ್ದಾರೆ.

ಇದನ್ನೂ  ಓದಿ:  ಹರಿದ ಜೀನ್ಸ್​ ಪ್ಯಾಂಟ್​ ವಿಚಾರಕ್ಕೆ ಮುಖ್ಯಮಂತ್ರಿಯನ್ನೇ ಎದುರು ಹಾಕಿಕೊಂಡ ಅಮಿತಾಭ್​ ಮೊಮ್ಮಗಳು ನವ್ಯಾ!

Published On - 12:11 pm, Fri, 19 March 21