ಸಚಿವ ಸುಧಾಕರ್ ಸಿಬ್ಬಂದಿ ಮಧ್ಯೆಯೇ ಡಿಶುಂ ಡಿಶುಂ; ಮನೆ ಮುಂದೆಯೇ ಸೀನ್ ಕ್ರಿಯೇಟ್
‘ನಾನು ಟೀ ಮಾರಾಟಗಾರನ ಮೇಲೆ ಹಲ್ಲೆ ನಡೆಸಿರುವುದನ್ನು ನೀನು ಸಚಿವರಿಗೆ ಹೇಳಿದ್ದೀಯಾ’ ಎಂದು ಕೂಗುತ್ತಾ ಸೋಮಶೇಖರ್ ಮೇಲೆ ತಿಮ್ಮಯ್ಯ ಕೈಎತ್ತಿದ್ದಾನೆ. ಈ ಘಟನೆ ಸಚಿವ ಸುಧಾಕರ್ ಮನೆ ಮುಂದಿನ ರಸ್ತೆಯಲ್ಲೇ ನಡೆದಿದೆ.
ಬೆಂಗಳೂರು: ರಾಜಕಾರಣಿಗಳ ಜಗಳ, ಗಲಾಟೆ ಕೇಳಿಸಿಕೊಂಡು ಬೇಸರವಾಗಿದ್ದರೆ ಇಲ್ಲೊಂದು ವಿಭಿನ್ನ ಘಟನೆ ನಡೆದಿದೆ. ಸಚಿವ ಡಾ.ಕೆ.ಸುಧಾಕರ್ ಮನೆ ಮುಂದೆ ಗನ್ಮ್ಯಾನ್ – ಚಾಲಕ ಕಿತ್ತಾಟ ಮಾಡಿಕೊಂಡಿದ್ದಾರೆ. ಇಬ್ಬರೂ ಸಿಬ್ಬಂದಿಗಳು ರಸ್ತೆಯಲ್ಲಿ ಬಿದ್ದು ಹೊಡೆದಾಡಿಕೊಂಡಿದ್ದಾರೆ. ಅವರಿಬ್ಬರ ಜಗಳ ಬಿಡಿಸಲು ಪೊಲೀಸ್ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ಸಚಿವರ ಸಿಬ್ಬಂದಿಗಳ ಮಾರಾಮಾರಿ ಇದೀಗ ನಗೆಪಾಟಲಿಗೆ ಈಡಾಗುತ್ತಿದೆ. ಹೊಡೆದಾಟದ ವಿಡಿಯೋ ವೈರಲ್ ಆಗಿದೆ.
ಸುಧಾಕರ್ ಮನೆಯ ಖಾಸಗಿ ಚಾಲಕ ಸೋಮಶೇಖರ್ ಮತ್ತು ಗನ್‌ಮ್ಯಾನ್ ತಿಮ್ಮಯ್ಯ ಅವರುಗಳೇ ಪರಸ್ಪರ ಬೀದಿಯಲ್ಲಿ ಹೊಡೆದಾಟ ಮಾಡಿಕೊಂಡವರು. ನಿನ್ನೆ ಡಾ.ಕೆ.ಸುಧಾಕರ್ ಅವರು ಮನೆ ಬಳಿ ಬರುವ ವೇಳೆಗೆ ಅಂಗವಿಕಲ ವ್ಯಕ್ತಿಯೋರ್ವರು ಟೀ ಮಾರಾಟ ಮಾಡಲು ಬಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಚಿವ ಡಾ.ಕೆ.ಸುಧಾಕರ್ ಗನ್ಮ್ಯಾನ್ ತಿಮ್ಮಯ್ಯ, ಟೀ ಮಾರುವ ವಿಶೇಷಚೇತನ ವ್ಯಕ್ತಿಗೆ ಹೊಡೆದಿದ್ದಾರೆ. ತಿಮ್ಮಯ್ಯ ವಿಶೇಷಚೇತನ ವ್ಯಕ್ತಿಯ ಮೇಲೆ ಕೈಮಾಡಿರುವುದು ಘಟನೆ ನೊಡಿದ ಎಲ್ಲರಿಗೂ ಬೇಸರ ತರಿಸಿದೆ.
ನಿನ್ನೆ ನಡೆದ ಘಟನೆಯೇ ನಿನ್ನೆ ಇಡೀ ರಾತ್ರಿ ತಿಮ್ಮಯ್ಯರ ಮನಸಿನಲ್ಲಿ ಕಾಡಿದೆ. ಘಟನೆ ನೋಡಿದ್ದ ಖಾಸಗಿ ವಾಹನ ಚಾಲಕ ಸೋಮಶೇಖರ್ ಸಚಿವರಿಗೆ ದೂರು ಕೊಟ್ಟಿರಬಹುದಾ ಎಂಬ ಅನುಮಾನ ತಲೆದೋರಿದೆ. ಇದೇ ಅನುಮಾನದಿಂದ ಇಂದು ಬೆಳಗ್ಗೆ ಸೋಮಶೇಖರ್ ಮೇಲೆ ಏರಿ ಹೋಗಿದ್ದಾರೆ. ‘ನಾನು ಟೀ ಮಾರಾಟಗಾರನ ಮೇಲೆ ಹಲ್ಲೆ ನಡೆಸಿರುವುದನ್ನು ನೀನು ಸಚಿವರಿಗೆ ಹೇಳಿದ್ದೀಯಾ’ ಎಂದು ಕೂಗುತ್ತಾ ಸೋಮಶೇಖರ್ ಮೇಲೆ ತಿಮ್ಮಯ್ಯ ಕೈಎತ್ತಿದ್ದಾನೆ. ಈ ಘಟನೆ ಸಚಿವ ಸುಧಾಕರ್ ಮನೆ ಮುಂದಿನ ರಸ್ತೆಯಲ್ಲೇ ನಡೆದಿದೆ. ಇದು ನಗೆಪಾಟಲಿಗೆ ಕಾರಣವಾಗಿದೆ.
ಡಾ.ಕೆ.ಸುಧಾಕರ್ ಅವರ ಮನೆ ಸಮೀಪವೇ ರಮೇಶ್ ಜಾರಕಿಹೊಳಿ ಅವರ ಮನೆಯಿದೆ. ಇಡೀ ದಿನ ಮಾಧ್ಯಮ ಸಿಬ್ಬಂದಿಗಳು ಅವರ ಮನೆ ಮುಂದೆ ಇರುವುದು ಇತ್ತೀಚಿಗೆ ವಾಡಿಕೆಯಾಗಿದೆ. ಅಲ್ಲದೇ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಆತಂಕದಿಂದ ಡಾ.ಕೆ.ಸುಧಾಕರ್ ಅವರ ಮನೆ ಬಳಿಯೂ ವಿವರ ಪಡೆಯಲು ಮಾಧ್ಯಮ ಪ್ರತಿನಿಧಿಗಳು ಇರುತ್ತಾರೆ. ಈ ಎಲ್ಲ ಅಂಶಗಳ ಅರಿವು ಓರ್ವ ಜನಪ್ರತಿನಿಧಿಯ ಸಿಬ್ಬಂದಿಗಳಿಗೆ ಖಂಡಿತ ಇರುತ್ತದೆ. ಆದರೂ ಹೀಗೆ ನಡುರಸ್ತೆಯಲ್ಲೇ ಸಾರ್ವಜನಿಕವಾಗಿ ಹೊಡೆದಾಟ ಮಾಡಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Published On - 1:07 pm, Fri, 19 March 21