ಹಾಸನ: ಹಣಕ್ಕಾಗಿ ಹೆತ್ತ ತಾಯಿಯನ್ನೇ ಹತ್ಯೆಗೈದಿದ್ದ ಮಕ್ಕಳಿಬ್ಬರ ಸೆರೆ
ಹಣಕ್ಕಾಗಿ ಹೆತ್ತ ತಾಯಿಯನ್ನೇ ಹತ್ಯೆಗೈದ ಘಟನೆ ಹಾಸನದಲ್ಲಿ ನಡೆದಿದೆ. ಆರೋಪಿ ಪುತ್ರರನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸನ: ಸಕಲೇಶಪುರ ತಾಲ್ಲೂಕಿನ ಕರಡಿಗಾಲ ಗ್ರಾಮದಲ್ಲಿ ವೃದ್ಧೆಯ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹಣಕ್ಕಾಗಿ ಹೆತ್ತಮ್ಮನನ್ನೇ ಕೊಂದು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದ ಪುತ್ರರನ್ನು ಪೊಲೀಸರು ಬಂಧಿಸಿದ್ದಾರೆ.
ತಂಗ್ಯಮ್ಮ(65) ಕೊಲೆಯಾದ ಮಹಿಳೆಯಾಗಿದ್ದು, ಪುತ್ರರಾದ ರಾಜೇಗೌಡ(48) ಮತ್ತು ಸುಬ್ರಮಣಿ(45) ಆರೋಪಿಗಳು ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಗಿರವಿ ಇಟ್ಟಿದ್ದ ಒಡವೆ ಬಿಡಿಸಿ ತಮಗೆ ಕೊಡುವಂತೆ ಮಕ್ಕಳು ಪೀಡಿಸುತ್ತಿದ್ದರು. ಒಡವೆಯನ್ನ ಕೊಡಲು ಒಪ್ಪದಿದ್ದಕ್ಕೆ ತಾಯಿಯ ಕುತ್ತಿಗೆ ಹಿಸುಕಿ ಹೈತ್ಯೆಗೈದಿದ್ದಾರೆ. ಮಾರ್ಚ್ 17ರಂದು ಮಹಿಳೆ ಶವ ಅನುಮಾನಾಸ್ಪದ ರೀತಿಯಲ್ಲಿ ಮನೆಯಲ್ಲಿ ಪತ್ತೆಯಾಗಿತ್ತು. ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪುತ್ರರು ನಂಬಿಸಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದರು.
ವಿಷ ಸೇವಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಾವಿನ ಕುರಿತಾಗಿ ಪೊಲೀಸರಿಗೆ ಕಿರಿಯ ಪುತ್ರ ಹೇಮಂತ್ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ತನಿಖೆಗೆ ಇಳಿದ ಸಕಲೇಶಪುರ ಗ್ರಾಮಾಂತರ ಪೊಲೀಸರಿಗೆ ಪುತ್ರರೇ ಕೊಲೆ ಮಾಡಿರುವುದು ತಿಳಿದು ಬಂದಿದೆ.
ಮಾರ್ಚ್ 16 ರ ಸಂಜೆ ತಾಯಿಯನ್ನ ಕೊಲೆ ಮಾಡಿದ್ದರು. ಮರುದಿನ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಕತೆ ಕಟ್ಟಿ ಅಂತ್ಯಕ್ರಿಯೆಗೆ ತಯಾರು ನಡೆಸಿದ್ದರು. ಇದೀಗ ನಿಜಾಂಶ ತಿಳಿದು ಬಂದಿದ್ದು ಮಾರ್ಚ್ 18ಕ್ಕೆ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಕೋರ್ಟ್ನಿಂದ ಹಿಂದಿರುಗುವಾಗ ಅಡ್ಡಗಟ್ಟಿ ಮಾಲೂರು ರೌಡಿಯ ಕೊಲೆ
ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆಯ ಮೃತ ದೇಹ ಪತ್ತೆ: ಪತಿಯ ವಿರುದ್ಧ ಕುಟುಂಬಸ್ಥರಿಂದ ಕೊಲೆ ಆರೋಪ