AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಗದಿತ ಸಮಯಕ್ಕೆ ಬಾರದ ಊಟ; ಪ್ರಶ್ನಿಸಿದ್ದಕ್ಕೆ ಯುವತಿಯ ಮೂಗು ಮುರಿದ ಜೊಮ್ಯಾಟೋ ಡೆಲಿವರಿ ಬಾಯ್​

ಡೆಲಿವರಿ ಬಾಯ್​ನಿಂದ ಹಲ್ಲೆಗೊಳಗಾದ ಯುವತಿಯ ಮೂಗಿನಿಂದ ರಕ್ತ ಸುರಿಯಲಾರಂಭಿಸಿದ್ದು, ಕಂಗಾಲಾಗಿ ಘಟನೆಯ ಬಗ್ಗೆ ವಿಡಿಯೋ ಮಾಡಿದ್ದಾರೆ. ನಂತರ ಆಸ್ಪತ್ರೆಗೂ ತೆರಳಿದ ಯುವತಿ ಚಿಕಿತ್ಸೆ ಪಡೆದಿದ್ದಾರೆ. ಯುವತಿ ವಿಡಿಯೋದಲ್ಲಿ ತಿಳಿಸಿರುವಂತೆ ಮೂಗಿನ ಮೂಳೆಗೆ ಬಲವಾದ ಹೊಡೆತ ಬಿದ್ದಿರುವ ಕಾರಣ ಅದರಲ್ಲಿ ಬಿರುಕು ಮೂಡಿದ್ದು, ಸರ್ಜರಿ ಮಾಡಿಸಿಕೊಳ್ಳಬೇಕಾಗಿದೆ.

ನಿಗದಿತ ಸಮಯಕ್ಕೆ ಬಾರದ ಊಟ; ಪ್ರಶ್ನಿಸಿದ್ದಕ್ಕೆ ಯುವತಿಯ ಮೂಗು ಮುರಿದ ಜೊಮ್ಯಾಟೋ ಡೆಲಿವರಿ ಬಾಯ್​
ಹಲ್ಲೆಗೊಳಗಾದ ಯುವತಿ
Skanda
| Updated By: ganapathi bhat|

Updated on: Mar 10, 2021 | 4:36 PM

Share

ಬೆಂಗಳೂರು: ಆನ್​ಲೈನ್​ ಮೂಲಕ ಊಟ ತರಿಸಿಕೊಳ್ಳಲು ಆರ್ಡರ್ ನೀಡಿದ್ದ ಯುವತಿಯೊಬ್ಬಳಿಗೆ ಡೆಲಿವರಿ ಬಾಯ್ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಜೊಮ್ಯಾಟೊ ಫುಡ್ ಡೆಲಿವರಿ ಬಾಯ್ ಕಾಮರಾಜ್​ ಎಂಬಾತ ಹಿತೇಶಾ ಚಂದ್ರಾಣಿ ಎಂಬ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಆಘಾತಕ್ಕೊಳಗಾಗಿರುವ ಯುವತಿ ಘಟನಾವಳಿಯ ವಿವರಗಳನ್ನು ಇಂದು ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ತನಗಾದ ನೋವನ್ನು ಹೇಳಿಕೊಂಡಿದ್ದಾರೆ.

ಘಟನೆಯ ಹಿನ್ನೆಲೆ ಹಿತೇಶಾ ಚಂದ್ರಾಣಿ ಎಂಬ ಯುವತಿ ಒಂಟಿಯಾಗಿ ಮನೆಯಲ್ಲಿ ನೆಲೆಸಿದ್ದು, ಮಧ್ಯಾಹ್ನ ಹಸಿವಾದಾಗ 3.30ರ ಸುಮಾರಿಗೆ ಜೊಮ್ಯಾಟೋ ಆ್ಯಪ್​ ಮೂಲಕ ಊಟ ತರಿಸಿಕೊಳ್ಳಲು ಬುಕ್ಕಿಂಗ್ ಮಾಡಿದ್ದಾರೆ. ಆ್ಯಪ್​ ಲೆಕ್ಕಾಚಾರದ ಪ್ರಕಾರ 4.30ರ ಒಳಗಾಗಿ ಊಟ ತಲುಪಬೇಕಿತ್ತು. ಆದರೆ, ನಿಗದಿತ ಸಮಯಕ್ಕೆ ಆಹಾರ ಬಾರದಿದ್ದಾಗ ಯುವತಿ ಗ್ರಾಹಕ ಸೇವಾ ಕೇಂದ್ರದ ಸಿಬ್ಬಂದಿಗೆ ಕರೆ ಮಾಡಿ ಸಮಸ್ಯೆಯ ಬಗ್ಗೆ ಹೇಳಿಕೊಂಡು, ತಡವಾಗುತ್ತಿರುವ ಕಾರಣ ಆರ್ಡರ್ ಕ್ಯಾನ್ಸಲ್ ಮಾಡಬಹುದಾ ಎಂದು ಕೇಳಿದ್ದಾರೆ. ಇದೆಲ್ಲಾ ಆಗುವಾಗ ಡೆಲಿವರಿ ಬಾಯ್ ಮನೆಗೆ ಆಗಮಿಸಿದ್ದಾನೆ. ಮೊದಲೇ ತಡವಾಗಿದ್ದ ಕಾರಣ ಅಸಮಾಧಾನಗೊಂಡ ಯುವತಿ, ಜೊಮ್ಯಾಟೋ ಟೀಂ ಜೊತೆ ಮಾತಾಡಿದ್ದೇನೆ. ಈಗ ನನಗೆ ಯಾವುದೇ ಖರ್ಚಿಲ್ಲದೇ ಊಟ ಕೊಡ್ತೀರಾ? ನಿಮ್ಮ ಕಡೆಯವರಿಂದ ಉತ್ತರ ಬರುವ ತನಕ ಕಾದು ನಿಲ್ಲಲು ಸೂಚಿಸಿದ್ದಾರೆ. ಆದರೆ, ಯುವತಿ ಹೇಳುವ ಪ್ರಕಾರ ಮೊದಲೇ ಸಿಡಿಮಿಡಿ ಎನ್ನುತ್ತಿದ್ದ ಡೆಲಿವರಿ ಬಾಯ್, ಕಾಯಲು ಹೇಳಿದಾಕ್ಷಣ ಬಾಯಿಗೆ ಬಂದಂತೆ ಮಾತನಾಡಿ ನಾನೇನು ನಿಮ್ಮ ಆಳಾ? ಎಂದು ಕೂಗಾಡಿದ್ದಾನೆ. ಭಯಗೊಂಡ ಯುವತಿ ಬಾಗಿಲು ಹಾಕಿಕೊಳ್ಳಲು ಮುಂದಾದಾಗ ಜೋರಾಗಿ ಬಾಗಿಲು ತಳ್ಳಿದಾತ ಸೀದಾ ಒಳನುಗ್ಗಿ ಟೇಬಲ್ಲಿನ ಮೇಲಿಟ್ಟಿದ್ದ ಪೊಟ್ಟಣವನ್ನು ಕಿತ್ತುಕೊಂಡಿದ್ದಲ್ಲದೇ, ಮುಷ್ಠಿಯಿಂದ ಯುವತಿಯ ಮುಖಕ್ಕೆ ಬಲವಾಗಿ ಗುದ್ದಿ ಓಡಿ ಹೋಗಿದ್ದಾನೆ.

ಡೆಲಿವರಿ ಬಾಯ್​ನಿಂದ ಹಲ್ಲೆಗೊಳಗಾದ ಯುವತಿಯ ಮೂಗಿನಿಂದ ರಕ್ತ ಸುರಿಯಲಾರಂಭಿಸಿದ್ದು, ಕಂಗಾಲಾಗಿ ಘಟನೆಯ ಬಗ್ಗೆ ವಿಡಿಯೋ ಮಾಡಿದ್ದಾರೆ. ನಂತರ ಆಸ್ಪತ್ರೆಗೂ ತೆರಳಿದ ಯುವತಿ ಚಿಕಿತ್ಸೆ ಪಡೆದಿದ್ದಾರೆ. ಯುವತಿ ವಿಡಿಯೋದಲ್ಲಿ ತಿಳಿಸಿರುವಂತೆ ಮೂಗಿನ ಮೂಳೆಗೆ ಬಲವಾದ ಹೊಡೆತ ಬಿದ್ದಿರುವ ಕಾರಣ ಅದರಲ್ಲಿ ಬಿರುಕು ಮೂಡಿದ್ದು, ಸರ್ಜರಿ ಮಾಡಿಸಿಕೊಳ್ಳಬೇಕಾಗಿದೆ. ಸದ್ಯ ಈ ಕುರಿತು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಯುವತಿಗೆ ನ್ಯಾಯ ಕೊಡಿಸುವ ಧೈರ್ಯದ ಮಾತುಗಳನ್ನಾಡಿದ್ದಾರೆ. ಯುವತಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಆಕೆಗೆ ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ: ಬೈಕ್ ಅಡ್ಡಗಟ್ಟಿ ಹೆದ್ದಾರಿಯಲ್ಲಿ ದರೋಡೆ: ಚಿತ್ರದುರ್ಗದಲ್ಲಿ ಮಂಗಳಮುಖಿಯರ ರೌಡಿಸಂನಿಂದ ಆಸ್ಪತ್ರೆ ಸೇರಿದ ಇಬ್ಬರು ಯುವಕರು

ಬದುಕಿತು ಬಡಜೀವ: ನಾಯಿಗಳ ದಾಳಿಯಿಂದ ಜಿಂಕೆಯನ್ನು ರಕ್ಷಿಸಿದ ಧಾರವಾಡ ಅರಣ್ಯ ಇಲಾಖೆ ಅಧಿಕಾರಿಗಳು