ಬದುಕಿತು ಬಡಜೀವ: ನಾಯಿಗಳ ದಾಳಿಯಿಂದ ಜಿಂಕೆಯನ್ನು ರಕ್ಷಿಸಿದ ಧಾರವಾಡ ಅರಣ್ಯ ಇಲಾಖೆ ಅಧಿಕಾರಿಗಳು

ಜಿಂಕೆ ಕೋಡು ಮುರಿದಿದ್ದರಿಂದ ಕೂಡಲೇ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪಶು ಚಿಕಿತ್ಸಾಲಯಕ್ಕೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿ ಪಶು ವೈದ್ಯ ಡಾ. ಅನಿಲ್ ಕುಮಾರ್ ಪಾಟೀಲ್, ಜಿಂಕೆಗೆ ಸಣ್ಣದೊಂದು ಶಸ್ತ್ರಚಿಕಿತ್ಸೆ ಮಾಡಿದ್ದು, ಕೋಡಿಗೆ ಬ್ಯಾಂಡೇಜ್ ಹಾಕಿದರು

  • ನರಸಿಂಹಮೂರ್ತಿ ಪ್ಯಾಟಿ
  • Published On - 11:26 AM, 7 Mar 2021
ಬದುಕಿತು ಬಡಜೀವ: ನಾಯಿಗಳ ದಾಳಿಯಿಂದ ಜಿಂಕೆಯನ್ನು ರಕ್ಷಿಸಿದ ಧಾರವಾಡ ಅರಣ್ಯ ಇಲಾಖೆ ಅಧಿಕಾರಿಗಳು
ಚಿಕಿತ್ಸೆ ಪಡೆಯುತ್ತಿರುವ ಜಿಂಕೆ

ಧಾರವಾಡ: ಕಾಡಿನೊಳಗೆ ಜೀವಿಸುವ ಪ್ರಾಣಿಯೊಂದು ಆಹಾರ ಅರಸಿ ನಾಡಿಗೆ ಬಂದಿದ್ದು, ಊರಲ್ಲಿ ವಾಸಿಸುವ ಪ್ರಾಣಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಹೌದು ಗ್ರಾಮದಲ್ಲಿದ ನಾಯಿಗಳ ಗುಂಪೊಂದು ಈ ಸಾಧು ಪ್ರಾಣಿಯನ್ನು ಅಟ್ಟಿಸಿಕೊಂಡು ಬಂದಿದ್ದು, ಅದರ ಮೇಲೆ ಮುಗಿ ಬಿದ್ದು ಗಾಯಗೊಳಿಸಿಬಿಟ್ಟವು. ಅದೃಷ್ಟವಶಾತ್ ಸ್ಥಳೀಯರು ಈ ಕಾದಾಟವನ್ನು ನೋಡಿದ್ದರಿಂದ ಅದರ ಜೀವ ಉಳಿಯಿತು. ಅಷ್ಟಕ್ಕೂ ಊರಿಗೆ ಬಂದ ಪ್ರಾಣಿ ಬೇರೆ ಯಾವುದು ಅಲ್ಲ ಜಿಂಕೆ.

ಇಂದು ಬೆಳ್ಳಂಬೆಳಿಗ್ಗೆ ಧಾರವಾಡ ನಗರದ ಗಿರಿ ನಗರ ಬಡಾವಣೆಯಲ್ಲಿ ಸುಮಾರು ಐದು ವರ್ಷದ ಗಂಡು ಜಿಂಕೆ ಕಾಣಿಸಿಕೊಂಡಿದ್ದು, ಜಿಂಕೆ ನಾಡಿನೊಳಗೆ ಬರುತ್ತಿದ್ದಂತೆಯೇ ಬಡಾವಣೆಯ ನಾಯಿಗಳೆಲ್ಲಾ ಸೇರಿ ಅದರ ಮೇಲೆ ದಾಳಿ ಮಾಡಿಬಿಟ್ಟವು. ಜಿಂಕೆ ಎಷ್ಟೇ ಯತ್ನಿಸಿದರೂ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಇದೇ ವೇಳೆ ಜಿಂಕೆಯ ಕೋಡುಗಳು ಮುರಿದಿದ್ದು, ಜಿಂಕೆಯ ಕಾಲು, ಬೆನ್ನು, ಕುತ್ತಿಗೆಗೆ ನಾಯಿ ಕಡಿತದಿಂದ ಗಾಯಗಳಾದವು. ಈ ಘಟನೆಯನ್ನು ನೋಡುತ್ತಿದ್ದಂತೆಯೇ ಸ್ಥಳೀಯರು ಪ್ರಾಣಿ ರಕ್ಷಕ ಯಲ್ಲಪ್ಪ ಜೋಡಳ್ಳಿಗೆ ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಯಲ್ಲಪ್ಪ, ಜಿಂಕೆಯನ್ನು ರಕ್ಷಿಸಿದ್ದು, ಸದ್ಯ ಜಿಂಕೆ ಅರಣ್ಯ ಇಲಾಖೆಯಲ್ಲಿ ಆಶ್ರಯ ಪಡೆದುಕೊಂಡಿದೆ. ನಾಯಿಗಳ ದಾಳಿಯಿಂದಾಗಿ ಜಿಂಕೆಗೆ ಗಂಭೀರ ಗಾಯಗಳಾಗಿದ್ದವು. ಇನ್ನು ಕೋಡು ಮುರಿದಿದ್ದರಿಂದ ಕೂಡಲೇ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪಶು ಚಿಕಿತ್ಸಾಲಯಕ್ಕೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿ ಪಶುವೈದ್ಯ ಡಾ. ಅನಿಲ್ ಕುಮಾರ್ ಪಾಟೀಲ್, ಜಿಂಕೆಗೆ ಸಣ್ಣದೊಂದು ಶಸ್ತ್ರಚಿಕಿತ್ಸೆ ಮಾಡಿದ್ದು, ಕೋಡಿಗೆ ಬ್ಯಾಂಡೇಜ್ ಹಾಕಿದರು.
ದೇಹದ ವಿವಿಧ ಕಡೆಗಳಲ್ಲಿ ಆಗಿದ್ದ ಗಾಯಕ್ಕೆ ಕೂಡ ಚಿಕಿತ್ಸೆ ನೀಡಿದ್ದಾರೆ. ಇದರಿಂದಾಗಿ ಅದುವರೆಗೂ ನಿತ್ರಾಣಗೊಂಡಿದ್ದ ಜಿಂಕೆ ನಿಧಾನವಾಗಿ ಚೇತರಿಸಿಕೊಂಡಿತು. ಚಿಕಿತ್ಸೆ ಮುಗಿದ ಬಳಿಕ ಜಿಂಕೆಯನ್ನು ಅರಣ್ಯ ಇಲಾಖೆಗೆ ತರಲಾಯಿತು. ಸದ್ಯ ಚಿಕಿತ್ಸೆಯನ್ನು ಇಲಾಖೆಯ ಆವರಣದಲ್ಲಿಯೇ ಮುಂದುವರೆಸಲಾಗಿದೆ ಎಂದು ಅರಣ್ಯ ಇಲಾಖೆಯ ಎಸಿಎಫ್ ಸಂತೋಷ ಕುಮಾರ್ ಹೇಳಿದ್ದಾರೆ.

deer attack

ನಾಯಿಯ ದಾಳಿಯಿಂದ ಗಾಯಗೊಂಡಿರುವ ಚಿರತೆ

ಒಂದು ಕಡೆ ದಿನದಿಂದ ದಿನಕ್ಕೆ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದ್ದು, ಮತ್ತೊಂದು ಕಡೆಗೆ ಇದೀಗ ಬೇಸಿಗೆ ಕೂಡ ಆರಂಭವಾಗಿದೆ. ಹೀಗಾಗಿ ಆಹಾರವನ್ನು ಅರಸುತ್ತಾ ಕಾಡು ಪ್ರಾಣಿಗಳು ನಾಡಿಗೆ ಬರುವುದು ಹೆಚ್ಚಾಗುತ್ತಿದೆ. ಇಂತಹ ವೇಳೆಯಲ್ಲಿ ಅವುಗಳ ರಕ್ಷಣೆಯೇ ದೊಡ್ಡ ಸಮಸ್ಯೆಯಾಗಿ ಹೋಗುತ್ತದೆ. ಸ್ಥಳೀಯರು ಎಚ್ಚೆತ್ತುಕೊಂಡಿದ್ದರಿಂದ ಇದೀಗ ಜಿಂಕೆಯ ಜೀವ ಉಳಿದಿದೆ. ಇನ್ನೂ ಸುಮಾರು ಹದಿನೈದು ದಿನಗಳ ಕಾಲ ಜಿಂಕೆಗೆ ಚಿಕಿತ್ಸೆ ಸಿಕ್ಕರೆ ಅದು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಬಳಿಕವಷ್ಟೇ ಅದನ್ನು ಮತ್ತೆ ಕಾಡಿಗೆ ಬಿಡಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಜಿಂಕೆ ಮೇಲೆ ನಾಯಿ ದಾಳಿ: ಹೋರಾಟದಲ್ಲಿ ಸಾವಿಗೀಡಾದ ಸಾಧು ಪ್ರಾಣಿ ಅಂತ್ಯಸಂಸ್ಕಾರದ ವೇಳೆ ಕಣ್ಣೀರಿಟ್ಟ ಸ್ಥಳೀಯರು