ಬೆಂಗಳೂರು ಬಿಟ್ಟು ಎಲ್ಲೂ ಹೋಗಿಲ್ಲ, ಬೆಂಗಳೂರೇ ನನ್ನ ಮನೆ ; ಸ್ವತಃ ಸ್ಪಷ್ಟನೆ ನೀಡಿದ ಹಿತೇಶಾ ಚಂದ್ರಾಣಿ
Hithesha Chandrani: ‘ನಾನು ಅನುಭವಿಸಿದ ಅನುಭವವನ್ನು ಒಬ್ಬಂಟಿಯಾಗಿ ಬದುಕುವ ನೂರಾರು ಯುವತಿಯರು ಸಹ ಅನುಭವಿಸಿರುತ್ತಾರೆ. ಈ ಘಟನೆ ನಡೆದ ನಂತರ ನನಗೆ ಬೆದರಿಕೆ ಹಾಕಲಾಯಿತು. ನನ್ನ ಜೀವನವೇ ತೊಂದರೆಗೀಡಾಯಿತು.
ಬೆಂಗಳೂರು: ಜೊಮ್ಯಾಟೊ ಫುಡ್ ಡೆಲಿವರಿ ಬಾಯ್ ಕಾಮರಾಜು ಮತ್ತು ಹಿತೇಶಾ ಚಂದ್ರಾಣಿ ಪ್ರಕರಣ ಸಾಮಾಜಿಕ ಜಾಲತಾಣದ ಮುಖ್ಯ ವಿಷಯವಾಗಿದೆ. ಊಟವನ್ನು ತಡವಾಗಿ ಕೊಟ್ಟಿದ್ದಲ್ಲದೆ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಕಾಮರಾಜು ವಿರುದ್ಧ ಹಿತೇಶಾ ಚಂದ್ರಾಣಿ ಆರೋಪ ಮಾಡಿದ್ದರು. ಈ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ನಂತರ ಅಳುತ್ತ ವಿಡಿಯೋ ಮಾಡಿದ್ದ ಕಾಮರಾಜು, ಪ್ರಕರಣದಲ್ಲಿ ನನ್ನ ತಪ್ಪೇನೂ ಇಲ್ಲ ಎಂದಿದ್ದರು. ಕಾಮರಾಜು ಸಹ ಹಿತೇಶ್ ಚಂದ್ರಾಣಿ ವಿರುದ್ಧ ದೂರು ನೀಡಿದ್ದರು. ನಂತರ ಇನ್ಸ್ಟಾಗ್ರಾಂ ಕಂಟೆಂಟ್ ಕ್ರಿಯೇಟರ್ ಹಿತೇಶ್ ಚಂದ್ರಾಣಿ ಬೆಂಗಳೂರಿನಿಂದ ಪಲಾಯನ ಮಾಡಿದ್ದರು ಎಂಬ ವದಂತಿ ಕೇಳಿಬಂದಿತ್ತು. ಆದರೆ, ಸ್ವತಃ ಹಿತೇಶಾ ಚಂದ್ರಾಣಿ ಬೆಂಗಳೂರು ಬಿಟ್ಟು ತೆರಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರೇ ನನ್ನ ಮನೆ, ವಿವಾದದಿಂದ ಪಾರಾಗಲು ಬೆಂಗಳೂರು ಬಿಟ್ಟು ಹೋಗಿಲ್ಲ ಎಂದು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
‘ನಾನು ಅನುಭವಿಸಿದ ಅನುಭವವನ್ನು ಒಬ್ಬಂಟಿಯಾಗಿ ಬದುಕುವ ನೂರಾರು ಯುವತಿಯರು ಸಹ ಅನುಭವಿಸಿರುತ್ತಾರೆ. ಈ ಘಟನೆ ನಡೆದ ನಂತರ ನನಗೆ ಬೆದರಿಕೆ ಹಾಕಲಾಯಿತು. ನನ್ನ ಜೀವನವೇ ತೊಂದರೆಗೀಡಾಯಿತು. ನನ್ನ ಹಿಂದೆ ನಿಂತು ವಾದಿಸಲು ನನ್ನಲ್ಲಿ ಯಾವುದೇ ಪಿಆರ್ ಏಜೆನ್ಸಿ ಇಲ್ಲ. ಘಟನೆಯಲ್ಲಿ ನನ್ನ ಮೂಗಿಗೆ ಗಾಯವಾದ್ದರಿಂದ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಬೇಕಾಯಿತು. ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಬೆದರಿಕೆ ಒಡ್ಡಿದರು. ನನ್ನ ಜೀವಕ್ಕೆ ಮತ್ತು ನನ್ನ ಕುಟುಂಬಕ್ಕೆ ಹಾನಿ ಮಾಡುವುದಾಗಿ ಹೆದರಿಸಿದರು. ಆನ್ಲೈನ್ನಲ್ಲಿಯೂ ನನ್ನ ಬಗ್ಗೆ ತೀವ್ರ ಅಪಪ್ರಚಾರ ಮಾಡಲಾಯಿತು.’ ಎಂದು ಅವರು ಬರೆದುಕೊಂಡಿದ್ದಾರೆ.
View this post on Instagram
ತಾವು ಜೊಮ್ಯಾಟೊದಲ್ಲಿ ಉಚಿತವಾಗಿ ಫುಡ್ ಡೆಲಿವರಿ ಕೇಳಿದ್ದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಲಾಗುತ್ತಿದೆ. ಆದರೆ ಆ ದಿನ ನನಗೆ ಉಚಿತ ಫುಡ್ ಡೆಲಿವರಿ ತಡವಾದರೆ ಉಚಿತವಾಗಿ ನೀಡುವುದಾಗಿ ಜ್ಯೊಮಾಟೋವೇ ಕೊಡುಗೆ ನೀಡಿತ್ತು ಎಂದು ಅವರು ತಿಳಿಸಿದ್ದಾರೆ.
ತಮ್ಮ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ಬೆಂಗಳೂರು ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಜೊಮ್ಯಾಟೋ ಡೆಲಿವರಿ ಬಾಯ್ ಕಾಮರಾಜು ದೂರು ನೀಡಿದ ಹಿನ್ನೆಲೆಯಲ್ಲಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲು ಪೊಲೀಸರು ಹಿತೇಶಾರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಬೆಂಗಳೂರಿನಲ್ಲಿ ಇಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ ಎನ್ನಲಾಗಿತ್ತು. ಆದರೆ ಈ ಮಾಹಿತಿ ಸುಳ್ಳೆಂದು ಸ್ವತಃ ಹಿತೇಶಾ ಚಂದ್ರಾಣಿ ಸ್ಪಷ್ಟನೆ ನೀಡಿದ್ದಾರೆ. ತಾವು ಎಲ್ಲೂ ಹೋಗಿಲ್ಲ, ಬೆಂಗಳೂರಿನಲ್ಲೇ ಇದ್ದೇನೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ನಿಗದಿತ ಸಮಯಕ್ಕೆ ಬಾರದ ಊಟ; ಪ್ರಶ್ನಿಸಿದ್ದಕ್ಕೆ ಯುವತಿಯ ಮೂಗು ಮುರಿದ ಜೊಮ್ಯಾಟೋ ಡೆಲಿವರಿ ಬಾಯ್
ಅವರೇ, ಇವರಾ? ಜೊಮ್ಯಾಟೋ ಪ್ರಕರಣದಲ್ಲಿ ಸದ್ದು ಮಾಡಿದ ಯುವತಿ ನಿಜ ಜೀವನದಲ್ಲಿ ಹೀಗಿದ್ದಾರಾ?
Published On - 1:29 pm, Fri, 19 March 21